Asianet Suvarna News Asianet Suvarna News

ACB Raids: ಕಟ್ಟಡಗಳಿಂದ ತೆರಿಗೆ ಸಂಗ್ರಹಿಸದ ಬಿಬಿಎಂಪಿಗೆ 500 ಕೋಟಿ ನಷ್ಟ

*   ಕಂಪನಿಗಳು, ಅಪಾರ್ಟ್‌ಮೆಂಟ್‌ಗಳಿಂದ ತೆರಿಗೆ ಸಂಗ್ರಹಿಸದ ಪಾಲಿಕೆ ಅಧಿಕಾರಿಗಳು
*   ಕಳಪೆ ಕಾಮಗಾರಿಗೆ ಹೆಚ್ಚಿನ ಮೊತ್ತದ ಬಿಲ್‌ ಮಂಜೂರು
*   ಸರ್ಕಾರ ನಿಗದಿ ಪಡಿಸಿದ ಮಾನದಂಡಕ್ಕೆ ಅಧಿಕಾರಿಗಳ ತಿಲಾಂಜಲಿ
 

500 Crore Loss to BBMP Not Collect Tax from Buildings in Bengaluru grg
Author
Bengaluru, First Published Mar 1, 2022, 4:12 AM IST

ಬೆಂಗಳೂರು(ಮಾ.01):  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ACB) ಮತ್ತೆ ದಾಳಿ ಮುಂದುವರೆಸಿದ್ದು, ಎರಡನೇ ದಿನದ ಶೋಧನಾ ಕಾರ್ಯದಲ್ಲಿ ಖಾಸಗಿ ವಲಯದಿಂದ ತೆರಿಗೆ ಸಂಗ್ರಹಿಸದೆ ಸರ್ಕಾರಕ್ಕೆ ಸುಮಾರು 500 ಕೋಟಿ ನಷ್ಟವಾಗಿರುವ ಸಂಗತಿಯನ್ನು ಪತ್ತೆ ಹಚ್ಚಿದೆ. ಅಲ್ಲದೆ, ಒಂದೇ ಕಾಮಗಾರಿಗೆ ಎರಡು ಬಿಲ್‌, ಕಾಮಗಾರಿ ನಡೆಸದೆ ಹಣ ಮಂಜೂರು, ಆಸ್ತಿ ಪರಭಾರೆ ಹಾಗೂ ತೆರಿಗೆ ಕಡಿಮೆ ಸೇರಿದಂತೆ ವಿವಿಧ ಮಾರ್ಗದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ಸಿಬ್ಬಂದಿ ಕೋಟ್ಯಂತರ ಮೊತ್ತದ ಹಗರಣ(Scam) ನಡೆಸಿದ್ದಾರೆ ಎಂದು ಎಸಿಬಿ ಮತ್ತೊಮ್ಮೆ ಹೇಳಿದೆ.

ಭ್ರಷ್ಟಾಚಾರ(Corruption) ಆರೋಪ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಲೆ ಶುಕ್ರವಾರ ದಿಢೀರ್‌ ದಾಳಿ ನಡೆಸಿ ಕೋಟ್ಯಂತರ ಮೊತ್ತದ ಹಗರಣಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್‌ ನೀಡಿದ ಎಸಿಬಿ ಅಧಿಕಾರಿಗಳು, ಸೋಮವಾರ ಮತ್ತೆ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ಮಾಡಿ ಮತ್ತಷ್ಟು ಕಡತಗಳನ್ನು ಜಪ್ತಿ ಮಾಡಿದ್ದಾರೆ.

ACB Raids ಕಾಲು ನೋವಿನ ಚಿಕಿತ್ಸೆಗೆ 12000 ರೂ ಲಂಚ ಕೇಳಿದ ಸರ್ಕಾರಿ ವೈದ್ಯ, ಸ್ವೀಕರಿಸುವಾಗ ಎಸಿಬಿ ಬಲೆಗೆ

ಬಿಬಿಎಂಪಿ ಕಂದಾಯ ವಿಭಾಗಗಳ ಕಚೇರಿಯ ಪರಿಶೀಲನೆ ವೇಳೆ ಹಲವು ವರ್ಷಗಳಿಂದ ಬಹುರಾಷ್ಟ್ರೀಯ ಕಂಪನಿಗಳು, ಮಾಲ್‌ಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಂದ ತೆರಿಗೆ ಸಂಗ್ರಹಿಸದೆ ಸುಮಾರು .500 ಕೋಟಿ ಸರ್ಕಾರಕ್ಕೆ ನಷ್ಟವುಂಟು ಮಾಡಿರುವುದು ಪತ್ತೆಯಾಗಿದೆ. ಅಲ್ಲದೆ ಅವುಗಳಿಗೆ ಸರ್ಕಾರವು ನಿಗದಿಪಡಿಸಿದ ಮಾನದಂಡಗಳನ್ನು ಉಲ್ಲಂಘಿಸಿ ಕಡಿಮೆ ತೆರಿಗೆ(Tax) ದರಗಳನ್ನು ನಿಗದಿಪಡಿಸಿ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮಾಲ್‌, ಕಂಪನಿಗಳು, ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಕೂಡಾ ವಿತರಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟಮಾಡಿದ್ದಾರೆ ಎಂದು ಎಸಿಬಿ ತಿಳಿಸಿದೆ.

ಕಾಮಗಾರಿ ನಡೆಸದೆ ಹಣ ಪಡೆದರು!

ಎಂಜಿನಿಯರಿಂಗ್‌ ವಿಭಾಗದಲ್ಲಿ ಒಂದೇ ಕಾಮಗಾರಿ ಹೆಸರಿನಲ್ಲಿ ಹಲವು ಬಿಲ್‌ಗಳು ಮಂಜೂರಾಗಿರುವುದು ಕಂಡು ಬಂದಿದೆ. ಕೆಲವು ಕಡೆಗಳಲ್ಲಿ ಕಾಮಗಾರಿ ನಡೆಸದೆ ಕಾಮಗಾರಿಗಳು ನಡೆದಿದೆ ಎಂದು ಬಿಂಬಿಸಿ ಬಿಲ್‌ಗಳನ್ನು ಮಂಜೂರಾತಿ ಮಾಡಿರುವುದು ಗೊತ್ತಾಗಿದೆ. ನಿಗದಿಪಡಿಸಿರುವ ಗುತ್ತಿಗೆ ಮಾನದಂಡಗಳನ್ನು ಅನುಸರಿಸದೆಯೇ ಕಳಪೆ ಕಾಮಗಾರಿಗಳನ್ನು ನಿರ್ವಹಿಸಿ ಹೆಚ್ಚಿನ ಮೊತ್ತದ ಬಿಲ್ಲುಗಳನ್ನು ಮಂಜೂರಾತಿ ಮಾಡಿರುವುದು ಪರಿಶೀಲನೆಯಲ್ಲಿ ಬಯಲಾಗಿದೆ ಎಂದು ಎಸಿಬಿ ಹೇಳಿದೆ.

ACB Raid: ರೈತನಿಂದ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು

ನಿಯಮಗಳನ್ನು ಗಾಳಿಗೆ ತೂರಿದ ಟಿಡಿಆರ್‌

ಬಿಬಿಎಂಪಿ ಅಥವಾ ಸರ್ಕಾರ ವಿತರಿಸುವ ಡಿಆರ್‌ಸಿಗಳ ಕಡತಗಳನ್ನು ಪರಿಶೀಲಿಸಲಾಯಿತು. ಆಗ ಕೆಲವು ಕಡೆ ಒಂದು ಮಹಡಿ ಇರುವ ಕಟ್ಟಡವನ್ನು 2 ಮತ್ತು 3 ಮಹಡಿ ಕಟ್ಟಡವೆಂದು ಹೇಳಿ ಹೆಚ್ಚು ಮೌಲ್ಯವನ್ನು ನಿಗಪಡಿಸಿ ಅಕ್ರಮವಾಗಿ ಅಧಿಕ ವಿಸ್ತೀರ್ಣದ ಡಿಆರ್‌ಸಿಗಳನ್ನು ವಿತರಿಸಿರುವುದು ಬೆಳಕಿಗೆ ಬಂದಿದೆ. ಹಾಗೆಯೇ ನಿಯಮಗಳನ್ನು ಉಲ್ಲಂಘಿಸಿ ನಿಗದಿಪಡಿಸಿದ ಅಳತೆಗಿಂತಲೂ ಹೆಚ್ಚು ಅಳತೆಗೆ ಸಂಬಂಧಿಸಿದ ದಾಖಲಾತಿಗಳನ್ನು ಅಧಿಕಾರಿಗಳು ಸೃಷ್ಟಿಸಿದ್ದಾರೆ. ಈ ದಾಖಲೆಗಳ ಮೂಲಕ ಹೆಚ್ಚು ಅಳತೆಯಿರುವ ಟಿಡಿಆರ್‌ಗಳನ್ನು ಅಕ್ರಮವಾಗಿ ನೀಡಿ ಸರ್ಕಾರಕ್ಕೆ(Government of Karnataka) ಕೋಟ್ಯಂತರ ರುಪಾಯಿ ನಷ್ಟಮಾಡಿದ್ದಾರೆ. ಇದು ಮಧ್ಯವರ್ತಿಗಳು ಹಾಗೂ ಖಾಸಗಿ ವ್ಯಕ್ತಿಗಳಿಗೆ ಲಾಭವಾಗಿದೆ ಎಂದು ಎಸಿಬಿ ತಿಳಿಸಿದೆ.

ಕಟ್ಟಡ ಮುಂದೆ ಫೋಟೋ ತೆಗೆದು ಹಣ ಗುಳುಂ

ಇನ್ನು ಸ್ವತ್ತಿನ ನಿಜವಾದ ಮಾಲಿಕರಿಂದ ಡಿಆರ್‌ಸಿ(DRC) ಸಂಬಂಧ ಅರ್ಜಿಯನ್ನು ಸ್ವೀಕರಿಸದೆ ಅನರ್ಹವಾದ ವ್ಯಕ್ತಿಗಳಿಗೆ ಡಿಆರ್‌ಸಿಯನ್ನು ವಿತರಣೆ ಮಾಡಿರುವುದು ಕಂಡು ಬಂದಿದೆ. ರಸ್ತೆ ಅಗಲೀಕರಣಕ್ಕೆ ಒಳಪಡದಿರುವ ಬೇರೆ ವ್ಯಕ್ತಿಗಳಿಗೆ ಸೇರಿದ ಕಟ್ಟಡಗಳ ಮುಂಭಾಗ ನಿಂತು ಫೋಟೋಗಳನ್ನು ತೆಗೆದು ಈ ಕಟ್ಟಡಗಳು ರಸ್ತೆ ಅಗಲೀಕರಣಕ್ಕೆ ಒಳಪಡುವುದಾಗಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಅಕ್ರಮವಾಗಿ ಡಿಆರ್‌ಸಿ (ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರ)ಗಳನ್ನು ಅಧಿಕಾರಿಗಳು ಹಂಚಿದ್ದಾರೆ ಎಂದು ಎಸಿಬಿ ತಿಳಿಸಿದೆ.
 

Follow Us:
Download App:
  • android
  • ios