ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ಕೋಟಿ ಕೋಟಿ ಆದಾಯ

ಆದಾಯ ಬರು​ತ್ತಿಲ್ಲ ಎನ್ನುವ ದೂರಿನ ಹಿನ್ನೆ​ಲೆ​ಯಲ್ಲಿ ಜಿಲ್ಲಾ​ಡ​ಳಿ​ತ​ದಿಂದ ಮಾಹಿ​ತಿ| ಕೊಪ್ಪಳ ಜಿಲ್ಲೆಯಲ್ಲಿ ಮರಳು, ಬೆಣಚು ಕಲ್ಲು, ಗ್ರಾನೈಟ್‌ ಸೇರಿ ಇತರೆ ಗಣಿಗಾರಿಕೆಯಿಂದ 2019-20ನೇ ಸಾಲಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸರ್ಕಾರಕ್ಕೆ ವಾರ್ಷಿಕ 50.52 ಕೋಟಿ ರಾಜಸ್ವ| ಜಿಲ್ಲೆಯಲ್ಲಿ ಗುತ್ತಿಗೆ ಪಡೆದ ಗಣಿಗಳಲ್ಲೇ ನಿಯಮ ಉಲ್ಲಂಘನೆ ಮಾಡಿದ ಗುತ್ತಿಗೆದಾರರಿಗೆ ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿ ಬರೋಬ್ಬರಿ 122 ಕೋಟಿ ದಂಡ ವಿಧಿಸಿದೆ|

50 crore Revenue From Mining to the State Government in Koppal District

ಕೊಪ್ಪಳ(ಮೇ.24): ಜಿಲ್ಲಾದ್ಯಂತ ಮರಳು, ಗ್ರಾನೈಟ್‌ ಗಣಿಗಾರಿಕೆ ಸೇರಿದಂತೆ ಅನೇಕ ರೀತಿಯ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ರೀತಿಯಲ್ಲಿ ಆದಾಯ ಬರುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದ ಬೆನ್ನಲ್ಲೇ ಜಿಲ್ಲಾಡಳಿತ ಗಣಿಗಾರಿಕೆಯಿಂದ ರಾಜಸ್ವ ಸಂಗ್ರಹವಾಗಿರುವ ಮಾಹಿತಿಯನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆಯಾಗಿತ್ತು. ಹೀಗಾಗಿ, ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಾಹಿತಿಗೆ ಮಹತ್ವ ಬಂದಿದೆ.

ಗಂಗಾವತಿ: ಹಳೆ ಟ್ಯಾಂಕ್‌ಗೆ ಬಣ್ಣ ಬಳಿದು ಲಕ್ಷಾಂತರ ರೂ. ಗುಳುಂ, ಗುತ್ತಿಗೆದಾರ ನಾಪತ್ತೆ..!

ಜಿಲ್ಲೆಯಲ್ಲಿ ಮರಳು, ಬೆಣಚು ಕಲ್ಲು, ಗ್ರಾನೈಟ್‌ ಸೇರಿ ಇತರೆ ಗಣಿಗಾರಿಕೆಯಿಂದ 2019-20ನೇ ಸಾಲಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸರ್ಕಾರಕ್ಕೆ ವಾರ್ಷಿಕ 50.52 ಕೋಟಿ ರಾಜಸ್ವ ಬಂದಿದೆ. ಇನ್ನು ಜಿಲ್ಲೆಯಲ್ಲಿ ಗುತ್ತಿಗೆ ಪಡೆದ ಗಣಿಗಳಲ್ಲೇ ನಿಯಮ ಉಲ್ಲಂಘನೆ ಮಾಡಿದ ಗುತ್ತಿಗೆದಾರರಿಗೆ ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿ ಬರೋಬ್ಬರಿ . 122 ಕೋಟಿ ದಂಡ ವಿಧಿಸಿದೆ. ಸರ್ಕಾರ ಶೇ. 25 ರಷ್ಟು ದಂಡ ವಸೂಲಿ ಮಾಡುವಂತೆಯೂ ನಿರ್ದೇಶನ ನೀಡಿದೆ.

ಜಿಲ್ಲೆಯಲ್ಲಿ ಮರಂ, ಮರಳು ಸೇರಿ ಗ್ರಾನೈಟ್‌ ಸೇರಿ ಗಣಿ ಉದ್ಯಮ ಜೋರಾಗಿಯೇ ನಡೆದು ಬಂದಿದೆ. ಉದ್ಯಮದ ಹಿಂದೆ ಅಕ್ರಮ ದಂಧೆಯೂ ಜೋರಾಗಿಯೇ ಇದೆ. ಇದಕ್ಕೆ ಜಿಲ್ಲಾಡಳಿತ ನಾನಾ ಹಂತದಲ್ಲಿ ಬ್ರೇಕ್‌ ಹಾಕುತ್ತಿರುವುದಲ್ಲದೇ, ದಂಡ, ಕೇಸ್‌ ಹಾಕಿ ಬಿಸಿ ಮುಟ್ಟಿಸುತ್ತಿದೆ.

ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 2019ರ ಏ. 1ರಿಂದ 2020 ಮಾ. 20ರ ವರೆಗೂ ಗ್ರಾನೈಟ್‌ನಿಂದ . 31.50 ಕೋಟಿ ರಾಜಸ್ವ ಬಂದಿದ್ದರೆ, ಕಟ್ಟಡ ಕಲ್ಲಿನಿಂದ 14 ಕೋಟಿ, ಮರಂನಿಂದ 1.44 ಕೋಟಿ, ಮರಳಿನಿಂದ 2.14 ಕೋಟಿ, ಬೆಣಚುಕಲ್ಲಿನಿಂದ 0.65 ಕೋಟಿ, ಕಬ್ಬಿಣದ ಅದಿರಿನಿಂದ 0.75 ಕೋಟಿ ಸೇರಿ ಒಟ್ಟು 50.52 ಕೋಟಿ ರಾಜಸ್ವ ಸಂಗ್ರಹವಾಗಿದೆ. ಇನ್ನೂ 2020ರ ಏ. 1 ರಿಂದ ಮೇ 20ರ ವರೆಗೂ ಎಲ್ಲ ಸೇರಿ 2.34 ಕೋಟಿ ರಾಜಧನ ಸಂಗ್ರಹವಾಗಿದೆ.

122 ಕೋಟಿ ದಂಡ:

ನಿಯಮ ಉಲ್ಲಂಘನೆ ಮಾಡಿ ಕಲ್ಲು ಗಣಿಗಾರಿಕೆ ನಡೆ​ಸಿ​ದ ಕುರಿತಂತೆ ಬರೋಬ್ಬರಿ . 122 ಕೋಟಿ ದಂಡವನ್ನು ಜಿಲ್ಲಾಡಳಿತ ಜಡಿದಿದೆ. ಆದರೆ, ಇದರ ವಸೂಲಾತಿ ಅಷ್ಟಾಗಿ ನಡೆಯುತ್ತಿಲ್ಲ. ಜಿಲ್ಲಾಡಳಿತ ಸರ್ವೆ ನಡೆಸಿದ್ದು, ಕಲ್ಲು ಉಪ ಖನಿಜಕ್ಕೆ ರಾಜಧನದ 5 ಪಟ್ಟು ದಂಡ ವಿಧಿಸಿದೆ. ಚಾಲ್ತಿ ಗುತ್ತಿಗೆಗಳು-26, ಅವಧಿ ಮುಗಿದ ಗುತ್ತಿಗೆಗಳು-15 ಸೇರಿ ಒಟ್ಟು 41 ಗುತ್ತಿಗೆಗಳಿಗೆ ಕ್ರಮವಾಗಿ 83.73 ಕೋಟಿ, 39.14 ಕೋಟಿ ಸೇರಿದಂತೆ ಒಟ್ಟು 122.87 ಕೋಟಿ ಗುತ್ತಿಗೆ ನಡೆಸುವ ಉದ್ಯಮಿಗಳಿಗೆ ದೊಡ್ಡ ಮೊತ್ತದ ದಂಡ ವಿಧಿಸಿವೆ. ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶನಾಲಯದ ಸೂಚನೆಯಂತೆ ದಂಡದಲ್ಲಿ ಶೇ. 25 ರಷ್ಟು ಪಾವತಿಗೆ ಕ್ರಮ ವಹಿಸಿದ್ದಾರೆ.
 

Latest Videos
Follow Us:
Download App:
  • android
  • ios