ಬೆಂಗಳೂರು(ಜ.26): ರಾಜ್ಯ ಕೃಷಿ ಮಾರಾಟ ಮಂಡಳಿಯ ನಿಶ್ಚಿತ ಠೇವಣಿ (ಎಫ್‌ಡಿ) ಹಣ ವಂಚಿಸಿರುವ ಆರೋಪದ ಮೇಲೆ ಸಿಂಡಿಕೇಟ್‌ ಬ್ಯಾಂಕ್‌ ಉತ್ತರಹಳ್ಳಿ ಶಾಖೆಯ ವ್ಯವಸ್ಥಾಪಕ ನಿರ್ದೇಶಕ ಸೇರಿ ಮೂವರ ವಿರುದ್ಧ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಅವರು ಕೊಟ್ಟ ದೂರಿನ ಮೇರೆಗೆ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಂಡಳಿಯ ಆವರ್ತ ನಿಧಿಯಿಂದ ನಿಶ್ಚಿತ ಠೇವಣಿ (ಎಫ್‌ಡಿ) ಇಡುವ ಸಲುವಾಗಿ ಬ್ಯಾಂಕ್‌ಗಳಿಂದ ಕೊಟೇಷನ್‌ ಕೇಳಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಸಿಂಡಿಕೇಟ್‌ ಬ್ಯಾಂಕ್‌ ಉತ್ತರಹಳ್ಳಿ ಶಾಖೆಯು ಎಫ್‌ಡಿ ಹೂಡಿಕೆಗೆ ಹೆಚ್ಚು ಬಡ್ಡಿ ಕೊಡುವುದಾಗಿ ತಿಳಿಸಿತ್ತು. ರಾಜ್ಯ ಕೃಷಿ ಮಾರಾಟ ಮಂಡಳಿ ಆವರ್ತನಿಧಿ ಇರುವ ರಾಜಾಜಿನಗರ ಶಾಖೆಯ ಆಂಧ್ರ ಬ್ಯಾಂಕಿನಿಂದ ಆರ್‌ಟಿಜಿಎಸ್‌ ಮೂಲಕ 100 ಕೋಟಿಯನ್ನು ಸಿಂಡಿಕೇಟ್‌ ಬ್ಯಾಂಕಿಗೆ ವರ್ಗಾವಣೆ ಮಾಡಲಾಗಿತ್ತು. ತಲಾ 50 ಕೋಟಿಯಂತೆ 2 ನಿಶ್ಚಿತ ಠೇವಣಿಯನ್ನು ಇಡಲಾಗಿತ್ತು. ಬಳಿಕ ಜ.20ರಂದು ಬ್ಯಾಂಕಿಗೆ ಭೇಟಿ ನೀಡಿ ವಿಚಾರಿಸಿದಾಗ 50 ಕೋಟಿ ಎಫ್‌ಡಿ ಹೂಡಿಕೆಗೆ ದಾಖಲಾತಿಗಳನ್ನು ಕೊಟ್ಟಿದ್ದಾರೆ. 

ಈ ಮೊದಲು ಬ್ಯಾಂಕ್‌ ಸಿಬ್ಬಂದಿ ಕೊಟ್ಟಿದ್ದ ಎಫ್‌ಡಿ ಹೂಡಿಕೆ ಎರಡು ಪ್ರತ್ಯೇಕ ಸಂಖ್ಯೆಗಳನ್ನು ಕೊಟ್ಟು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಉಳಿದ 50 ಕೋಟಿಗೆ ಲೆಕ್ಕ ಕೊಡುತ್ತಿಲ್ಲ. ಬೇರೆ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.