ಕೊಪ್ಪ(ಜು.07): ಕೊರೋನಾ ವೈರಸ್‌ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪ ಸಾರ್ವಜನಿಕ ಆಸ್ಪತ್ರೆಯನ್ನು 50 ಹಾಸಿಗೆಯುಳ್ಳ ಪ್ರತ್ಯೇಕ ಕೋವಿಡ್‌ ವಿಭಾಗವನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಮಹೇಂದ್ರ ಕಿರಿಟಿ ತಿಳಿಸಿದ್ದಾರೆ.

ತಾಪಂ ಸಭಾಂಗಣದಲ್ಲಿ ಸೋಮವಾರ ತಾಪಂ ಅಧ್ಯಕ್ಷೆ ಜಯಂತಿ ನಾಗರಾಜ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಕೊಪ್ಪ ಸರ್ಕಾರಿ ಆಸ್ಪತ್ರೆ ನೂರು ಹಾಸಿಗೆಯ ಸಾಮರ್ಥ್ಯವುಳ್ಳ ಆಸ್ಪತ್ರೆಯಾಗಿದ್ದು, ಅದರಲ್ಲಿ ಐವತ್ತು ಹಾಸಿಗೆ ಉಪಯೋಗಿಸಿಕೊಂಡು ಕೋವಿಡ್‌ ಆಸ್ಪತ್ರೆಯನ್ನಾಗಿ ನಿರ್ಮಿಸಲಾಗುತ್ತದೆ. ಅದರಲ್ಲಿ ಮೂವತ್ತು ಹಾಸಿಗೆಗಳಿಗೆ ಆಮ್ಲಜನಕ ಸರಬರಾಜು ಲೈನ್‌ ಅಳವಡಿಸಲಾಗುತ್ತದೆ. ಆಸ್ಪತ್ರೆಯ ಪ್ರದೇಶಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧ ಮಾಡಲಾಗುತ್ತದೆ. ಶೀಘ್ರದಲ್ಲಿಯೇ ಕೋವಿಡ್‌ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ಸಮೀಕ್ಷೆಗೆ ಸ್ಥಳಕ್ಕೆ ತೆರಳದೆ ಮಾಹಿತಿ ನೀಡುತ್ತಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಹಾಗೂ ಪಹಣಿಯಲ್ಲಿ ಒಂದು ಬೆಳೆಯ ಬದಲಿಗೆ ಇನ್ನೊಂದು ಬೆಳೆಯನ್ನು ನಮೂದು ಮಾಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳು ಕಚೇರಿಯಲ್ಲಿಯೇ ಕುಳಿತು ವರದಿ ಮಾಡುವುದರಿಂದ ಇಂತಹ ಲೋಪವಾಗುತ್ತಿದೆ ಎಂದು ತಾಪಂ ಅಧ್ಯಕ್ಷೆ ಜಯಂತಿ ನಾಗರಾಜ್‌ ಮಾಡಿದ ಆರೋಪವನ್ನು ಕಂದಾಯ ಇಲಾಖೆಯ ಶಿರಸ್ತೇದಾರ್‌ ಶೇಷಮೂರ್ತಿ ಅಲ್ಲಗೆಳೆದಿದ್ದು, ಬೆಳೆ ಸಮೀಕ್ಷೆ ಹಾಗೂ ಪಹಣಿಗೆ ಜಮೀನುಗಳಿಗೆ ಭೇಟಿ ನೀಡಿ ವರದಿ ಮಾಡಬೇಕು. ಮೊಬೈಲ್‌ನಲ್ಲಿ ಜಿಪಿಎಸ್‌ ಮಾಡಲು ಇರುತ್ತದೆ. ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳು ಖುದ್ದು ಸ್ಥಳಗಳಿಗೆ ಭೇಟಿ ನೀಡಿ ವರದಿ ಮಾಡಿರುತ್ತಾರೆ ಎಂದು ಸಭೆಗೆ ತಿಳಿಸಿದರು.

ಬೆಂಗಳೂರಿಗರೇ ಈ ಗ್ರಾಮಗಳಿಗೆ ನಿಮಗೆ ಪ್ರವೇಶವಿಲ್ಲ..!

94ಸಿ ಹಕ್ಕುಪತ್ರವನ್ನು ವಿತರಿಸಲು ವಿಳಂಭವಾಗುತ್ತಿದೆ ಏಕೆ? ಕಳೆದ ಬಾರಿ ಸ್ಥಿರೀಕರಣವಾದ 53 ಸಾಗುವಾಳಿ ಚೀಟಿಯನ್ನು ಇನ್ನೂ ಯಾಕೆ ನೀಡಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸುಧಾಕರ್‌ ಸಭೆಯಲ್ಲಿ ಪ್ರಶ್ನಿಸಿದರು. 94ಸಿ ಹಕ್ಕು ಪತ್ರವನ್ನು ವಿತರಿಸಲಾಗುತ್ತಿದೆ. ಗೋಮಾಳ ಜಾಗದಲ್ಲಿ ಸೆಕ್ಷನ್‌ 04 ಇರುವಂತಹ ಪ್ರದೇಶಗಳಿಗೆ ಹಕ್ಕುಪತ್ರ ನೀಡಲು ಆಗುತ್ತಿಲ್ಲ. ಸೊಪ್ಪಿನಬೆಟ್ಟದಲ್ಲಿ ವಾಸವಿರುವವರಿಗೆ ಹಕ್ಕುಪತ್ರವನ್ನು ನೀಡಲು ಆವಕಾಶವಿಲ್ಲ. 53ರಡಿಯಲ್ಲಿ ವಿತರಣೆ ಬಾಕಿ ಇರುವ ಹಕ್ಕುಪತ್ರವನ್ನು ಸಿದ್ಧಪಡಿಸಿದ್ದೇವೆ. ಶೀಘ್ರದಲ್ಲೇ ಫಲಾನುಭವಿಗಳಿಗೆ ನೀಡುತ್ತೇವೆ ಶಿರಸ್ತೇದಾರ್‌ ಶೇಷಮೂರ್ತಿ ತಿಳಿಸಿದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಜೆ.ಎಸ್‌.ಲಲಿತಾ, ಸದಸ್ಯರಾದ ಎನ್‌.ಕೆ.ಉದಯ್‌, ಕಿರಣ್‌ ಮಡಬಳ್ಳಿ, ಪ್ರವೀಣ್‌, ಮಧುರ ಶಾಂತಪ್ಪ, ಇಂದಿರಾ ಉಮೇಶ್‌, ಭಾವನಿ ಹೆಬ್ಬಾರ್‌, ಮಂಜುಳ ಮಂಜುನಾಥ್‌ ಮತ್ತಿತರರಿದ್ದರು.