ಮಂಗಳೂರು(ಸೆ.29): ವಿವಿಧ ಮಾನದಂಡಗಳ ಆಧಾರದಲ್ಲಿ ರಾಜ್ಯದಲ್ಲಿ ಅತ್ಯುತ್ತಮ ಉತ್ತಮ ಸಾಧನೆ ಮಾಡಿರುವ ಗ್ರಾಮ ಪಂಚಾಯ್ತಿಗಳಿಗೆ ಪ್ರತಿವರ್ಷ ನೀಡುವ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ 2018-19ನೇ ಸಾಲಿನಲ್ಲಿ ದ.ಕ. ಜಿಲ್ಲೆಯ ಐದು ಗ್ರಾಪಂಗಳು ಆಯ್ಕೆಯಾಗಿವೆ.

ಮಂಗಳೂರು ತಾಲೂಕಿನ ಕಲ್ಲಮುಂಡ್ಕೂರು ಗ್ರಾಪಂ, ಬಂಟ್ವಾಳದಿಂದ ವಿಟ್ಲ, ಪಡ್ನೂರು, ಪುತ್ತೂರು ತಾಲೂಕಿನ ಕುಟ್ರುಪ್ಪಾಡಿ, ಬೆಳ್ತಂಗಡಿಯಿಂದ ಮಡಂತ್ಯಾರು ಹಾಗೂ ಸುಳ್ಯದಿಂದ ಕಲ್ಮಡ್ಕ ಗ್ರಾ.ಪಂ.ಗಳು ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ತಲಾ 5 ಲಕ್ಷ ರು. ಪ್ರೋತ್ಸಾಹಧನ ಪಡೆಯಲಿವೆ. ಈ ಗ್ರಾಪಂ ಗಳಲ್ಲಿ ಪುತ್ತೂರಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯ್ತಿಗೆ ಸತತ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರದ ಗರಿ ಸಿಕ್ಕಿರುವುದು ವಿಶೇಷ.

ಹೆಚ್ಚು ಅಂಕ ಗಳಿಸಿದ ಗ್ರಾಮಕ್ಕೆ ಪ್ರಶಸ್ತಿ:

ಈ ಗಾಂಧಿ ಗ್ರಾಮ ಪುರಸ್ಕಾರ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯಕ್ರಮವಾಗಿದ್ದು, ತೆರಿಗೆ ವಸೂಲಿ, 14ನೇ ಹಣಕಾಸು ಆಯೋಗದ ಅನುದಾನ ಬಳಕೆ, ಶೇ.25, ಶೇ.5, ಶೇ.2ರ ನಿಧಿ ಬಳಕೆ ಇತ್ಯಾದಿ ಮಾನದಂಡಗಳ ಆಧಾರದ ಮೇಲೆ ಅತಿ ಹೆಚ್ಚು ಅಂಕ ಗಳಿಸಿದ ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರೊಂದಿಗೆ ನೀರು ಪೂರೈಕೆ, ಯೋಜನೆಗಳ ಸಮರ್ಪಕ ಅನುಷ್ಠಾನ, ದಾರಿದೀಪಗಳ ಅಳವಡಿಕೆ, ಆಡಳಿತ ವ್ಯವಸ್ಥೆಗಳನ್ನೂ ಪರಿಗಣಿಸಲಾಗುತ್ತದೆ. ಹೆಚ್ಚು ಅಂಕ ಗಳಿಸಿದ ಗ್ರಾಮ ಪಂಚಾಯ್ತಿಗಳು ಪುರಸ್ಕಾರಕ್ಕೆ ಅರ್ಹತೆ ಪಡೆಯುತ್ತವೆ.

ದಕ್ಷಿಣ ಕನ್ನಡದ ಒಟ್ಟು 230 ಗ್ರಾಮ ಪಂಚಾಯ್ತಿಗಳ ಪೈಕಿ ಪುರಸ್ಕಾರ ಐದು ಪಂಚಾಯ್ತಿಗಳ ಪಾಲಾಗಿದೆ. ಅ.2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಗಾಂಧಿ ಜಯಂತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ತಾಲೂಕಿಗೊಂದು ಆಯ್ಕೆ:

ಈ ಕಾರ್ಯಕ್ರಮ 2013-14ರಿಂದ ಈ ಕಾರ್ಯಕ್ರಮ ಆರಂಭ ಮಾಡಲಾಗಿತ್ತು. ಪ್ರತಿ ತಾಲೂಕಿನಲ್ಲಿ ವಿಶೇಷ ಸಾಧನೆ ಮಾಡಿದ ಒಂದು ಗ್ರಾ.ಪಂ.ಗೆ ತಲಾ 5 ಲಕ್ಷ ರು. ವಿಶೇಷ ಪ್ರೋತ್ಸಾಹ ಧನ ನೀಡಲಾಗುತ್ತದೆ. ರಾಜ್ಯಾಡಳಿತದ ಕೆಳಸ್ತರದ ಪಂಚಾಯ್ತಿ ವ್ಯವಸ್ಥೆಯನ್ನು ಬಲಪಡಿಸಿ ಪ್ರೋತ್ಸಾಹಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ:

ಪಂಚತಂತ್ರ ತಂತ್ರಾಂಶದದಲ್ಲಿ ನಿಗದಿಪಡಿಸಲಾದ ಪ್ರಶ್ನಾವಳಿಗೆ ಸ್ಪರ್ಧೆ ಬಯಸುವ ಗ್ರಾಪಂಗಳು ಉತ್ತರಿಸಬೇಕು. ಆಯ್ಕೆಗೆ ಒಟ್ಟು 150 ಅಂಕಗಳು. ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಗ್ರಾಮ ಪಂಚಾಯ್ತಿಯು ಪಂಚತಂತ್ರದಲ್ಲಿ ಉತ್ತರಿಸಿರುವ ಅಂಶಗಳನ್ನು ಆಧರಿಸಿಕೊಂಡು ದಾಖಲಾತಿಗಳನ್ನು ಪರಿಶೀಲನೆ ಮಾಡಿ ತಾಲೂಕು ಅಧಿಕಾರಿಗಳು ಜಿಲ್ಲಾ ಪಂಚಾಯ್ತಿಗೆ ವರದಿ ನೀಡುತ್ತಾರೆ. ಅದರ ಆಧಾರದಲ್ಲಿ ಸರ್ಕಾರ ಆಯ್ಕೆಯನ್ನು ಘೋಷಿಸುತ್ತದೆ.

‘‘ಈ ಹಿಂದೆ ಪಂಚತಂತ್ರದಲ್ಲಿ ಮೂರು ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಿ ಜಿ.ಪಂ.ಗೆ ಕಳುಹಿಸಲಾಗುತ್ತಿತ್ತು. ಆದರೆ ಈ ಬಾರಿ ಎರಡನ್ನು ಜಾಸ್ತಿ ಮಾಡುವಂತೆ ಮನವಿ ಮಾಡಿದ್ದರಿಂದ ಪ್ರತಿ ತಾಲೂಕಿಗೆ ಐದು ಗ್ರಾ.ಪಂ.ಗಳನ್ನು ಆಯ್ಕೆ ಮಾಡಿ ಜಿ.ಪಂ.ಗೆ ಕಳುಹಿಸಲಾಗಿದೆ. ಅದನ್ನು ಪರಿಶೀಲನೆ ಮಾಡಿದ ನಂತರ ಒಂದು ಆಯ್ಕೆ ಮಾಡಿ ವರದಿಯನ್ನು ಇಲಾಖೆಗೆ ಕಳುಹಿಸಿಕೊಡಲಾಗಿತ್ತು’’ ಎಂದು ಜಿಪಂ ಸಿಇಒ ಡಾ.ಸೆಲ್ವಮಣಿ ಹೇಳುತ್ತಾರೆ.

ಪ್ರಶಸ್ತಿ ಮೊತ್ತ ಏನು ಮಾಡೋದು?

ಪ್ರಶಸ್ತಿಯ 5 ಲಕ್ಷ ರು. ಪ್ರೋತ್ಸಾಹಧನದಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಸರ್ಕಾರಿ ಶಾಲೆಗೆ ಆಟದ ಮೈದಾನ, ಸೋಲಾರ್‌ ದೀಪ ಅಳವಡಿಕೆ, ಗ್ರಾಮೀಣ ಗೌರವ ಯೋಜನೆ ಸೇರಿದಂತೆ ಹತ್ತಾರು ಮೂಲಭೂತ ಸವಲತ್ತುಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ.