Asianet Suvarna News Asianet Suvarna News

ಸಣ್ಣ ಹೊಳೆ ಸಾವಿರಾರು ದೇವರ ಮೀನುಗಳು... ಹಿಡಿದರೆ ಸಂಕಷ್ಟ ಖಚಿತ

  •   ಸಣ್ಣ ಹೊಳೆ ಸಾವಿರಾರು ಮೀನುಗಳು... ಹಿಡಿದರೆ ಸಂಕಷ್ಟ ಖಚಿತ. ಇದು ದೇವರ ಮೀನುಗಳು ಎಂಬುದು ಗ್ರಾಮಸ್ಥರ ನಂಬಿಕೆ.
  • ಇದರಿಂದಲೇ ಈ ಮೀನುಗಳನ್ನು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ ಗ್ರಾಮಸ್ಥರು. 
5 thousand Fine for catch God fish in kodagu muvattoklu snr
Author
Bengaluru, First Published Sep 3, 2021, 2:20 PM IST

ವರದಿ : ವಿಘ್ನೇಶ್‌ ಎಂ. ಭೂತನಕಾಡು

 ಮಡಿಕೇರಿ (ಸೆ.03):  ಸಣ್ಣ ಹೊಳೆ ಸಾವಿರಾರು ಮೀನುಗಳು... ಹಿಡಿದರೆ ಸಂಕಷ್ಟ ಖಚಿತ. ಇದು ದೇವರ ಮೀನುಗಳು ಎಂಬುದು ಗ್ರಾಮಸ್ಥರ ನಂಬಿಕೆ. ಇದರಿಂದಲೇ ಈ ಮೀನುಗಳನ್ನು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ ಗ್ರಾಮಸ್ಥರು.

ಹೌದು, ಇದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂವತ್ತೋಕ್ಲು ಗ್ರಾಮದಲ್ಲಿರುವ ದೇವರ ಮೀನುಗಳ ವಿಶೇಷತೆ.

ಮೂವತ್ತೋಕ್ಲುವಿನಲ್ಲಿ ಭದ್ರಕಾಳಿ ದೇವಾಲಯವಿದ್ದು, ಈ ವ್ಯಾಪ್ತಿಯಲ್ಲಿ ಹರಿಯುವ ಹೊಳೆಯಲ್ಲಿ ಸಾವಿರಾರು ಮೀನುಗಳಿವೆ. ಇದನ್ನು ಮೀನುಕೊಲ್ಲಿ ಎಂದು ಕೂಡ ಕರೆಯುತ್ತಾರೆ. ಹಲವಾರು ವರ್ಷಗಳಿಂದ ಹೊಳೆಯಲ್ಲಿ ಮೀನು ಇರುವ ಹಿನ್ನೆಲೆಯಲ್ಲಿ ಇದನ್ನು ದೇವರ ಮೀನು ಎಂದು ಕರೆಯಲಾಗುತ್ತದೆ. ಅಲ್ಲದೆ ಇದನ್ನು ಗ್ರಾಮಸ್ಥರು ಹಿಡಿಯದೆ ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ.

ದೇವರ ಮೀನು ‘ಕೂಲ್‌’ ಮಾಡಲು ಚಿಮ್ಮುತ್ತಿದೆ ಕಾರಂಜಿ

ಮಾದಾಪುರದಿಂದ ಕೋಟೆಬೆಟ್ಟಕ್ಕೆ ತೆರಳುವ ಮಾರ್ಗವಾಗಿರುವುದರಿಂದ ಇಲ್ಲಿಗೆ ಮೀನನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದು, ಮೀನನ್ನು ಯಾರೂ ಹಿಡಿಯದಂತೆ ಗ್ರಾಮಸ್ಥರು ಸೂಚನಾ ಫಲಕ ಹಾಕಿದ್ದಾರೆ. ಹೊಳೆಯಲ್ಲಿರುವ ಮೀನುಗಳಿಗೆ ಆಹಾರ ಹಾಕಿ ಪ್ರವಾಸಿಗರು ಸಂಭ್ರಮಿಸುತ್ತಾರೆ.

ಮೀನು ಹಿಡಿದರೆ ಅಪಾಯ: ಇಲ್ಲಿನ ಹೊಳೆಯ ಮೀನುಗಳನ್ನು ಗ್ರಾಮಸ್ಥರು ದೇವರ ಮೀನೆಂದು ನಂಬಿಕೊಂಡು ಬಂದಿದ್ದಾರೆ. ಆದ್ದರಿಂದ ಮೀನನ್ನು ಯಾರೂ ಹಿಡಿಯುವಂತಿಲ್ಲ. ಈಗಾಗಲೇ ಇಲ್ಲಿ ಮೀನು ಹಿಡಿದವರು ಹಲವು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರಿಂದ ಈ ಬಗ್ಗೆ ತಿಳಿದವರು ಮೀನು ಹಿಡಿಯುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಇದರಿಂದಲೇ ಇಂತಹ ಮೀನುಗಳನ್ನು ಗ್ರಾಮಸ್ಥರು ಹಿಡಿಯದೆ ಅದನ್ನು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ.

ಮತ್ತೆ ಅದೇ ಸ್ಥಳಕ್ಕೆ ಬರುತ್ತವೆ: ಮೂವತ್ತೋಕ್ಲುವಿನ ಸಣ್ಣ ಹೊಳೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಹೊಳೆಯಲ್ಲಿ ನೀರು ಹೆಚ್ಚಾಗಿ ಮೀನುಗಳು ಒಂದು ಕಡೆಗೆ ಹೋದರೂ ನೀರು ಕಡಿಮೆಯಾಗುತ್ತಿದ್ದಂತೆ ಮತ್ತೆ ಅದೇ ಸ್ಥಳಕ್ಕೆ ಬಂದು ಗುಂಪಾಗಿ ನೆಲೆಸುತ್ತಿದೆ.

ಮೀನು ಹಿಡಿದರೆ ದಂಡ: ಹೊಳೆಯಲ್ಲಿರುವ ದೇವರ ಮೀನುಗಳನ್ನು ಹಿಡಿದರೆ ಗ್ರಾಮಸ್ಥರು ಇದಕ್ಕೆ 5 ಸಾವಿರ ರುಪಾಯಿ ದಂಡ ವಿಧಿಸುತ್ತಾರೆ. ಇತ್ತೀಚೆಗೆ ಶಿವಮೊಗ್ಗದಿಂದ ಪ್ರವಾಸಿಗರೊಬ್ಬರು ಮೀನು ಹಿಡಿದಿದ್ದರು. ಅವರಿಂದ ಗ್ರಾಮಸ್ಥರು ದಂಡವನ್ನು ಕಟ್ಟಿಸಿಕೊಂಡಿದ್ದಾರೆ. ಗೊತ್ತಿಲ್ಲದೆ ಬಂದು ಕೆಲವರು ಮೀನು ಹಿಡಿಯುತ್ತಿದ್ದು, ಅವರಿಗೆ ಗ್ರಾಮಸ್ಥರು ತಕ್ಕ ಪಾಠ ಕಲಿಸುತ್ತಿದ್ದಾರೆ. ಹೊಳೆಯಲ್ಲಿ ನೀರು ನಾಯಿಗಳ ಕಾಟ ಹೆಚ್ಚಾಗಿದ್ದು, ಮೀನುಗಳನ್ನು ಹಿಡಿದು ತಿನ್ನುತ್ತಿದೆ. ಇದರಿಂದ ಮೀನುಗಳ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ನಮ್ಮ ಅಜ್ಜನ ಕಾಲದಿಂದಲೇ ಇಲ್ಲಿ ಮೀನುಗಳಿದೆ. ಮೀನುಕೊಲ್ಲಿಯಲ್ಲಿ ಸಾವಿರಾರು ಮೀನುಗಳಿದ್ದು, ಇದು ದೇವರ ಮೀನುಗಳು. ಇದನ್ನು ಯಾರೂ ಹಿಡಿಯುವಂತಿಲ್ಲ. ಮೀನು ಹಿಡಿದವರು ಈಗಾಗಲೇ ಸಂಕಷ್ಟಅನುಭವಿಸಿರುವ ಉದಾಹರಣೆಯೂ ಇದೆ. ಮೀನನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

Follow Us:
Download App:
  • android
  • ios