ಬೆಂಗಳೂರು [ಸೆ.10]:  ಆ ಐವರು ಕಂದಮ್ಮಗಳ ಮೊಗದಲ್ಲಿ ನವ್ಯ ಲೋಕಕ್ಕೆ ಅಡಿಯಿಟ್ಟಬೆರುಗಿನ ಮುಗ್ಧತೆ. ತಮ್ಮ ನೆಚ್ಚಿನ ಚಲನಚಿತ್ರ ನಟ ತೊಟ್ಟಿದ್ದ ಖಾಕಿ ದಿರಿಸಿನಲ್ಲಿ ಸಂಭ್ರಮಿಸಿದ ಗಳಿಗೆ. ಈ ಸಡಗರಕ್ಕೆ ಸಾಕ್ಷಿಯಾದವರ ಭಾವದಲ್ಲಿ ಮಕ್ಕಳ ನಲಿವು ಕಿತ್ತುಕೊಳ್ಳಲು ಹೊಂಚು ಹಾಕುತ್ತಿರುವ ಜವರಾಯನ ಕ್ರೂರತೆಯ ಭೀತಿಯ ಗೆರೆಗಳು...!

ಇವು ಅನಾರೋಗ್ಯ ಪೀಡಿತ ಐವರು ಮಕ್ಕಳು ಸೋಮವಾರ ಕೆಲ ಕ್ಷಣಗಳ ಕಾಲ ರಾಜಧಾನಿ ಬೆಂಗಳೂರಿನ ಖಾಕಿ ಪಡೆಯ ದಂಡನಾಯಕರಾಗಿ ಅಧಿಕಾರ ನಡೆಸಿದ ಸನ್ನಿವೇಶದಲ್ಲಿ ಕಂಡು ಬಂದ ಮನಮಿಡಿಯುವ ದೃಶ್ಯಗಳು. ಇಂತಹದೊಂದು ಭಾವಪೂರ್ವಕ ಕಾರ್ಯಕ್ರಮಕ್ಕೆ ಬೆಂಗಳೂರು ಆಯುಕ್ತರ ಕಚೇರಿ ಸಾಕ್ಷಿಯಾಯಿತು.

ಮೇಕ್‌ ಎ ವಿಶ್‌ ಇಂಡಿಯಾ ಫೌಂಡೇಷನ್‌ ನಗರ ಪೊಲೀಸ್‌ ಆಯುಕ್ತರ ನೆರವು ಪಡೆದು, ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ ಐವರು ಮಕ್ಕಳಿಗೆ ಕೆಲ ಗಂಟೆಗಳ ಮಟ್ಟಿಗೆ ಆಯುಕ್ತರಾಗಿ ಅಧಿಕಾರ ಕೊಟ್ಟು, ಆ ಮಕ್ಕಳಲ್ಲಿ ನವೋಲ್ಲಾಸ ಮೂಡಿಸುವ ಕಾರ್ಯಕ್ರಮ ಆಯೋಜಿಸಿತ್ತು.

ವಿಜಯಪುರದ 6ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್‌ ಶಾಹೀದ್‌, ಹಾಸನದ ರುತನ್‌ ಕುಮಾರ್‌(8), ನೀಲಸಂದ್ರದ ಅರ್ಪದ್‌ ಪಾಷಾ(8), ಆಂಧ್ರಪ್ರದೇಶದ ಶ್ರಾವಣಿ ಬಟಲಾ (8), ಹಾಗೂ ಸೈಯದ್‌ ಇಮಾ (4) ಕಿರಿಯ ಆಯುಕ್ತಾರಿ ತಮ್ಮ ಆಸೆ ನೆರವೇರಿಸಿಕೊಂಡರು.

ನಗರದ ಆಯುಕ್ತರ ಕಚೇರಿಗೆ ಬೆಳಗ್ಗೆ 10.45ಕ್ಕೆ ಕಾರಿನಲ್ಲಿ ಬಂದಿಳಿದ ಮಕ್ಕಳನ್ನು ಖುದ್ದು ಆಯುಕ್ತ ಭಾಸ್ಕರ್‌ ರಾವ್‌ ಅವರೇ ಹೂಗುಚ್ಛ ನೀಡಿ ಬರಮಾಡಿಕೊಂಡರು. ಬಳಿಕ ಅವರಿಗೆ ‘ಪೊಲೀಸ್‌ ಕಮೀಷನರ್‌’ ಬ್ಯಾಡ್ಜ್‌ ತೊಡಿಸಿದರು. ಸಂಪ್ರದಾಯದಂತೆ ಹೊಸ ಪುಟಾಣಿ ಆಯುಕ್ತರನ್ನು ಆಯುಕ್ತರ ಕಚೇರಿಯ ಮುಂಭಾಗದ ಧ್ವಜ ಸ್ತಂಭದ ಮುಂದೆ ನಿಲ್ಲಿಸಿ ಸಮವಸ್ತ್ರಧಾರಿ ಸಶಸ್ತ್ರ ಮೀಸಲು ಪಡೆ ಗೌರವ ವಂದನೆ ಸಲ್ಲಿಸಿತು. ಈ ವೇಳೆ ಶ್ವಾನ ದಳವು ಗೌರವ ವಂದನೆ ಸಲ್ಲಿಸಿದ್ದು ಕಿರಿಯ ಆಯುಕ್ತರಲ್ಲಿ ಖುಷಿ ತಂದಿತು.

ಅಲ್ಲಿಂದ ಭಾಸ್ಕರ್‌ ರಾವ್‌ ಅವರು, ಮಕ್ಕಳನ್ನು ತಮ್ಮ ಕಚೇರಿಗೆ ಕರೆದೊಯ್ದು ಸಲ್ಯೂಟ್‌ ಹೊಡೆದು ಕುರ್ಚಿಯಲ್ಲಿ ಕೂರಿಸಿದರು. ಬಳಿಕ ಮಕ್ಕಳಿಂದ ಲೆಡ್ಜರ್‌ಗೆ ಸಹಿ ಪಡೆದರು. ಮಕ್ಕಳು ಅಷ್ಟೇ ಠಾಕುಠೀಕಾಗಿ ಖಾಕಿ ಸಮಸ್ತ್ರಧಾರಿಗಳಾಗಿದ್ದರು. ಮಕ್ಕಳಿಗೆ ಬ್ಯಾಟೆನ್‌ ಹಸ್ತಾಂತರಿಸುವ ಮೂಲಕ ಆಯುಕ್ತರು ಅಧಿಕಾರ ಬಿಟ್ಟುಕೊಟ್ಟರು. ಕೆಲ ನಿಮಿಷಗಳು ಐವರು ಮಕ್ಕಳು ಒಬ್ಬರಾದ ಮೇಲೆ ಒಬ್ಬರಂತೆ ಆಯುಕ್ತರ ಸ್ಥಾನದಲ್ಲಿ ಕುಳಿತು ಅಧಿಕಾರರೂಢರಾದರು. ಈ ಸಂಭ್ರಮವನ್ನು ಮಕ್ಕಳ ಪೋಷಕರು, ಸಂಘಸಂಸ್ಥೆ ಪದಾಧಿಕಾರಿಗಳು ಹಾಗೂ ಪೊಲೀಸರು ಕಣ್ತುಂಬಿಕೊಂಡರು.

ಇದಾದ ನಂತರ ಕಮಾಂಡ್‌ ಸೆಂಟರ್‌ (ನಮ್ಮ-100) ಕರೆದುಕೊಂಡು ಹೋಗಿ ಕಂಟ್ರೋಲ್‌ ರೂಮ… ಕಾರ್ಯವೈಖರಿ ಬಗ್ಗೆ ಚಿಣ್ಣರಿಗೆ ಪೊಲೀಸರು ವಿವರಿಸಿದರು. ಆಯುಕ್ತರಾಗಿ ಅಧಿಕಾರ ನಡೆಸುವಾಗ ಮಕ್ಕಳ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಜವರಾಯನ ಕಾಕದೃಷ್ಟಿಗೆ ಸಿಲುಕಿದ ಮಕ್ಕಳಲ್ಲಿ ಉಲ್ಲಾಸ ಕಂಡು ಹೆತ್ತವರ ಕಣ್ಣಾಲಿಗಳು ಹನಿಗೂಡಿದ್ದವು. ಇಂತಹ ಹೃದಯ ಸ್ಪರ್ಶಿ ಕಾರ್ಯಕ್ರಮಕ್ಕೆ ಆಯುಕ್ತರ ಕಚೇರಿ ವೇದಿಕೆಯಾಗಿ, ಮಾನವೀಯತೆ ಮೌಲ್ಯಗಳ ಮುಂದೆ ಎಲ್ಲವೂ ನಗಣ್ಯ ಎಂಬ ಸಂದೇಶ ಸಾರಿತು.

ಕಮಿಷನರ್‌ ಆದ ಮಕ್ಕಳು

ಮೊಹಮ್ಮದ್‌ ಶಾಹೀದ್‌(11), 6ನೇ ತರಗತಿ, ಬಿಜಾಪುರ (ರಕ್ತ ಕ್ಯಾನ್ಸರ್‌ ಪೀಡಿತ)

ರುತನ್‌ ಕುಮಾರ್‌(8), ಹಾಸನ (ಕಿಡ್ನಿ ವೈಫಲ್ಯ)

ಅರ್ಪದ್‌ ಪಾಷಾ(8) 3ನೇ ತರಗತಿ, ನೀಲಸಂದ್ರ, ಬೆಂಗಳೂರು (ರಕ್ತಹೀನತೆ )

ಶ್ರಾವಣಿ ಬಟಲಾ(8) 1ನೇ ತರಗತಿ, ಆಂಧ್ರಪ್ರದೇಶ (ಥಲಸೇಮಿಯಾ)

ಸೈಯದ್‌ ಇಮಾ(4), ಬೆಂಗಳೂರು (ಬಿಪಿ ಮತ್ತು ಕಿಡ್ನಿ ಸೋಂಕು)

ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾದ ಮಕ್ಕಳಲ್ಲಿ ಚೈತನ್ಯ ತುಂಬುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜನರ ನೋವಿನಲ್ಲಿ ಪೊಲೀಸರು ಭಾಗಿದಾರರಾಗುವ ಮೂಲಕ ಮಾನವೀಯತೆ ವ್ಯಕ್ತಪಡಿಸುವ ಮನೋಭಾವನೆ ಮೂಡಬೇಕಿದೆ.

-ಭಾಸ್ಕರ್‌ ರಾವ್‌, ಪೊಲೀಸ್‌ ಆಯುಕ್ತ, ಬೆಂಗಳೂರು.

ನನಗೆ ನಟ ದರ್ಶನ್‌ ಅಂದರೆ ಬಹಳ ಇಷ್ಟ. ನಾನು ಅವರ ಅಭಿಮಾನಿ. ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ಐರಾವತ ಸಿನಿಮಾದಲ್ಲಿ ದರ್ಶನ್‌ ಅವರಂತೆ ನಾನು ಪೊಲೀಸ್‌ ಅಧಿಕಾರಿಯಾಗಿ ಫೈಟ್‌ ಮಾಡಬೇಕು ಎಂಬ ಆಸೆ ಇದೆ. ಕಳ್ಳರನ್ನು ಹಿಡಿದು ಜೈಲಿಗೆ ಕಳುಹಿಸುತ್ತೇನೆ.

-ರುತನ್‌ಕುಮಾರ್‌, ಹಾಸನ