Asianet Suvarna News Asianet Suvarna News

ಬೆಚ್ಚಿಬೀಳಿಸಿದ್ದ ಹಾಸನದ ವೃದ್ಧ ದಂಪತಿ ಕೊಲೆ ಕೇಸ್ : 5 ಮಂದಿ ಅರೆಸ್ಟ್

ಹಾಸನದಲ್ಲಿ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಅರೆಸ್ಟ್ ಮಾಡಲಾಗಿದೆ. ಪರಿಚಯಸ್ಥರಿಂದಲೇ ಈ ದುಷ್ಕೃತ್ಯ ನಡೆದಿಎ. 

5 People Arrested For Hassan couple Murder Case
Author
Bengaluru, First Published Sep 6, 2020, 11:33 AM IST

ಚನ್ನರಾಯಪಟ್ಟಣ(ಸೆ.06):  ತಾಲೂಕಿನ ಜನತೆಯನ್ನು ಬೆಚ್ಚಿಬೀಳಿಸಿದ ಆಲಗೊಂಡನಹಳ್ಳಿಯಲ್ಲಿನ ಒಂಟಿಮನೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ 5 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಒಂಟಿಮನೆಯಿಂದ ದೋಚಲಾಗಿದ್ದ ಚಿನ್ನ, ಬೆಳ್ಳಿ, ನಗದು ಸೇರಿ ಕೃತ್ಯಕ್ಕೆ ಬಳಸಲಾಗಿದ್ದ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನೆಲ್ಲಾ ಶನಿವಾರ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಜೋಡಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಬಾಗೂರು ಹೋಬಳಿ, ರೇಚಿಹಳ್ಳಿ ಗ್ರಾಮದ ಪ್ರಸಾದ್‌ ಅಲಿಯಾಸ್‌ ಗುಂಡ(25), ಬರಗೂರುಕೊಪ್ಪಲು ಗ್ರಾಮದ ಮಂಜಶೆಟ್ಟಿಅಲಿಯಾಸ್‌ ದ್ವಾರ್ಕಿ(23), ಮೂಡಿಗೆರೆ ತಾಲೂಕು ಹಳೆಕೋಟೆ ಗ್ರಾಮದ ನಂದಕುಮಾರ್‌(33), ಬೆಂಗಳೂರಿನ ಯೋಗಾನಂದ(29), ಪಟ್ಟಣದ ಚೆನ್ನಿಗರಾಯ ಬಡಾವಣೆ ವಾಸಿ ಭರತ(24) ಮತ್ತು ಬರಗೂರು ಕೊಪ್ಪಲಿನ ಮಧು(25) ಬಂಧಿತರು.

ಹಾಸನ : ಜನರನ್ನು ಬೆಚ್ಚಿ ಬೀಳಿಸಿದ ಜೋಡಿ ಕೊಲೆ ..

ಬಂಧಿತರಿಂದ ದರೋಡೆ ಮಾಡಲಾಗಿದ್ದ 15.80 ಲಕ್ಷ ರು. ಮೌಲ್ಯದ 316 ಗ್ರಾಂ ಚಿನ್ನದ ಒಡವೆಗಳು, 1.25 ಲಕ್ಷ ರು. ಮೌಲ್ಯದ ಬೆಳ್ಳಿ ಸಾಮಾನುಗಳು, 20 ಸಾವಿರ ಮೌಲ್ಯದ 3 ಮೊಬೈಲ್‌ಗಳು, 25 ಸಾವಿರ ರು.ನಗದು, ಕೃತ್ಯಕ್ಕೆ ಬಳಸಲಾಗಿದ್ದ 6 ಲಕ್ಷ ರು. ಬೆಲೆಯ ಝೈಲೊ ಕಾರು, 1.5 ಲಕ್ಷ ಮೌಲ್ಯದ 3 ಬೈಕ್‌ಗಳು ಹಾಗೂ ಆರೋಪಿಗಳ 4 ಮೊಬೈಲ್‌ ಸೇರಿ 25 ಲಕ್ಷ ರು. ಗಳಷ್ಟುಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ವೃದ್ದ ದಂಪತಿಗಳ ಬ್ಯಾಂಕ್‌ ಎಟಿಎಂ ಕಾರ್ಡ್‌ ಬಳಸಿ ತೆಗೆಯಲಾಗಿದ್ದ 1.05 ಲಕ್ಷ ರು.ಗಳನ್ನು ಖರ್ಚು ಮಾಡಿದ್ದಾರೆ. 10 ಎಟಿಎಂ ಕಾರ್ಡ್‌ಗಳ ಪೈಕಿ 3 ಕಾರ್ಡ್‌ನ್ನಷ್ಟೆಬಳಸಿ ಹಣ ತೆಗೆದಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?:

ಆಗಸ್ಟ್‌ 29ರ ರಾತ್ರಿ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಆಲಗೊಂಡನಹಳ್ಳಿ ಸಮೀಪದ 40 ಎಕರೆ ತೋಟದಲ್ಲಿನ ಒಂಟಿಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿಗಳಾದ ಮುರುಳಿಧರ್‌, ಮತ್ತು ಉಮಾದೇವಿ ಎಂಬುವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಕೊಲೆಗಾರರು ಅವರ ಮನೆಯಿಂದ ಹಣ, ಒಡವೆ ದೋಚಿ ತಮ್ಮ ಬೆರಳಚ್ಚು ಸಿಗದ ರೀತಿಯಲ್ಲಿ ಮನೆಯಲ್ಲೆಲ್ಲಾ ಖಾರದಪುಡಿ ಚೆಲ್ಲಿ ಪರಾರಿಯಾಗಿದ್ದರು.

ತಾಲೂಕಿನಲ್ಲಿ ಸಾಲು ಸಾಲು ಕೊಲೆಗಳಾಗುತ್ತಿದ್ದರೂ ಪೋಲಿಸ್‌ನವರಿಗೆ ಹಣಕ್ಕಾಗಿ ನಡೆದ ಜೋಡಿ ಕೊಲೆ ಸವಲಾಗಿತ್ತು. ಎಸ್‌.ಪಿ.ಶ್ರೀನಿವಾಸಗೌಡರು ಜಿಲ್ಲೆಯಲ್ಲಿನ ದಕ್ಷ ಅಧಿಕಾರಿಗಳನ್ನೊಳಗೊಂಡ ಮೂರು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಕಾರ್ಯಚರಣೆಗಿಳಿದರು. ಕೊಲೆ ನಡೆದ ಎರಡೇ ದಿನದಲ್ಲಿ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿ ನಾಲ್ಕು ದಿನಗಳಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಿ ದೋಚಿದ ನಗ, ನಾಣ್ಯಗಳನ್ನೆಲ್ಲಾ ವಶಪಡಿಸಿಕೊಳ್ಳುವ ಮೂಲಕ ಭಯಬೀತಗೊಂಡಿದ್ದ ಜಿಲ್ಲೆಯ ಜನಕ್ಕೆ ನೆಮ್ಮದಿ ನೀಡಿದ್ದಾರೆ.

ಕಾರ್ಯಾಚರಣೆ ಹೇಗೆ ನಡೆಯಿತು?

ಕೊಲೆ ನಡೆದ ಮಾರನೇದಿನದಿಂದ ಕಾರ್ಯಾಚರಣೆಗಿಳಿದ ಪೊಲೀಸ್‌ನವರು ಕೊಲೆಗೀಡಾದ ಮುರುಳೀಧರ್‌ ತೋಟದ ಪಕ್ಕದಲ್ಲೆ ತೋಟ ಹೊಂದಿದ್ದ, ದಂಪತಿಗೆ ಪರಿಚಯವಿದ್ದ ಬರಗೂರು ಕೊಪ್ಪಲಿನ ಮಂಜಶೆಟ್ಟಿಯನ್ನು ಸಂಶಯದ ಮೇರಗೆ ಮೊದಲಿಗೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವುದರ ಜೊತೆಗೆ ಪ್ರಮುಖ ಆರೋಪಿ ಪ್ರಸಾದ್‌(ಗುಂಡ) ಅಣ್ಣೇನಹಳ್ಳಿ ಬಳಿಯ ಕೋಳಿಫಾರಂನಲ್ಲಿ ಅಡಗಿರುವ ವಿಚಾರ ಬಾಯ್ಬಿಟ್ಟಿದ್ದಾನೆ. ಪ್ರಸಾದ್‌ ಕಾಲಿಗೆ ಗುಂಡು ಹೊಡೆದು ಬಂಧಿಸುವ ಪೊಲೀಸರು ಅಲ್ಲಿಂದ ಅವರಿಬ್ಬರ ಮಾಹಿತಿ ಮೇರೆಗೆ ಉಳಿದ ಮೂರು ಮಂದಿಯನ್ನು ಬಂಧಿಸಲಾಗಿದೆ.

ಪ್ರಕರಣದ ಕುರಿತು ಮಾತನಾಡಿದ ಎಸ್‌ಪಿ ಶ್ರೀನಿವಾಸಗೌಡ ಕೊಲೆ ನಡೆದ ದಿನ ರಾತ್ರಿ ಎಲ್ಲರೂ ಕೋಳಿಫಾರಂನಲ್ಲೆ ಉಳಿದು ಮಾರನೇ ದಿನ ಪೋಲಿಸ್‌ನವರ ಪ್ರವೇಶದ ನಂತರ ಎಲ್ಲರೂ ಬೇರೆ ಬೇರೆ ಕಡೆ ತಲೆಮರೆಸಿಕೊಳ್ಳುತ್ತಾರೆ. ಪ್ರಸಾದ್‌ ಬೆಂಗಳೂರಿನಲ್ಲಿ ಕಾರು ಡ್ರೈವರ್‌ ಆಗಿದ್ದು, ಲಾಕ್‌ಡೌನ್‌ ನಂತರ ತಾಲೂಕಿಗೆ ಬಂದು ಕೋಳಿಫಾರಂ ಬಾಡಿಗೆ ಪಡೆದು ಪಟ್ಟಣದಲ್ಲಿ ಯಾರು ಸೈಟ್‌, ಭೂಮಿ ಮಾರಿದ್ದರು ಎಂಬುದಾಗಿ ಮಾಹಿತಿ ಕಲೆಹಾಕಿದ್ದ. ಈತ ಬೆಂಗಳೂರಿನಲ್ಲಿ ಕೊಲೆ ಕೇಸ್‌ನಡಿ ಜೈಲಿನಲ್ಲಿದ್ದಾಗ ಪರಿಚಿತರಾದ ನಂದಕುಮಾರ್‌ ಮತ್ತು ಯೋಗಾನಂದನನ್ನು ಕೃತ್ಯಕ್ಕಾಗಿ ಕರೆಸಿಕೊಂಡಿದ್ದ, ವೃದ್ದ ದಂಪತಿಗಳ ಬಗೆ ಮಾಹಿತಿ ನೀಡಿದ್ದ ಮಂಜಶೆಟ್ಟಿಮತ್ತು ವಾಹನ ಸೇರಿ ಅಗತ್ಯ ಸೌಲಭ್ಯ, ಸಹಕಾರವನ್ನು ಮಧು ನೀಡಿದ್ದ, ಪ್ರಕರಣ ಬೇಧಿಸುವಲ್ಲಿ ಯಶ್ವಸಿಯಾಗಿರುವ ತಂಡಗಳಿಗೆ ಡಿಜಿಯವರು ಬಹುಮಾನ ಘೋಷಿಸಿದ್ದಾರೆ ಎಂದರು.

ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಶ್ರೀನಿವಾಸಗೌಡರವರ ನೇತೃತ್ವದಲ್ಲಿ ಅಪರ ಪೋಲಿಸ್‌ ಅಧೀಕ್ಷಕಿ ನಂದಿನಿ ರವರು, ಹಾಗೂ ಉಪಾಧೀಕ್ಷಕರಾದ ಲಕ್ಷ್ಮೇಗೌಡರವರ ಮಾರ್ಗದರ್ಶನದಲ್ಲಿ ಆರೋಪಿಯ ಪತ್ತೆಗಾಗಿ ಶ್ರಮಿಸಿದ ಸಿಪಿಐ ಬಿ.ಜೆ.ಕುಮಾರ್‌, ಸಿದ್ಧರಾಮೇಶ್ವರ್‌, ಇ.ವಿ.ವಿನಯ್‌, ಪಿಎಸ್‌ಐಗಳಾದ ಜೀತೇಂದ್ರಕುಮಾರ್‌, ವಿನೋಧ್‌ರಾಜ್‌, ಮತ್ತು ಸಿಬ್ಬಂದಿ ಕುಮಾರಸ್ವಾಮಿ ಎಎಸ್‌ಐ, ಜವರೇಗೌಡ, ಸುರೇಶ್‌, ಶಶಿಕುಮಾರ್‌, ಜಮ್ರುದ್‌ಖಾನ್‌, ಅಶೋಕ್‌, ಪುಟ್ಟರಾಜು, ಜಯರಾಂ, ಮೋಹನ್‌, ಮಹೇಶ್‌ ಸೇರಿ ಇತರರನ್ನು ಪೋಲಿಸ್‌ ಅಧೀಕ್ಷಕರು ಅಭಿನಂದಿಸಿದ್ದಾರೆ.

Follow Us:
Download App:
  • android
  • ios