ಕೋಲಾರ : ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಸ್ಥಗಿತದಿಂದ ರೋಗಿಗಳ ಸಾವು
ಆಕ್ಸಿಜನ್ ಕೊರತೆಯಿಂದ ಕೋವಿಡ್ ರೋಗಿಗಳು ಐಸಿಯುನಲ್ಲಿ ಕೊನೆಯುಸಿರೆಳೆದಿರುವ ಆತಂಕಕಾರಿ ಘಟನೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಭಾನುವಾರ ರಾತ್ರಿ 11 ಗಂಟೆಗೆ ಇದ್ದಕ್ಕಿದಂತೆ ಆಕ್ಸಿಜನ್ ಸರಬರಾಜು ನಿಂತಿದೆ. ಐಸಿಯು ವಾರ್ಡ್‌ನಲ್ಲಿದ್ದ ಐದು ಜನರು ಉಸಿರಾಟವಿಲ್ಲದೆ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ಕೋಲಾರ (ಏ.27): ಸಕಾಲದಲ್ಲಿ ಆಮ್ಲಜನಕ ಪೂರೈಕೆ ಆಗದ ಹಿನ್ನೆಲೆಯಲ್ಲಿ ಐವರು ಕೋವಿಡ್ ರೋಗಿಗಳು ಐಸಿಯುನಲ್ಲಿ ಕೊನೆಯುಸಿರೆಳೆದಿರುವ ಆತಂಕಕಾರಿ ಘಟನೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಒಟ್ಟಾರೆ ಈ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 8 ಕೋವಿಡ್ ರೋಗಿಗಳು ಮೃತಪಟ್ಟಿದ್ದು, ಇಲ್ಲಿನ ಅವ್ಯವಸ್ಥೆ ಬಗ್ಗೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಭಾನುವಾರ ರಾತ್ರಿ 11 ಗಂಟೆಗೆ ಇದ್ದಕ್ಕಿದಂತೆ ಆಕ್ಸಿಜನ್ ಸರಬರಾಜು ನಿಂತಿದೆ. ಐಸಿಯು ವಾರ್ಡ್‌ನಲ್ಲಿದ್ದ ಐದು ಜನರು ಉಸಿರಾಟವಿಲ್ಲದೆ ಒದ್ದಾಡಿದ್ದಾರೆ. ಈ ವೇಳೆ ರೋಗಿಗಳ ಕುಟುಂಬಸ್ಥರು ಸಂಬಂಧಪಟ್ಟಅಧಿಕಾರಿಗಳಿಗೆ ಫೋನ್ ಮಾಡಿದ್ದು ಯಾರೂ ಕರೆ ಸ್ವೀಕರಿಸಿಲ್ಲ. ಸಮಸ್ಯೆ ಬಗೆಹರಿಯದ್ದರಿಂದ ಕೊನೆಗೆ ಆಮ್ಲಜನಕ ಪೂರೈಕೆ ಇಲ್ಲದೆ ಐಸಿಯುನಲ್ಲಿದ್ದ ಐವರೂ ಮೃತಪಟ್ಟಿದ್ದಾರೆ. ಮತ್ತೊಂದು ಕಡೆ ಮೂವರು ಕೊರೋನಾ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ಇರಲಿಲ್ಲ, ಖಾಲಿಯಾಗಿತ್ತು. ಅಧಿಕಾರಿಗಳು ಇದನ್ನು ಗಮನಿಸದೆ ವ್ಯವಸ್ಥೆ ಮಾಡದ್ದರಿಂದ ಹೀಗಾಗಿದೆ. ಆದರೆ ಇದಕ್ಕೆ ಆಸ್ಪತ್ರೆ ಸಿಬ್ಬಂದಿ ಕಾರಣ ಎಂದು ಅವರ ಮೇಲೆ ಹಾಕುತ್ತಿದ್ದಾರೆ ಎಂದು ಮೃತರ ಕುಟುಂಬಸ್ಥರು ದೂರಿದ್ದಾರೆ.
ಆತಂಕದ ನಡುವೆ ರಾಜ್ಯಕ್ಕೆ ಒಳ್ಳೆ ಸುದ್ದಿ : ಕಡಿಮೆ ಕೇಸ್ - ಗುಣಮುಖರ ಸಂಖ್ಯೆಯೂ ಏರಿಕೆ ...
ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಆದರೆ ತಾಂತ್ರಿಕ ದೋಷದಿಂದ ಆಕ್ಸಿಜನ್ ಪೂರೈಕೆಯಲ್ಲಿ ತೊಂದರೆ ಆಗಿ ಈ ಘಟನೆ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ಕ್ರಮ ಜರುಗಿಸಲಾಗುವುದು.
-ಡಾ.ಎಸ್.ಎನ್.ವಿಜಯ್‌ಕುಮಾರ್, ಡಿಎಚ್‌ಒ