ಶಿವಮೊಗ್ಗ(ಜೂ.24): ಜಿಲ್ಲೆಯಲ್ಲಿ ಮಂಗಳವಾರ ಐವರಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರಿಗೆ ನಿಗಧಿತ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳವಾರ ಪತ್ತೆಯಾಗಿರುವ ಐದು ಪ್ರಕರಣದಲ್ಲಿ ಮೂವರಿಗೆ ಸೋಂಕಿತ ವ್ಯಕ್ತಿಗಳ ಸಂಪರ್ಕದಿಂದಲೇ ಕೊರೋನಾ ತಗುಲಿದೆ. ಇನ್ನು ಒಬ್ಬರು ಅಂತರಾಜ್ಯದಿಂದ ಜಿಲ್ಲೆಗೆ ಹಿಂದಿರುಗಿದವರು.

ಪಿ-9546 (75 ವರ್ಷದ ವೃದ್ಧೆ) ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಪಿ-9547 (27 ವರ್ಷದ ಯುವಕ) ಗೆ ಪಿ-6414 ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಸೋಂಕು ತಗುಲಿದೆ. ಪಿ-9548 (21 ವರ್ಷದ ಯುವಕ) ಗೆ ಪಿ-7802 ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಸೋಂಕು ತಗುಲಿದೆ. ಪಿ-9549 (35 ವರ್ಷದ ಯುವತಿ) ಮಹಾರಾಷ್ಟ್ರ ರಾಜ್ಯದಿಂದ ಹಿಂತಿರುಗಿರುವ ಟ್ರಾವೆಲ್‌ ಹಿಸ್ಟರಿ ಹೊಂದಿದ್ದಾರೆ. ಇನ್ನು ಪಿ-9550 (21 ವರ್ಷಯ ಯುವಕ) ಗೆ ಪಿ-8063 ಸೋಂಕಿನ ವ್ಯಕ್ತಿ ಸಂಪರ್ಕದಿಂದ ಸೋಂಕು ತಗುಲಿದೆ.

ವಿದ್ಯಾರ್ಥಿಗೆ ಸೋಂಕು:

ರಿಪ್ಪನ್‌ಪೇಟೆ ಹುಂಚಾ ಹೋಬಳಿ ವ್ಯಾಪ್ತಿಯ 21ವರ್ಷ ವಯಸ್ಸಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯೊಬ್ಬನಿಗೆ ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ. ಬಿದರಹಳ್ಳಿ ಮಜರೆ ಪಾಶೆಟ್ಟಿಕೊಪ್ಪದಲ್ಲಿ ಕಳೆದ ವಾರದಲ್ಲಿ ಕಬ್ಬಿನ ವ್ಯಾಪಾರಿಯೊಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಈತನಿಗೂ ಇದೀಗ ಸೋಂಕು ತಗುಲಿದೆ. ಸೋಂಕಿತ ಯುವಕನ ತಂದೆ, ತಾಯಿ, ಸಹೋದರಿಯನ್ನು ಹೋಮ್‌ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 82 ಕುಟುಂಬಗಳಿರುವ ಪಾಶೆಟ್ಟಿಕೊಪ್ಪ ಮತ್ತು ಜೀರಿಗೆಮನೆ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನೊಂದು ಕೊರೋನಾ ಸೋಂಕು ಪ್ರಕರಣ ದೃಢ

ಶಿಕಾರಿಪುರ ತಾ. ಖವಾಸಪುರದಲ್ಲಿ ವೃದ್ಧೆಗೆ ಕೊರೋನಾ ಪಾಸಿಟಿವ್‌ ಬಂದಿದ್ದು, ಗ್ರಾಮದಲ್ಲಿ ಆತಂಕ ಉಂಟು ಮಾಡಿದೆ. ವೃದ್ಧೆ ಇದ್ದ ಮನೆಯ ಸುತ್ತಮುತ್ತ ಕಂಟೈನ್ಮೆಂಟ್‌ ಜೋನ್‌ ಮಾಡಲಾಗಿದೆ. ವೃದ್ಧೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಜನ ಕುಟುಂಬಸ್ಥರನ್ನು ಸಹ ಕ್ವಾರಂಟೈನ್‌ ಮಾಡಲಾಗಿದೆ.

ಕೆಎಸ್‌ಆರ್‌ಪಿ ಪೊಲೀಸರೊಬ್ಬರಿಗೆ ಸೋಂಕು:

ಕೆಎಸ್‌ಆರ್‌ಪಿ ಪೊಲೀಸರೊಬ್ಬರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಕರ್ತವ್ಯ ನಿಮಿತ್ತ ಬೆಂಗಳೂರಿನ ಪಾದರಾಯನಪುರಕ್ಕೆ ತೆರಳಿ ಹಿಂತಿರುಗಿ ಬಂದಿದ್ದ ಕೆಲವು ಪೊಲೀಸರಿಗೆ ಸೋಂಕು ತಗುಲಿತ್ತು. ಅವರ ಸಂಪರ್ಕದಿಂದ ಕೆಎಸ್‌ಆರ್‌ಪಿ ಸಿಬ್ಬಂದಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಸೊರಬ ತಾಲೂಕಿನ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ ಎನ್ನಲಾಗಿದ್ದು ಸೋಂಕಿತ ವ್ಯಕ್ತಿಯನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಇದೀಗ ಸೋಂಕಿತರ ಸಂಖ್ಯೆ 116ಕ್ಕೆ ಏರಿಕೆಯಾಗಿದೆ. ಅದರಲ್ಲಿ 88 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ 27 ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ. ಒಬ್ಬ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ.