BPL ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್ : ಬಂಪರ್ ಕೊಡುಗೆ
ಬಿಪಿಎಲ್ ಕಾರ್ಡು ಹೊಂದಿದ್ದೀರಾ ಹಾಗಾದರೆ ನಿಮಗಿಲ್ಲಿದೆ ಗುಡ್ ನ್ಯೂಸ್. ಸರ್ಕಾರ ನೀಡುತ್ತಿದೆ ನಿಮಗೆ ಬಂಪರ್ ಕೊಡುಗೆ ಏನದು?
ಶಿವಮೊಗ್ಗ [ಸೆ.18]: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯು ದೇಶದ ಎಲ್ಲಾ ನಿವಾಸಿಗಳಿಗೆ ಆರೋಗ್ಯ ಸೇವೆ ಒದಗಿಸುವ ಮಹತ್ವದ ಯೋಜನೆಯಾಗಿದ್ದು, ಕೋಟ್ಯಂತರ ಜನ ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯು ಅನುಷ್ಠಾನಗೊಂಡು ಒಂದು ವರ್ಷ ಪೂರೈಸಿದ ಅಂಗವಾಗಿ ಏರ್ಪಡಿಸಲಾಗಿದ್ದ ಅರಿವು ಜಾಥಾ ಹಾಗೂ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಂದು ದೇಶದ ಉನ್ನತಿ ಆ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಆರೋಗ್ಯವಾಗಿದ್ದಾಗ ಸಾಧ್ಯವಾಗುತ್ತದೆ. ದೇಶ ಎಲ್ಲಾ ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂದುವರೆದಿದ್ದರೂ ಆರೋಗ್ಯ ಕ್ಷೇತ್ರದ ಸಾಧನೆ ಅಷ್ಟೊಂದು ಆಶಾದಾಯಕವಾಗಿಲ್ಲದಿರುವುದು ಬೇಸರದ ಸಂಗತಿ. ದೇಶದ ಕಡುಬಡುವರು ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವಲ್ಲಿ ಸಮರ್ಥರಾಗಿಲ್ಲದಿರುವುದನ್ನು ಗಮನಿಸಿ, ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದವರು ನುಡಿದರು.
ಬಿಪಿಎಲ್ ಕಾರ್ಡ್‌ದಾರರಿಗೆ 5 ಲಕ್ಷ ರು. ಆರೋಗ್ಯ ಸೌಲಭ್ಯ
ಈ ಯೋಜನೆಯಡಿ ಬಿಪಿಎಲ್ ಕುಟುಂಬದವರು ರು. 5ಲಕ್ಷ ರು. ಗಳವರೆಗೆ ಹಾಗೂ ಎಪಿಎಲ್ ಕುಟುಂಬದ ಸದಸ್ಯರು ವಾರ್ಷಿಕವಾಗಿ 1.50ಲಕ್ಷ ರು.ಗಳವರೆಗೆ ಉಚಿತ ಆರೋಗ್ಯ ಸೌಲಭ್ಯ ದೊರೆಯಲಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಯೋಜನೆಯಡಿ 1650 ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಲಭ್ಯವಿದೆ. ಸಾಮಾನ್ಯ ದ್ವಿತೀಯ ಹಂತದ 291ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತಿದೆ. ದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ 20 ಕೋಟಿ ಜನ ಹಾಗೂ ಜಿಲ್ಲೆಯಲ್ಲಿ 7,000 ಸಾವಿರ ಜನರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯ ಜನರು ಈ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಸಂಸದ ರಾಘವೇಂದ್ರ ಮನವಿ ಮಾಡಿದರು.
ಶಿವಮೊಗ್ಗದಲ್ಲಿ ಏರ್ಪಡಿಸಲಾಗಿದ್ದ ಅರಿವು ಜಾಥಾ ಹಾಗೂ ಪಾಕ್ಷಿಕ ಕಾರ್ಯಕ್ರಮಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು.