ಯಾದಗಿರಿ ವಾಂತಿಭೇದಿ ಪ್ರಕರಣ: ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ, ಸಚಿವ ಚವ್ಹಾಣ್
ದುರಂತದಲ್ಲಿ ಮರಣ ಹೊಂದಿದ 3 ಜನರು ಕಡುಬಡವರಾಗಿದ್ದು, ಅವರ ಕುಟುಂಬ ವರ್ಗದವರಿಗೆ ರು.5 ಲಕ್ಷ ಪರಿಹಾರ ಹಾಗೂ ಚಿಕಿತ್ಸೆ ಪಡೆಯುತ್ತಿರುವ ಜನರಿಗೆ ಉಚಿತವಾಗಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಯವರು ನೊಂದ ಕುಟುಂಬಸ್ಥರ ನೆರವಿಗೆ ಮುಂದಾಗಿದ್ದಾರೆ: ಸಚಿವ ಪ್ರಭು ಬಿ.ಚವ್ಹಾಣ್
ಯಾದಗಿರಿ(ಫೆ.25): ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ ಧನ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಪಶು ಸಂಗೋಪನೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದುರಂತದಲ್ಲಿ ಮರಣ ಹೊಂದಿದ 3 ಜನರು ಕಡುಬಡವರಾಗಿದ್ದು, ಅವರ ಕುಟುಂಬ ವರ್ಗದವರಿಗೆ ರು.5 ಲಕ್ಷ ಪರಿಹಾರ ಹಾಗೂ ಚಿಕಿತ್ಸೆ ಪಡೆಯುತ್ತಿರುವ ಜನರಿಗೆ ಉಚಿತವಾಗಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಯವರು ನೊಂದ ಕುಟುಂಬಸ್ಥರ ನೆರವಿಗೆ ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
BIG3 : ಕಲುಷಿತ ನೀರು ಸೇವನೆಯಿಂದ ಮೂರು ಸಾವು: ಅನಪುರದಲ್ಲಿ ಸ್ಮಶಾನ ಮೌನ
ಫೆ.14ರಂದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮಕ್ಕೆ ನೀರು ಪೂರೈಸುವ ಪೈಪ್‌ನಲ್ಲಿ ಚರಂಡಿ ನೀರು ಸೇರ್ಪಡೆಯಾಗಿ ಕಲುಷಿತ ನೀರು ಸೇವನೆಯಿಂದ ಗ್ರಾಮದ ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಸಾವಿತ್ರಮ್ಮ, ಸಾಯಮ್ಮ, ನರಸಮ್ಮ ಎನ್ನುವವರು ಮೃತಪಟ್ಟಿದ್ದರು. ಉಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಗ್ರಾಮದಲ್ಲಿ ನಿರಂತರವಾಗಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ ಎಂದ ಅವರು, ಕಲುಷಿತ ನೀರು ಸೇವಿಸಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಸರ್ಕಾರ ಸದಾ ನಿಮ್ಮ ಜೊತೆಗಿದೆ ಯಾವುದೇ ಕಾರಣಕ್ಕೂ ಆತಂಕಪಡಬೇಕಿಲ್ಲ ಎಂದು ತಿಳಿಸಿದ್ದಾರೆ.