ಆಂಧ್ರದಿಂದ ಬಂದು ವೃಂದಾವನ ಧ್ವಂಸ ಮಾಡಿದ್ರು, ನಿಧಿಗಳ್ಳರಿಗೆ ಟ್ರೀಟ್‌ಮೆಂಟ್
ಆನೆಗುಂದಿಯ ನವವೃಂದಾವನ ಧ್ವಂಸ ಮಾಡಿದ್ದ ಆರೋಪಿಗಳ ಬಂಧನವಾಗಿದೆ. ಬಂಧಿತರನ್ನು ಅಂತರಾಜ್ಯ ನಿಧಿ ಕಳ್ಳರು ಎಂದು ಗುರುತಿಸಲಾಗಿದೆ.
ಕೊಪ್ಪಳ[ಜು. 21] ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿ ವ್ಯಾಸರಾಯರ ವೃಂದಾವನ ಧ್ವಂಸ್ ಮಾಡಿದ್ದ ಐದು ಮಂದಿ ಅಂತರಾಜ್ಯ ನಿಧಿಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ತಲೆ ತಪ್ಪಿಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗೆ ಶೋಧ ಮುಂದುವರಿದಿದೆ.
ಬಂಧಿತರನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ತಾಡಪತ್ರಿಯ ನಿವಾಸಿಗಳಾದ ಪೊಲ್ಲಾರಿ ಮುರಳಿ ಮನೋಹರ ರೆಡ್ಡಿ, ಡಿ. ಮನೋಹರ್, ಕೆ. ಕುಮ್ಮಟ ಕೇಶವ, ಬಿ. ವಿಜಯಕುಮಾರ್ ಹಾಗೂ ಟಿ.ಬಾಲನರಸಯ್ಯ ಎಂದು ಗುರುತಿಸಲಾಗಿದೆ. ಮನೋಹರ್ ಹಾಗೂ ವಿಜಯಕುಮಾರ್ ವಾಹನ ಚಾಲಕರಾದರೆ ಕೇಶವ ಬೈಕ್ ಮೆಕ್ಯಾನಿಕ್, ಮುರಳಿ ರೈತ, ಬಾಲನರಸಯ್ಯ ಅರ್ಚಕ ವೃತ್ತಿ ಮಾಡುತ್ತಿದ್ದವರು.
ಹಂಪಿ ಸ್ಮಾರಕ ಕೆಡವಿದ್ದವರಿಗೆ ಕೊಟ್ಟ ಮಾದರಿ ಶಿಕ್ಷೆ!
ವೃಂದಾವನ ಹಾಳು ಮಾಡಲು ಬಳಸಿದ್ದ ಹಾರೆ, ಕಬ್ಬಿಣದ ಚಾಣ, ಸಲಾಕೆ, ಪಿಕಾಸಿ, ಸುತ್ತಿಗೆ, ಮತ್ತು ಆಂಧ್ರ ಪ್ರದೇಶ ನೊಂದಣಿ ಸಂಖ್ಯೆ ಹೊಂದಿರುವ ವಾಹನ ವಶಪಡಿಸಿಕೊಳ್ಳಲಾಗಿದೆ. ಅಪಾರ ಸಂಪತ್ತಿನ ಆಸೆಗಾಗಿ ಯತಿಗಳ ವೃಂದಾವನ ಧ್ವಂಸ ಮಾಡಿದ್ದೇವು ಎಂದು ಆರೋಪಿಗಳು ಪೊಲೀಸರ ಎದುರು ಹೇಳಿದ್ದಾರೆ. ಪೋಲೀಸರ ಕಾರ್ಯಾಚರಣೆಯನ್ನು ಬಳ್ಳಾರಿ ಐಜಿಪಿ ನಂಜುಂಡಸ್ವಾಮಿ ಶ್ಲಾಘಿಸಿದ್ದಾರೆ.