ಮಡಿಕೇರಿ(ಜೂ.19): ಬರೆ ಕುಸಿತ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಎನ್‌ಡಿಆರ್‌ಎಫ್‌ ಸಿಬ್ಬಂದಿ ಚಾಮುಂಡೇಶ್ವರಿ ನಗರದ 5 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು.

ಜಿಲ್ಲೆಯಲ್ಲಿ ಕಳೆದ 4-5 ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಬುಧವಾರ ರಾತ್ರಿಯಿಂದ ಚಾಮುಂಡೇಶ್ವರಿ ಬಡಾವಣೆ ನಿವಾಸಿ ಶ್ಯಾಮ್‌ ಸುಂದರ್‌ ಎಂಬವರ ಮನೆಯ ಹಿಂದೆ ಗುಡ್ಡ ಕುಸಿಯುತ್ತಿರುವುದರಿಂದ ಅತೀ ಸೂಕ್ಷ್ಮ ಪ್ರದೇಶದಲ್ಲಿರುವ 5 ಕುಟುಂಬಗಳನ್ನು ಗಾಳಿಬೀಡು ಸಮೀಪದ ನವೋದಯ ಶಾಲೆಗೆ ಸ್ಥಳಾಂತರಿಸಲಾಯಿತು.

ಮುಂಬೈನಿಂದ ಬಂದು ಕ್ವಾರೆಂಟೈನ್ ಉಲ್ಲಂಘಿಸಿದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಕೇಸ್

ಇನ್ನೂ ಮಳೆ ಜಿನುಗುತ್ತಿರುವುದರಿಂದ ಮಣ್ಣು ತೇವವಾಗಿ ಯಾವಾಗ ಬೇಕಾದರೂ ಜಾರುವ ಪರಿಸ್ಥಿತಿ ಎದುರಾಗುವ ಭೀತಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಅನನ್ಯ ವಾಸುದೇವ್‌ ಅವರ ಸೂಚನೆಯಂತೆ ಎನ್‌ಡಿಆರ್‌ಎಫ್‌ ಸಿಬ್ಬಂದಿ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ನಿವಾಸಿಗಳಿಗೆ ತಿಳಿಸಲು ಯತ್ನಿಸಿದ್ದಾರೆ.

ಜಿಲ್ಲಾಡಳಿತ ಅಭಯ:

ಕೊಡಗು ಜಿಲ್ಲಾಧಿಕಾರಿ ನಿಯಂತ್ರಣ ಕೊಠಡಿಗೆ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದಲ್ಲಿ ಭೂ ಕುಸಿತ ಉಂಟಾದ ಬಗ್ಗೆ ಮಾಹಿತಿ ಬಂದಿದ್ದು, ಪರಿಹಾರ ಕಾರ್ಯಾಚರಣೆ ತಂಡವು ಭೇಟಿ ನೀಡಿ ಪರಿಶೀಲಿಸಿದೆ. ಇದೊಂದು ಸಣ್ಣ ಪ್ರಮಾಣದ ಭೂಕುಸಿತವಾಗಿದ್ದು, 5 ಕುಟುಂಬಗಳನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ಇತರ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಇನ್ನು ಪರಿಹಾರ ಕಾರ್ಯಾಚರಣೆ ತಂಡವು ಹತ್ತಿರದಲ್ಲೇ ಬೀಡು ಬಿಟ್ಟಿದ್ದು, ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಜಿಲ್ಲಾಡಳಿತ ಅಭಯ ನೀಡಿದೆ.

ಅಧಿಕಾರಿಗಳ ಭೇಟಿ: ಪರಿಶೀಲನೆ

ಕೊಡಗು ಜಿಲ್ಲಾಧಿಕಾರಿ ನಿಯಂತ್ರಣ ಕೊಠಡಿಗೆ ನಗರದ ಚಾಮುಂಡೇಶ್ವರಿ ನಗರದಲ್ಲಿ ಭೂ ಕುಸಿತ ಉಂಟಾದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಗುರುವಾರ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಮತ್ತು ನಗರಸಭೆ ಪೌರಾಯುಕ್ತ ಶ್ರೀನಿವಾಸ್‌ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಇದೇ ವೇಳೆ ಉಪ ವಿಭಾಗಾಧಿಕಾರಿ ಸ್ಥಳೀಯ ನಿವಾಸಿಗಳೊಂದಿಗೆ ಮಾತನಾಡಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಿದರು. ಅಲ್ಲದೆ ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು.

ಯೋಗ ದಿನ ಮನೆಯಲ್ಲೇ ಆಚರಿಸಿ: ಮೋದಿ

ನಗರಸಭೆ ಪೌರಾಯುಕ್ತ ಶ್ರೀನಿವಾಸ್‌ ಅವರು ಮಾಹಿತಿ ನೀಡಿ, ಈಗಾಗಲೇ ನಗರಸಭೆ ವತಿಯಿಂದ ಅಪಾಯದಂಚಿನಲ್ಲಿರುವ 127 ಮನೆಗಳಿಗೆ ನೋಟಿಸ್‌ ನೀಡಲಾಗಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ನೋಡಲ್‌ ಅಧಿಕಾರಿ ಅರುಂಧತಿ, ಮಡಿಕೇರಿ ತಹಸೀಲ್ದಾರ್‌ ಮಹೇಶ್‌ ಇತರರು ಇದ್ದರು.