ಉಡುಪಿ(ಜೂ.19): ಕೊರೋನಾ ಕ್ವಾರಂಟೈನ್‌ ನಿಯಮಗಳನ್ನು ಉಲ್ಲಂಘಿಸಿದ ಇಲ್ಲಿನ ಮೋಹನ್‌ ಸಾಲ್ಯಾನ್‌ ಎಂಬುವರ ಮೇಲೆ ಕಾಪು ಪುರಸಭಾ ಮುಖ್ಯಾಧಿಕಾರಿ ಅವರ ದೂರಿನಂತೆ ಕಾಪು ಪೊಲೀಸರು ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಮೋಹನ್‌ ಸಾಲ್ಯಾನ್‌, ಜೂ. 15ರಂದು ಮುಂಬೈಯಿಂದ ಬಂದಿದ್ದು, ನಿಯಮದಂತೆ ಅವರನ್ನು ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿತ್ತು. ಆದರೆ ಅವರು ಮನೆಯಲ್ಲಿ ನಿರ್ಬಂಧಿತರಾಗಿರುವುದನ್ನು ಬಿಟ್ಟು ಹೊರಗೆ ತಿರುಗಾಡುತ್ತಿದ್ದು, ಕೊರೋನಾ ಸೋಂಕು ಹರಡುವ ಸಾಧ್ಯತೆಗಳಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು.

ಯೋಗ ದಿನ ಮನೆಯಲ್ಲೇ ಆಚರಿಸಿ: ಮೋದಿ

ಈ ಹಿನ್ನೆಲೆಯಲ್ಲಿ ಜೂ. 16ರಂದು ಖುದ್ದು ಮುಖ್ಯಾಧಿಕಾರಿ ಅವರೆ ಆತನ ಮನೆಗೆ ಹೋಗಿ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದ್ದರು, ಆದರೂ ಅವರು ಮತ್ತೆ ನಿಯಮಗಳನ್ನು ಉಲ್ಲಂಘಿಸಿದ್ದರಿಂದ, ಗುರುವಾರ ಆತನ ಮೇಲೆ ಮುಖ್ಯಾಧಿಕಾರಿ ಅವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಅವರನ್ನು ಮನೆಯಿಂದ ಕಡ್ಡಾಯ ಸರ್ಕಾರಿ ಕ್ವಾರಂಟೈನ್‌ಗೆ ದಾಖಲಿಸಲಾಗಿದೆ.