ಕೊಡಗು: ದುಬಾರೆ ಸಾಕಾನೆ ಶಿಬಿರದಿಂದ 5 ಆನೆಗಳು ದಸರಾ ಜಂಬೂ ಸವಾರಿಗೆ ಆಯ್ಕೆ..!
ಇದೇ ತಿಂಗಳ ಒಳಗೆ ಬೆಂಗಳೂರಿನ ವಿಧಾನಸಭೆಯಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಅಲ್ಲಿ ಆನೆಗಳ ಆಯ್ಕೆ ಪಟ್ಟಿಯನ್ನು ಸಲ್ಲಿಸಲಾಗುವುದು. ಆನೆಗಳ ಆಯ್ಕೆಗೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಇಲಾಖೆಯ ತಜ್ಞರ ತಂಡ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಆನೆಯ ಶಿಬಿರಗಳಿಗೆ ತೆರಳಿ ಅವುಗಳ ಆರೋಗ್ಯ ಮತ್ತು ಕಾರ್ಯಕ್ಷಮತೆಯನ್ನು ಗಮನಿಸಿ ಆಯ್ಕೆ ಪ್ರಕ್ರಿಯೆ ಮಾಡಿದೆ.
ವರದಿ : ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಜು.24): ನಾಡಹಬ್ಬ ದಸರೆಯ ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಪೂರ್ಣಗೊಳಿಸಿದ್ದು ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದ 5 ಕಾಡಾನೆಗಳು ಆಯ್ಕೆಯಾಗಿವೆ. ಧನಂಜಯ, ಗೋಪಿ, ಕಂಜನ್, ಸುಗ್ರೀವ ಮತ್ತು ಪ್ರಶಾಂತ್ ಆನೆಗಳು ಆಯ್ಕೆಯಾಗಿವೆ.
ಇದೇ ತಿಂಗಳ ಒಳಗೆ ಬೆಂಗಳೂರಿನ ವಿಧಾನಸಭೆಯಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಅಲ್ಲಿ ಆನೆಗಳ ಆಯ್ಕೆ ಪಟ್ಟಿಯನ್ನು ಸಲ್ಲಿಸಲಾಗುವುದು. ಆನೆಗಳ ಆಯ್ಕೆಗೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಇಲಾಖೆಯ ತಜ್ಞರ ತಂಡ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಆನೆಯ ಶಿಬಿರಗಳಿಗೆ ತೆರಳಿ ಅವುಗಳ ಆರೋಗ್ಯ ಮತ್ತು ಕಾರ್ಯಕ್ಷಮತೆಯನ್ನು ಗಮನಿಸಿ ಆಯ್ಕೆ ಪ್ರಕ್ರಿಯೆ ಮಾಡಿದೆ. ಹಾರಂಗಿ ಸಾಕಾನೆ ಶಿಬಿರದಲ್ಲಿ ಇರುವ ವಿಕ್ರಮ ಆನೆಗೆ ಮದ ಬಂದಿದ್ದು ಅದನ್ನು ಸದ್ಯ ಕೈಬಿಡಲಾಗಿದೆ. ಜೊತೆಗೆ ಹೆಣ್ಣಾನೆಗಳಾದ ವಿಜಯ ಆನೆಗೆ ವಯಸ್ಸಾಗಿದೆ. ಹೀಗಾಗಿ ವಿಜಯ ಆನೆಯನ್ನು ದಸರಾ ಆನೆಗಳ ಆಯ್ಕೆಪಟ್ಟಿಯಿಂದ ಕೈಬಿಡಲಾಗಿದೆ.
ಮಳೆ ಜೊತೆಗೆ ಮಡಿಕೇರಿ ನಗರಸಭೆ ಎಡವಟ್ಟಿನಿಂದ ಕುಸಿಯುತ್ತಿರುವ ಸಾಯಿ ಕ್ರೀಡಾಂಗಣ ಜಂಕ್ಷನ್ ರಸ್ತೆ!
ಮತ್ತೊಂದೆಡೆ ಕಾವೇರಿ ಆನೆ ಗರ್ಭ ಧರಿಸಿರುವುದರಿಂದ ಆನೆಯನ್ನು ಈ ಬಾರಿ ದಸರಾ ಜಂಬೂಸವಾರಿ ಆನೆಗಳ ಲಿಸ್ಟ್ನಿಂದ ಕೈಬಿಡಲಾಗಿದೆ. ಉಳಿದ 5 ಆನೆಗಳ ಪಟ್ಟಿಯನ್ನು ಮೇಲಧಿಕಾರಿಗಳ ಒಪ್ಪಿಗೆಯ ನಂತರ ಆನೆಗಳ ಅಂತಿಮ ಪಟ್ಟಿಯನ್ನು ಆಯಾ ಶಿಬಿರ ವ್ಯಾಪ್ತಿಯ ಅರಣ್ಯಾಧಿಕಾರಿಗಳಿಗೆ ಕಳುಹಿಸಲು ಇಲಾಖೆ ನಿರ್ಧರಿಸಿದೆ.
ನವರಾತ್ರಿ ಆರಂಭಕ್ಕೆ ಇನ್ನು 80 ದಿನಗಳಷ್ಟೇ ಬಾಕಿ ಇದ್ದು, ಅಕ್ಟೋಬರ್ 12 ವಿಜಯದಶಮಿಯಂದು ಜಂಬೂ ಸವಾರಿ ನಡೆಯಲಿದೆ. ಈ ಬಾರಿ ಆನೆಗಳಿಗೆ ಹೆಚ್ಚಿನ ತರಬೇತಿ ನೀಡಲು ಇಲಾಖೆ ನಿರ್ಧರಿಸಿದೆ. ಹೀಗಾಗಿ 60 ದಿನಗಳ ಮುಂಚಿತವಾಗಿ ಆನೆಗಳನ್ನು ಕರೆತರಲು ಗಜಪಯಣ ಆಗಸ್ಟ್ ಎರಡನೇ ವಾರದಲ್ಲಿ ಮೈಸೂರಿನತ್ತ ಹೊರಡಲಿದೆ. ಅಂದರೆ ಅರಮನೆ ಪುರೋಹಿತರು ಗಜಪಯಣಕ್ಕೆ ಆಗಸ್ಟ್ 9 ಅಥವಾ 11 ಕ್ಕೆ ನಿಗದಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಎರಡು ಹಂತದಲ್ಲಿ ಗಜಪಯಣ ಸಾಗಲಿದೆ. ಒಂದೆಡೆ ಈಗಾಗಲೇ ಆನೆಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದರೆ ಮತ್ತೊಂದೆಡೆ ದಸರಾಕ್ಕೆ ತೆರಳುವ ಖುಷಿಯಲ್ಲಿ ಆನೆ ಆಯ್ಕೆಯಾಗಿರುವ ಮಾವುತರು ಇದ್ದಾರೆ. ಹಲವು ಬಾರಿ ಪಟ್ಟದ ಆನೆಯಾಗಿ ಕಾರ್ಯ ನಿರ್ವಹಿಸಿರುವ ಧನಂಜಯ ಆನೆಯ ಮಾವುತ ಭಾಸ್ಕರ್ ತೀವ್ರ ಸಂತಸ ವ್ಯಕ್ತಪಡಿಸಿದ್ದು ದಸರಾಕ್ಕೆ ತೆರಳಿ ಅಲ್ಲಿ ತಾಯಿ ಚಾಮುಂಡೇಶ್ವರಿ ಸೇವೆ ಮಾಡುವುದೇ ದೊಡ್ಡ ಸೌಭಾಗ್ಯ. ಅದಕ್ಕಾಗಿ ಕಾತರರಾಗಿದ್ದೇವೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಕಾವೇರಿ ಆನೆಯ ಮಾವುತ ಡೋಬಿ ಕೊಡಗಿನ ಹಲವು ಆನೆಗಳು ದಸರಾಕ್ಕೆ ಆಯ್ಕೆಯಾಗುವುದು ಬಹಳ ಸಂತಸದ ವಿಷಯ. ಇನ್ನಷ್ಟು ಆನೆಗಳು ಆಯ್ಕೆಯಾಗಲಿ ಎನ್ನುವುದು ನಮ್ಮ ಆಸೆ ಎಂದಿದ್ದಾರೆ.
ಏನೇ ಆಗಲಿ ಕೊಡಗಿನ ದುಬಾರೆ ಸಾಕಾನೆ ಶಿಬಿರದಿಂದ ಈ ಬಾರಿಯೂ ಐದು ಆನೆಗಳು ದಸರಾ ಜಂಬೂಸವಾರಿಯಲ್ಲಿ ತೆರಳಲು ಆಯ್ಕೆಯಾಗಿರುವುದು ಮಾವುತರು, ಕವಾಡಿಗರು ಅಷ್ಟೇ ಅಲ್ಲ, ಕೊಡಗಿನ ಜನತೆಗೂ ಸಾಕಷ್ಟು ಖುಷಿ ತಂದಿರುವುದಂತು ಸತ್ಯ.