ಅವ್ವನಿಗೆ ಕೆಲಸವಿಲ್ಲ, ಮಾಸ್ಕ್‌ ಮಾರುವ ಬಾಲಕ| ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತ| ದಿನ ದುಡಿದು ತಂದು ತಿನ್ನುವ ಪರಿಸ್ಥಿತಿ| ಕೆಲಸವಿಲ್ಲದೇ ಆದಾಯ ಇಲ್ಲ| ಕುಟುಂಬ ನಿರ್ವಹಣೆ ಕಷ್ಟ| 

ಶಿವಕುಮಾರ ಕುಷ್ಟಗಿ

ಗದಗ(ಮೇ.01): ‘ಮಾಸ್ಕ್‌ ತೊಗೋರಿ.... ಮಾಸ್ಕ್‌... ಮಾಸ್ಕ್‌ ಹಾಕ್ಕೋರಿ. ಕೊರೋನಾದಿಂದ ರಕ್ಷಣೆ ಪಡೆಯಿರಿ...’ ಇಲ್ಲಿಯ ಮಹೇಂದ್ರಕರ ವೃತ್ತದ ಬಳಿ ಪುಟ್ಟ ಬಾಲಕನೋರ್ವ ಕೈಯಲ್ಲಿ ಮಾಸ್ಕ್‌ ಹಿಡಿದು ಹೀಗೆ ಜಾಗೃತಿಯ ಮೂಡಿಸುತ್ತ ಮಾಸ್ಕ್‌ ವ್ಯಾಪಾರ ಮಾಡುತ್ತ ಗಮನ ಸೆಳೆಯುತ್ತಾನೆ. ಆದರೆ ಆತನ ಆ ಚೇತೋಹಾರಿ ದುಡಿಮೆ, ಜಾಗೃತಿಯ ಹಿಂದೆ ಕಣ್ಣೀರ ಕಥೆಯಿದೆ. ಕುಟುಂಬ ನಿರ್ವಹಣೆಯ ಕಠಿಣ ಶ್ರಮವಿದೆ. ಆಟವಾಡಬೇಕಾದ ಬಾಲಕನನ್ನು ಈ ದುಷ್ಟ ಕೊರೋನಾ ಬೀದಿಯಲ್ಲಿ ನಿಲ್ಲಿಸಿದೆ.

ಈತನ ಹೆಸರು ಮಹಮ್ಮದ ರಿಹಾನ್‌ ಪಠಾಣ. ಇಲ್ಲಿಯ ವಿದ್ಯಾದಾನ ಸಮಿತಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಾನೆ. ಆದರೆ 9ನೇ ವರ್ಷದಲ್ಲೇ ಸಂಸಾರದ ಭಾರ ಹೊರುವ ಜವಾಬ್ದಾರಿ ಬಿದ್ದಿದೆ. ತಂದೆ ತಾಯಿ ಚೆನ್ನಾಗಿಯೇ ಇದ್ದರು. ಆದರೆ ಅದ್ಯಾವುದೋ ಕಾರಣಕ್ಕೆ ದಂಪತಿಗಳ ಮಧ್ಯೆ ಬಿರುಕು ಬಂದಿದ್ದು. ಇದೀಗ ತಂದೆ ಬೇರಾಗಿದ್ದು, ತಾಯಿ ರಜಿಯಾ ಬೇಗಂ ಪಠಾಣ ಜೊತೆ ಮಹಮ್ಮದ ಇದ್ದಾನೆ. ಇವರಿಗೆ ಈಗ ಕಷ್ಟ ಎದುರಾಗಿದ್ದು. ತಾಯಿ ಬೇರೆಡೆ ಕೆಲಸ ಮಾಡುತ್ತಿದ್ದಾಳೆ. ಆದರೆ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಂಡಿದೆ. ದಿನ ದುಡಿದು ತಂದು ತಿನ್ನುವ ಪರಿಸ್ಥಿತಿ. ಕೆಲಸವಿಲ್ಲದೇ ಆದಾಯ ಇಲ್ಲ. ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ.

"

ಏನು ಮಾಡೋದು ಎಂದು ತಲೆ ಮೇಲೆ ಕೈಹೊತ್ತು ತಾಯಿ ಕುಳಿತಿದ್ದಾಗ ಧೈರ್ಯ ಹೇಳಿದ ಬಾಲಕ ನಿನಗೆ ಹೇಗಿದ್ದರೂ ಹೊಲಿಗೆ ಬರುತ್ತದೆ. ಮಾಸ್ಕ್‌ ತಯಾರಿಸಿ ಕೊಡು, ನಾನು ಮಾರುತ್ತೇನೆ ಎಂದು ಹೇಳಿ ತಾಯಿಯನ್ನು ಸಂತೈಸಿ ಇದೀಗ ಮಾಸ್ಕ್‌ ಮಾರುತ್ತಿದ್ದಾನೆ. ಪ್ರತಿ ದಿನ 15 ರಿಂದ 20 ಮಾಸ್ಕ್‌ ಮಾರುತ್ತಾನೆ. ಕೆಲವೊಮ್ಮೆ 25 ಮಾರಾಟವಾಗಿದ್ದೂ ಇದೆ. 150 ರಿಂದ 200 ಗಳಿಸುತ್ತಾನೆ. ಅದರಿಂದ ಬಂದ ಹಣದಲ್ಲೇ ಇದೀಗ ತಾಯಿ-ಮಗನ ಬದುಕು ಸಾಗುತ್ತಿದೆ.
‘ನಮ್ಮ ಬಳಿ ಮಾಸ್ಕ್‌ ಇದೆ. ಈ ಹಣ ಇಟ್ಕೋ’ ಎಂದು ಯಾರಾದರೂ ಕರುಣೆಯಿಂದ ಹಣ ಕೊಟ್ಟರೆ, ‘ಮಾಸ್ಕ್‌ ಖರೀದಿಸಿದರೆ ಮಾತ್ರ ನಿಮ್ಮ ಹಣ ತಗೋತೀಸಿ, ದಾನಬೇಡ’ ಎನ್ನುತ್ತಾನೆ ಮಹ್ಮದ್‌.

ಕಳೆದ ಬಾರಿಯೂ ದುಡಿದಿದ್ದ

ಕಳೆದ ಸಾಲಿನ ಲಾಕ್‌ಡೌನ್‌ ವೇಳೆಯಲ್ಲಿಯೂ ಈತ ಇದೇ ರೀತಿಯಲ್ಲಿ ಜನ ನಿಬಿಡ ಪ್ರದೇಶದಲ್ಲಿ ಮಾಸ್ಕ್‌ ಮಾರಾಟ ಮಾಡಿದ್ದ. ಆ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಸಭೆ ಆಯುಕ್ತರಾಗಿದ್ದ ಮನ್ಸೂರ್‌ ಅಲಿ ಭೇಟಿ ಮಾಡಿ ರಿಹಾನ್‌ಗೆ ಒಂದು ಸೈಕಲ್‌ ಉಡುಗೊರೆಯಾಗಿ ನೀಡಿದ್ದರು.

ನನ್ನ ಮಗನ ಧೈರ್ಯ, ಅವನ ಕಾಳಜಿಯೇ ನನ್ನ ಜೀವಾಳ. ನಾನು ಹೊಲಿದುಕೊಟ್ಟ ಮಾಸ್ಕ್‌ ಮಾರಾಟ ಮಾಡಿದ ಹಣದಲ್ಲಿ ಸದ್ಯಕ್ಕೆ ನಾವು ಜೀವನ ಸಾಗಿಸುತ್ತಿದ್ದೇವೆ. ಜನತಾ ಕರ್ಫ್ಯೂ ಮುಗಿದ ನಂತರ ನಾನು ಮತ್ತೆ ಕೆಲಸಕ್ಕೆ ಹೋಗುತ್ತೇನೆ ಎಂದು ಬಾಲಕನ ತಾಯಿ ರಜಿಯಾಬೇಗಂ ಪಠಾಣ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona