ಕೊರೋನಾ ಭೀತಿ: ಮುದ್ದೇಬಿಹಾಳಕ್ಕೆ 495 ವಲಸೆ ಕಾರ್ಮಿಕರ ಆಗಮನ
ರಾತ್ರಿ ಇಡಿ ಕಾರ್ಮಿಕರೊಂದಿಗೆ ಕಾಲ ಕಳೆದು ಕಾರ್ಮಿಕರನ್ನು ಕರೆ ತಂದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ| ಸರ್ಕಾರದ ಎಲ್ಲ ನಿಯಮಾನುಸಾರ ಪ್ರಕ್ರಿಯೆಗಳನ್ನು ಕೈಗೊಂಡು ಗೋವಾ ಸರ್ಕಾರದ ಪರವಾನಗಿ ಪಡೆದು ಕಾರ್ಮಿಕರನ್ನ ಕರೆತಂದ ಶಾಸಕ|
ಮುದ್ದೇಬಿಹಾಳ(ಮೇ.11): ಗೋವಾಕ್ಕೆ ಉದ್ಯೋಗ ಅರಸಿ ತೆರಳಿದ್ದ ತಾಲೂಕಿನ ಕಾರ್ಮಿಕರು ಲಾಕ್‌ಡೌನ್ ಆದೇಶದಿಂದಾಗಿ ತಾಲೂಕಿಗೆ ಮರಳಲು ಆಗದೇ ಗೋವಾದಲ್ಲಿಯೇ ಸಂಕಷ್ಟ ಅನುಭವಿಸುತ್ತಿದ್ದವರನ್ನು ಮತಕ್ಷೇತ್ರದ ಸುಮಾರು 14 ಬಸ್‌ಗಳ ಮೂಲಕ 495 ಜನ ಕೂಲಿ ಕಾರ್ಮಿಕರನ್ನು ಸ್ವಗ್ರಾಮಕ್ಕೆ ಮರಳಿ ಕರೆ ತರುವಲ್ಲಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಯಶಸ್ವಿಯಾದರು.
ಲಾಕ್‌ಡೌನ್‌ನಿಂದಾಗಿ ಗೋವಾದಲ್ಲಿ ಸಿಲುಕಿಕೊಂಡಿದ್ದ ಮತಕ್ಷೇತ್ರ ಮೂಲ ಕಾರ್ಮಿಕರನ್ನು ರಕ್ಷಿಸಿ ಅವರನ್ನು ತಮ್ಮ ತಮ್ಮ ಸ್ವಗ್ರಾಮದಲ್ಲಿರುವ ಕುಟುಂಬಗಳನ್ನು ಸೇರುವಂತೆ ಮಾಡುವ ಉದ್ದೇಶದಿಂದ ಶುಕ್ರವಾರ ಗೋವಾಗೆ ತೆರಳಿದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಗೋವಾ ಗಡಿ ಭಾಗವಾದ ಖಾನಾಪುರ- ಚೋರ್ಲಾ ಚೇಕ್‌ಪೋಸ್ಟ್‌ಗೆ ತೆರಳಿದ್ದರು. ಅಲ್ಲಿನ ಕೊರೋನಾ ಜಾಗೃತಿ ತಂಡ, ಸರ್ಕಾರಿ ಅಧಿಕಾರಿಗಳ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ತೀವ್ರ ತೊಂದರೆ ಅನುಭವಿಸುತ್ತಿರುವ ಕಾರ್ಮಿಕರ ರಕ್ಷಣೆ ಹಾಗೂ ಆರೋಗ್ಯ ತಪಾಸಣೆ ಮತ್ತು ವಾಪಸ್ ಕರೆದುಕೊಂಡುವ ಹೋಗುವ ಕುರಿತು, ಕಾನೂನಿನ ತೊಡಕುಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸುವ ಮೂಲಕ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಗೋವಾ ಚೋರ್ಲಾ ಚೆಕ್‌ಪೋಸ್ಟ್‌ನ ಜಾಗೃತಿ ಮುಖ್ಯ ಮೇಲುಸ್ತುವಾರಿ ಅಧಿಕಾರಿಗಳೊಂದಿಗೆ ಮಾತನಾಡಿಸಿ ಮಾಹಿತಿ ಪಡೆದುಕೊಂಡರು.
ದಶಕದ ಬೇಡಿಕೆ: ಕೆರೆ ತುಂಬಿಸಿ ನೀರಿನ ಹಾಹಾಕಾರ ಈಡೇರಿಸಿದ ಶಾಸಕ ನಡಹಳ್ಳಿ
ದಾರಿ ಮಧ್ಯದಲ್ಲಿ ಊಟ, ಕುಡಿಯುವ ನೀರಿನ ವ್ಯವಸ್ಥೆ
ಶಾಸಕ ನಡಹಳ್ಳಿಯವರು ತಮ್ಮ ಮತಕ್ಷೇತ್ರ ಕಾರ್ಮಿಕರ ರಕ್ಷಣೆಯಲ್ಲಿರುವ ಉತ್ಸಾಹ ಮತ್ತು ಕಾಳಜಿಯನ್ನು ಅರಿತ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಅವರನ್ನು ಗೋವಾದ ಗಡಿ ಚೋರ್ಲಾ ಚೆಕ್‌ಪೋಸ್ಟ್‌ಗೆ ಕಳುಹಿಸಿಕೊಟ್ಟಿದ್ದರು. ನಂತರ ಅಲ್ಲಿಂದ ಸರ್ಕಾರದ ಎಲ್ಲ ನಿಯಮಾನುಸಾರ ಪ್ರಕ್ರಿಯೆಗಳನ್ನು ಕೈಗೊಂಡು ಗೋವಾ ಸರ್ಕಾರದ ಪರವಾನಗಿ ಪಡೆದು ಶನಿವಾರವೇ ಅಲ್ಲಿಂದ ನಿರ್ಗಮಿಸಿದ ಕಾರ್ಮಿಕರಿಗೆ ದಾರಿ ಮಧ್ಯದಲ್ಲಿ ಊಟ ಹಾಗೂ ಕುಡಿಯುವ ನೀರನ್ನು ಭಾನುವಾರ ಬೆಳಗ್ಗೆ ನಸುಕಿನ ಜಾವ 4 ಗಂಟೆ ಸುಮಾರಿಗೆ 14 ಸರ್ಕಾರಿ ಬಸ್‌ಗಳಲ್ಲಿ ಸುಮಾರು 495 ಜನ ಕಾರ್ಮಿಕರನ್ನು ಕರೆ ತಂದಿದ್ದಾರೆ
ದಿನಸಿ ಆರೋಗ್ಯ ಕಿಟ್ ನೀಡಿದ ಶಾಸಕ
ಈ ವೇಳೆ ಮುದ್ದೇಬಿಹಾಳ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ ಗೋವಾದಿಂದ ಬಂದಿಳಿದಿರುವ ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು. ಬಳಿಕ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ)ಯವರು ಪ್ರತಿಯೊಬ್ಬರಿಗೂ ಉಪಾಹಾರ, ಕುಡಿಯುವ ನೀರು ಪೂರೈಸಿದರು. ಅಲ್ಲದೇ ಮುಂದಿನ 15 ದಿನಗಳವರೆಗೆ ಅನುಕೂಲವಾಗುವಂತೆ ಉಚಿತ ದಿನಸಿ ಆರೋಗ್ಯ ಕಿಟ್ ನೀಡಿ ಕೊರೋನಾ ವೈರಸ್ ಹರಡುವಿಕೆಯನ್ನು ಹೇಗೆಲ್ಲ ತಡೆಯಬೇಕು? ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೋಗದಿಂದ ಪಾರಾಗುವುದರ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಜಿ.ಎಸ್.ಮಳಗಿ, ಸಿಪಿಐ ಆನಂದ ವಾಗ್ಮೋರೆ, ಪಿಎಸೈ ಮಲ್ಲಪ್ಪ ಮಡ್ಡಿ, ಪುರಸಭೆ ಮುಖ್ಯಾಧಿಕಾರಿ ಜಿ.ಎಚ್.ಕಾಸೆ, ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ, ಕಿರಿಯ ಆರೋಗ್ಯ ಸಹಾಯಕ ಕೊರೋನಾ ಜಾಗೃತಿ ನೋಡಲ್ ಅಧಿಕಾರಿ ಎಂ.ಎಸ್.ಗೌಡರ ಸೇರಿದಂತೆ ಮತ್ತಿತರರು ಇದ್ದರು.