Asianet Suvarna News Asianet Suvarna News

Covid Crisis: ಬೆಂಗಳೂರಿನಲ್ಲಿ ಕೊರೋನಾ ಸ್ಫೋಟ: 500 ಗಡಿಗೆ ಸೋಂಕಿನ ಸಂಖ್ಯೆ

ನಗರದಲ್ಲಿ ಕೊರೋನಾ ಸೋಂಕಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಹೊಸ ಪ್ರಕರಣಗಳು 500 ಗಡಿಗೆ ಸಮೀಪಿಸಿವೆ. ಅಲ್ಲದೆ, ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.3 ಆಸುಪಾಸಿಗೆ ಬಂದಿದ್ದು, ಸಕ್ರಿಯ ಪ್ರಕರಣಗಳು ಮೂರು ಸಾವಿರಕ್ಕೆ ಏರಿಕೆಯಾಗಿವೆ. 

494 new coronavirus cases on june 10th in bengaluru gvd
Author
Bangalore, First Published Jun 11, 2022, 3:03 AM IST

ಬೆಂಗಳೂರು (ಜೂ.11): ನಗರದಲ್ಲಿ ಕೊರೋನಾ ಸೋಂಕಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಹೊಸ ಪ್ರಕರಣಗಳು 500 ಗಡಿಗೆ ಸಮೀಪಿಸಿವೆ. ಅಲ್ಲದೆ, ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.3 ಆಸುಪಾಸಿಗೆ ಬಂದಿದ್ದು, ಸಕ್ರಿಯ ಪ್ರಕರಣಗಳು ಮೂರು ಸಾವಿರಕ್ಕೆ ಏರಿಕೆಯಾಗಿವೆ. ಶುಕ್ರವಾರ 494 ಮಂದಿಗೆ ಸೋಂಕು ತಗುಲಿದೆ, 209 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 3061 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 17 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ.2.9ರಷ್ಟುದಾಖಲಾಗಿದೆ. 

ಗುರುವಾರದಷ್ಟೇ ಸೋಂಕು ಪರೀಕ್ಷೆಗಳು ನಡೆದಿದ್ದರೂ ಹೊಸ ಪ್ರಕರಣಗಳು ಮಾತ್ರ 36 ಹೆಚ್ಚಳವಾಗಿವೆ. (ಗುರುವಾರ 458 ಕೇಸ್‌, ಸಾವು ಶೂನ್ಯ). ಈ ಹಿಂದೆ ಕಳೆದ ಫೆಬ್ರವರಿ 20ರಂದು 485 ಪ್ರಕರಣಗಳು ಪತ್ತೆಯಾಗಿದ್ದವು. ಆ ಬಳಿಕ ಅತಿ ಹೆಚ್ಚು ಪ್ರಕರಣಗಳು ಶುಕ್ರವಾರ ದಾಖಲಾಗಿವೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.86 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.67 ಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 16,965 ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.

Covid 19 ಭಾರತಕ್ಕೆ ಮತ್ತೆ ವಕ್ಕರಿಸಿದ ಕೊರೋನಾ, ಒಂದೇ ದಿನ 7 ಸಾವಿರ ಕೇಸ್!

ಪ್ರತಿ ನೂರರಲ್ಲಿ 3 ಮಂದಿಗೆ ಸೋಂಕು!: ಸೋಂಕಿನ ಹೊಸ ಪ್ರಕರಣಗಳು ಮಾತ್ರವಲ್ಲದೇ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರವು ಶೇ.2.9ಕ್ಕೆ ಹೆಚ್ಚಿದೆ. ಅಂದರೆ, ಸೋಂಕು ಪರೀಕ್ಷೆಗೆ ಒಗಾಗುತ್ತಿರುವ ಪ್ರತಿ 100 ಮಂದಿಯಲ್ಲಿ ಮೂರು ಮಂದಿಗೆ ಸೋಂಕು ದೃಢಪಡುತ್ತಿದೆ. ಮೇನಲ್ಲಿ ಸರಾಸರಿ ಪಾಸಿಟಿವಿಟಿ ದರ ಶೇ.1.2ರಷ್ಟಿದ್ದು, ಕಳೆದ ವಾರ ಶೇ.2ಕ್ಕೆ ತಲುಪಿತ್ತು. ಕಳೆದ ಮೂರು ದಿನಗಳಿಂದ ಏರಿಕೆಯಾಗುತ್ತಾ ಸಾಗಿ ಶೇ.3ರ ಗಡಿಗೆ ಬಂದು ನಿಂತಿದೆ.

ಸೋಂಕಿತರಲ್ಲಿ ಶೇ.96 ಮಂದಿ ನಗರದಲ್ಲಿ!: ರಾಜ್ಯದಲ್ಲಿ 3177 ಸಕ್ರಿಯ ಸೋಂಕಿತರಿದ್ದರೂ ಈ ಪೈಕಿ ಬೆಂಗಳೂರು ಒಂದರಲ್ಲಿಯೇ 3061 ಮಂದಿ ಚಿಕಿತ್ಸೆ/ ಆರೈಕೆಯಲ್ಲಿದ್ದಾರೆ. ಕಳೆದ ಎರಡು ವಾರದಿಂದಲೂ ರಾಜ್ಯದಲ್ಲಿ ನಿತ್ಯ ವರದಿಯಾಗುವ ಪ್ರಕರಣಗಳ ಪೈಕಿ ಶೇ.90ಕ್ಕೂ ಅಧಿಕ ಹೊಸ ಪ್ರಕರಣಗಳು ಬೆಂಗಳೂರಿನಲ್ಲಿಯೇ ಪತ್ತೆಯಾಗುತ್ತಿದ್ದವು. ನಿರಂತರ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆ ಸಕ್ರಿಯ ಸೋಂಕಿತರ ಸಂಖ್ಯೆ ಮೂರು ಸಾವಿರ ಗಡಿ ದಾಟಿದೆ. ಈ ಸಕ್ರಿಯ ಸೋಂಕಿತರ ಪೈಕಿ 20 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಈ ಪೈಕಿ ಒಬ್ಬರು ಮಾತ್ರ ಐಸಿಯುನಲ್ಲಿ, 19 ಮಂದಿ ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಕಿ 3041 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.

ಪರೀಕ್ಷೆ ಹೆಚ್ಚಳ; ಸೋಂಕು ಹೆಚ್ಚಳ: ಮೇ ಅಂತ್ಯದಲ್ಲಿ ಸರಾಸರಿ 10 ಸಾವಿರ ಇದ್ದ ಪರೀಕ್ಷೆಗಳು ಪ್ರಸಕ್ತ ವಾರ 15 ಸಾವಿರಕ್ಕೆ ಹೆಚ್ಚಿವೆ. ಕಳೆದ ಎರಡು ದಿನಗಳಿಂದ 17 ಸಾವಿರ ಪರೀಕ್ಷೆಗಳು ನಡೆಯುತ್ತಿವೆ. ರಾಜ್ಯದ ಒಟ್ಟಾರೆ ಪರೀಕ್ಷೆಗಳ ಪೈಕಿ ಶೇ.75 ರಷ್ಟುಬೆಂಗಳೂರಿನಲ್ಲಿಯೇ ನಡೆಯುತ್ತಿದ್ದು, ಈ ಕಾರಣದಿಂದಲೂ ಹೆಚ್ಚು ಹೊಸ ಪ್ರಕರಣಗಳು ಇಲ್ಲಿ ಪತ್ತೆಯಾಗುತ್ತಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಹೊರವಲಯದಲ್ಲಿ ಹೆಚ್ಚು ಕೇಸ್‌: ಸದ್ಯ ಸೋಂಕಿನ ಹೊಸ ಪ್ರಕರಣಗಳು ಐಟಿ ಕಂಪನಿಗಳು ಹೆಚ್ಚಿರುವ ನಗರದ ಹೊರವಲಯದಲ್ಲಿಯೇ ಪತ್ತೆಯಾಗುತ್ತಿವೆ. ಅತಿ ಹೆಚ್ಚು ಪ್ರಕರಣಗಳಿರುವ ಬಹುತೇಕ ವಾರ್ಡ್‌ಗಳು ಮಹಾದೇವಪುರ ವಲಯದಲ್ಲಿವೆ. ಸದ್ಯ 5ಕ್ಕಿಂತ ಕಡಿಮೆ ಪ್ರಕರಣಗಳಿರುವ 11 ಕ್ಲಸ್ಟರ್‌ ಪ್ರದೇಶಗಳು ಮಹಾದೇವಪುರ ವಲಯದಲ್ಲಿಯೇ ಗುರುತಿಸಲಾಗಿದೆ. ಶೂನ್ಯ ಪ್ರಕರಣ ವಾರ್ಡ್‌ಗಳು ಬಹುತೇಕ ಬೆಂಗಳೂರು ದಕ್ಷಿಣ ವಲಯದಲ್ಲಿವೆ.

ಒಂದೇ ವಾರದಲ್ಲಿ ದುಪ್ಪಟ್ಟು ಪ್ರಕರಣ: ಬೆಂಗಳೂರಿನಲ್ಲಿ ಕೊರೋನಾ ಹೊಸ ಪ್ರಕರಣಗಳು ಕೇವಲ ನಾಲ್ಕನೇ ದಿನಕ್ಕೆ ದುಪ್ಪಟ್ಟಾಗಿವೆ. ಜೂನ್‌ 6ರಂದು 222 ಇದ್ದ ಹೊಸ ಪ್ರಕರಣಗಳು ಸದ್ಯ 494ಕ್ಕೆ ಹೆಚ್ಚಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟುಪರೀಕ್ಷೆ ಹೆಚ್ಚಳಕ್ಕೆ ಬಿಬಿಎಂಪಿ ಮುಂದಾಗಿದ್ದು, ಹೀಗಾಗಿ ಮತ್ತೆ ಸೋಂಕು ಏರಿಕೆಯಾಗುವ ಸಾಧ್ಯತೆಗಳಿವೆ.

ವಾರದಿಂದ ಶೂನ್ಯ ಪ್ರಕರಣಗಳಿರುವ ವಾರ್ಡ್‌ಗಳು: ಪದ್ಮನಾಭನಗರ, ಜಕ್ಕಸಂದ್ರ, ಗುರಪ್ಪನಪಾಳ್ಯ, ಗಾಳಿ ಆಂಜನೇಯ ದೇವಾಲಯ, ಶ್ರೀನಗರ, ಸಿದ್ದಾಪುರ, ಸುಂಕೇನಹಳ್ಳಿ, ಅಜಾದ್‌ನಗರ, ಚಲವಾದಿಪಾಳ್ಯ, ರಾಯಾಪುರ.

ಗಾಳಿಯಲ್ಲೂ ಹರಡುತ್ತಂತೆ ಮಂಕಿಪಾಕ್ಸ್ ವೈರಸ್‌, ಮಾಸ್ಕ್ ಹಾಕಿಕೊಳ್ಳುವಂತೆ ತಜ್ಞರ ಸಲಹೆ

ವಾರದಿಂದ ಸೋಂಕು ಹೆಚ್ಚಿರುವ 10 ವಾರ್ಡ್‌ಗಳು
ವಾರ್ಡ್‌- ಸರಾಸರಿ ಪ್ರಕರಣಗಳು

ಬೆಳ್ಳಂದೂರು- 43
ದೊಡ್ಡ ನೆಕ್ಕುಂದಿ - 17
ವರ್ತೂರು - 14
ಹಗದೂರು - 11
ಕಾಡುಗೋಡಿ - 11
ಹೂಡಿ - 8
ಹೊರಮಾವು - 8
ಎಚ್‌ಎಸ್‌ಆರ್‌ ಲೇಔಟ್‌ - 7
ಬೇಗೂರು - 7
ಗರುಡಾಚಾರ್ಯ ಪಾಳ್ಯ- 5

Follow Us:
Download App:
  • android
  • ios