ಗಲ್ಫ್‌ನಿಂದ 2ನೇ ಸುತ್ತಿನಲ್ಲಿ 49 ಮಂದಿ ಊರಿಗೆ: ನೇರವಾಗಿ ಕ್ವಾರಂಟೈನ್‌ಗೆ
ದುಬೈ ಮತ್ತು ಅಕ್ಕಪಕ್ಕದ ಇತರ ಕೊಲ್ಲಿ ರಾಷ್ಟ್ರಗಳಿಂದ 49 ಮಂದಿ ಸೋಮವಾರ ಮಧ್ಯರಾತ್ರಿ ಉಡುಪಿ ತಲುಪಿದ್ದಾರೆ. ವಂದೇ ಭಾರತ್ ಮಿಷನ್‌ನಡಿ ಅವರು ವಿಮಾನದ ಮೂಲಕ ರಾತ್ರಿ 8 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಉಡುಪಿ(ಮೇ 20): ದುಬೈ ಮತ್ತು ಅಕ್ಕಪಕ್ಕದ ಇತರ ಕೊಲ್ಲಿ ರಾಷ್ಟ್ರಗಳಿಂದ 49 ಮಂದಿ ಸೋಮವಾರ ಮಧ್ಯರಾತ್ರಿ ಉಡುಪಿ ತಲುಪಿದ್ದಾರೆ. ವಂದೇ ಭಾರತ್ ಮಿಷನ್‌ನಡಿ ಅವರು ವಿಮಾನದ ಮೂಲಕ ರಾತ್ರಿ 8 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಅಲ್ಲಿ ಅವರನ್ನು ಆರೋಗ್ಯ ತಪಾಸಣೆಗೊಳಪಡಿಸಿ, ಕೈಗೆ ಕ್ವಾರಂಟೈನ್ ಸೀಲ್ ಹಾಕಿ, ಗಂಟಲದ್ರವವನ್ನು ಸಂಗ್ರಹಿಸಲಾಯಿತು. ನಂತರ 2 ಬಸ್‌ಗಳಲ್ಲಿ ಉಡುಪಿಗೆ ಕರೆ ತರಲಾಯಿತು.
ಮಸ್ಕತ್, ಕತಾರ್‌ನಿಂದ ಕನ್ನಡಿಗರ ಕರೆತರಲು ಸಿದ್ಧತೆ, ಸೌದಿ ಅರೇಬಿಯಾ ವಿಮಾನ ನಿಗದಿ..?
ಉಡುಪಿಯ ಬೋರ್ಡ್ ಸ್ಕೂಲ್‌ನಲ್ಲಿ ಅವರನ್ನು ನೋಡಲ್ ಅಧಿಕಾರಿ, ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರ ಮತ್ತಿತರರು ಬರಮಾಡಿಕೊಂಡರು. ಅಲ್ಲಿ ಅವರ ನೋಂದಣಿ ಮಾಡಿಸಿ, ಅವರ ಇಚ್ಛೆಯಂತೆ ಹೊಟೇಲ್ ಕ್ವಾರಂಟೈನ್ ಮತ್ತು ಹಾಸ್ಟೆಲ್ ಕ್ವಾರಂಟೈನ್‌ಗೆ ಕಳುಹಿಸಲಾಯಿತು.
ಅವರಲ್ಲಿ ಉಡುಪಿ ತಾಲೂಕಿನ 18, ಬ್ರಹ್ಮಾವರ ತಾಲೂಕಿನ 8, ಕುಂದಾಪುರ ತಾಲೂಕಿನ 7, ಕಾರ್ಕಳ ತಾಲೂಕಿನ 6, ಕಾಪು ತಾಲೂಕಿನ 5, ಬೈಂದೂರು ತಾಲೂಕಿನ 2 ಮತ್ತು ಹೆಬ್ರಿ ತಾಲೂಕಿನ 2 ಮಂದಿ ಸೇರಿದ್ದಾರೆ.
ಕೆಎಂಸಿಯಲ್ಲಿ ಕೋವಿಡ್ ಲ್ಯಾಬ್ ಕಾರ್ಯಾರಂಭ
ಬಂದವರಲ್ಲಿ ವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರೂ ಇದ್ದಾರೆ. ಅವರೆಲ್ಲರನ್ನೂ ಪ್ರತಿದಿನ ಆರೋಗ್ಯಾಧಿಕಾರಿಗಳು ಭೇಟಿಯಾಗಿ ನಿಗಾ ವಹಿಸಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.
ಈಗಾಗ್ಲೆ ದುಬೈಯಿಂದ ಬಂದಿದೆ ಕೊರೋನಾ
ಉಡುಪಿ ಜಿಲ್ಲೆಗೆ ಈಗಾಗಲೇ ದುಬೈಯಿಂದ ಕೊರೋನಾ ಸೋಂಕು ಬಂದಿದೆ. ಮೊದಲ ಹಂತದಲ್ಲಿ ದುಬೈಯಿಂದ ಉಡುಪಿಗೆ 59 ಮಂದಿ ಬಂದಿಳಿದಿದ್ದರು. ಅವರಲ್ಲಿ ಐವರಿಗೆ ಕೊರೋನಾ ಸೋಂಕಿರುವುದು ಒಂದೇ ದಿನ ಪತ್ತೆಯಾಗಿತ್ತು. ಅದಕ್ಕೂ ಮೊದಲು ಮಾಚ್‌ರ್ ತಿಂಗಳಲ್ಲಿ ದುಬೈಯಿಂದ ಬಂದ ಇಬ್ಬರಿಗೆ ಕೊರೋನಾ ಪತ್ತೆಯಾಗಿದೆ. ಆದ್ದರಿಂದ ಮುಂಬೈಯಿಂದ ಬಂದವರಂತೆ ದುಬೈಯಿಂದ ಬರುವವರ ಮೇಲೆ ಜಿಲ್ಲಾಡಳಿತ ವಿಶೇಷ ನಿಗಾ ವಹಿಸಿದೆ.
ಚಿತ್ರದುರ್ಗದ ಯುವತಿಗೆ ಕೋವಿಡ್ ಲಕ್ಷಣಗಳೇ ಇರಲಿಲ್ಲ !
ಚಿತ್ರದುರ್ಗದಿಂದ ಯುವತಿ ಕ್ಯಾನ್ಸರ್ ಚಿಕಿತ್ಸೆಗಾಗಿ ಬಂದಿದ್ದರು. ಅವರಿಗೆ ಕೊರೋನಾ ಸಂಬಂಧಿಸಿದ ಯಾವುದೇ ಗುಣಲಕ್ಷಣಗಳಿರಲಿಲ್ಲ. ಆಕೆಗೆ ಚಿಕಿತ್ಸೆ ನೀಡಿದ ಕೆ.ಎಂ.ಸಿ. ವೈದ್ಯರು, ಸಿಬ್ಬಂದಿ ಎಲ್ಲ ಸುರಕ್ಷೆಗಳನ್ನು ತೆಗೆದುಕೊಂಡಿದ್ದರು. ಆದ್ದರಿಂದ ಅವರ್ಯಾರನ್ನು ಕ್ವಾರಂಟೈನ್ ಮಾಡುವ ಅಗತ್ಯ ಇಲ್ಲ. ಆಕೆಯ ಬಗ್ಗೆ ಚಿತ್ರದುರ್ಗ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಅವರು ಆಕೆಯ ಟ್ರಾವೆಲ್ ಹಿಸ್ಟರಿ ನೋಡುತ್ತಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.