ಯುವಶಕ್ತಿ ಜಾಗೃತಿ, ವ್ಯಸನಮುಕ್ತ ಸಮಾಜ ಹಾಗೂ ಕನ್ನಡ ನಾಡು-ನುಡಿಯ ರಕ್ಷಣೆಗಾಗಿ ಇಳಕಲ್ಲಿನ ಈರಣ್ಣ ಕುಂದರಗಿಮಠ ಅವರು ಕೊಪ್ಪಳದಿಂದ ಮೈಸೂರಿಗೆ ಕೈಬಿಟ್ಟು ಬೈಕ್ ಓಡಿಸುವ ಸಾಹಸ ಯಾನ ಕೈಗೊಂಡಿದ್ದಾರೆ. ಗವಿಮಠದ ಶ್ರೀಗಳು ಚಾಲನೆ ನೀಡಿದ ಈ 460 ಕಿ.ಮೀ. ಯಾನವು ಯುವಜನರಲ್ಲಿ ಸಕಾರಾತ್ಮಕ ಸಂದೇಶ ಸಾರುವ ಗುರಿ.
ಕೊಪ್ಪಳ (ಅ.20) ಯುವಶಕ್ತಿ ಜಾಗೃತಿ, ವ್ಯಸನಮುಕ್ತ ಸಮಾಜ ಹಾಗೂ ಕನ್ನಡ ನಾಡು-ನುಡಿಯ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನ ಬೈಕ್ ಸಾಹಸಿ ಈರಣ್ಣ ಜಿ. ಕುಂದರಗಿಮಠ ಅವರು ಕೊಪ್ಪಳದ ಗವಿಮಠದಿಂದ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದವರೆಗೆ ಕೈಬಿಟ್ಟು ಬೈಕ್ ಸಾಹಸ ಯಾನ ಕೈಗೊಂಡಿದ್ದಾರೆ.
ಗವಿಮಠದಿಂದ ಸಾಹಸ ಯಾನಕ್ಕೆ ಚಾಲನೆ
ಸೋಮವಾರ ಬೆಳಗ್ಗೆ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಸಾಹಸ ಯಾನಕ್ಕೆ ಚಾಲನೆ ನೀಡಿದರು. ಸುಮಾರು 460 ಕಿ.ಮೀ. ದೂರದ ಈ ಯಾನ ಹೊಸಪೇಟೆ, ಕೂಡ್ಲಿಗಿ, ಚಿತ್ರದುರ್ಗ, ಹಿರಿಯೂರು, ಶಿರಾ, ತುಮಕೂರು, ಕುಣಿಗಲ್, ಮದ್ದೂರು ಹಾಗೂ ಮಂಡ್ಯ ಮಾರ್ಗವಾಗಿ ಸಾಗಲಿದೆ.
ಯಾರೂ ಈ ಸಾಹಸಿ?
ಈರಣ್ಣ ಅವರು ಈ ಹಿಂದೆ ಬಾಗಲಕೋಟೆಯಿಂದ ಬೆಂಗಳೂರಿಗೆ 510 ಕಿ.ಮೀ. ಹಾಗೂ ಕಲಬುರಗಿಯಿಂದ ಬೆಂಗಳೂರಿಗೆ 860 ಕಿ.ಮೀ. ದೂರವನ್ನು ಕೈಬಿಟ್ಟು ಬೈಕ್ ಚಲಾಯಿಸಿ ಗಮನ ಸೆಳೆದಿದ್ದರು.
ಕನ್ನಡ ಧ್ವಜ ಹಾಗೂ ನಾಡದೇವತೆ ಚಾಮುಂಡೇಶ್ವರಿಯ ಲಾಂಛನದೊಂದಿಗೆ ಸಾಗುವ ಈ ಯಾನವು ಯುವಜನರಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅಭಿಮಾನ ಮೂಡಿಸುವ ಆಶಯ ಹೊಂದಿದೆ. ಯುವಕರು ವ್ಯಸನಗಳಿಂದ ದೂರವಿದ್ದು, ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸಂದೇಶವನ್ನೂ ಸಾರಲಿದೆ.


