Asianet Suvarna News Asianet Suvarna News

ಮಂಡ್ಯ ಜಿಲ್ಲೆಯ 449 ಅಪಘಾತಗಳಲ್ಲಿ 456 ಮಂದಿ ಸಾವು: 2034 ಮಂದಿಗೆ ಸಣ್ಣಪುಟ್ಟ ಗಾಯ

ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿರುವ 449 ಅಪಘಾತ ಪ್ರಕರಣಗಳಲ್ಲಿ 456 ಮಂದಿ ಸಾವನ್ನಪ್ಪಿದ್ದು, 1529 ಜನರು ತೀವ್ರವಾಗಿ ಗಾಯಗೊಂಡಿದ್ದರೆ, 2034 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿರುವುದಾಗಿ ಪೊಲೀಸ್‌ ಇಲಾಖೆ ವರದಿಯಿಂದ ದೃಢಪಟ್ಟಿದೆ. 

456 people died in 449 accidents in Mandya district gvd
Author
First Published Jan 13, 2023, 9:05 PM IST

ವಿಶೇಷ ವರದಿ

ಮಂಡ್ಯ (ಜ.13): ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿರುವ 449 ಅಪಘಾತ ಪ್ರಕರಣಗಳಲ್ಲಿ 456 ಮಂದಿ ಸಾವನ್ನಪ್ಪಿದ್ದು, 1529 ಜನರು ತೀವ್ರವಾಗಿ ಗಾಯಗೊಂಡಿದ್ದರೆ, 2034 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿರುವುದಾಗಿ ಪೊಲೀಸ್‌ ಇಲಾಖೆ ವರದಿಯಿಂದ ದೃಢಪಟ್ಟಿದೆ. ಅತಿ ವೇಗ, ಕುಡಿದು ವಾಹನ ಚಾಲನೆ, ಹೆಲ್ಮೆಟ್‌ ಧರಿಸದಿರುವುದು ಅಪಘಾತಗಳಿಗೆ ಮುಖ್ಯ ಕಾರಣ ಎನ್ನುವುದು ಪೊಲೀಸ್‌ ಇಲಾಖೆಯ ವಾದವಾಗಿದೆ. ಆದರೆ, ಗುಂಡಿಗಳಿಂದ ಕೂಡಿದ ರಸ್ತೆಗಳು, ಅವೈಜ್ಞಾನಿಕ ರಸ್ತೆ ಡುಬ್ಬಗಳ ನಿರ್ಮಾಣ, ಅವ್ಯವಸ್ಥಿತ ವಾಹನಗಳ ಸಂಚಾರ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸದಿರುವುದು ಕೂಡ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.

ವರುಣಾರ್ಭಟಕ್ಕೆ ಗ್ರಾಮೀಣ ರಸ್ತೆಗಳಲ್ಲವೂ ಕಿತ್ತುಬಂದಿವೆ. ವಾಹನಗಳು ಓಡಾಡಲು ಸಾಧ್ಯವಾಗದ ರೀತಿಯಲ್ಲಿ ಹಳ್ಳ-ಗುಂಡಿಗಳು ನಿರ್ಮಾಣವಾಗಿವೆ. ಸಾರ್ವಜನಿಕರ ಸುರಕ್ಷತೆ ಹಾಗೂ ವಾಹನಗಳ ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ನಿಗದಿತ ಕಾಲಮಿತಿಯೊಳಗೆ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಇಚ್ಛಾಶಕ್ತಿ ಸರ್ಕಾರಕ್ಕೂ ಇಲ್ಲ. ಇಲಾಖೆಗಳಿಗೆ ಇಲ್ಲದಂತಾಗಿದೆ. ನಗರದ ಕಾರೇಮನೆ ಗೇಟ್‌ ಬಳಿ ಗುಂಡಿಯನ್ನು ತಪ್ಪಿಸಲು ಹೋದ ನಿವೃತ್ತ ಯೋಧನೊಬ್ಬ ಆಯತಪ್ಪಿ ಬಿದ್ದಿದ್ದರಿಂದ ಆತನ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟನು. ಅಲ್ಲಿಯವರೆಗೂ ಗುಂಡಿ ಮುಚ್ಚುವ, ಸಂಭವನೀಯ ಅಪಘಾತ ತಪ್ಪಿಸುವ ಆಲೋಚನೆ ಯಾರಿಗೂ ಇರಲಿಲ್ಲ. 

ಯುವಪೀಳಿಗೆಯಲ್ಲಿ ಸಾಧಿಸುವ ಛಲ ಕೊನೆಯಾಗಬಾರದು: ಸಚಿವ ಸುಧಾಕರ್‌ ಸಲಹೆ

ಆ ನಂತರದಲ್ಲಿ ಗುಂಡಿ ಮುಚ್ಚುವ ಅಭಿಯಾನ ಎಲ್ಲೆಡೆ ಶುರುವಾಯಿತು. ಅಲ್ಲಿಯವರೆಗೆ ನಿದ್ರಾವಸ್ಥೆಯಲ್ಲಿದ್ದ ನಗರಸಭೆ ಅಧಿಕಾರಿಗಳು ಎಚ್ಚೆತ್ತು ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಚುರುಕು ನೀಡಿದರು. ನಗರ ಮತ್ತು ಗ್ರಾಮೀಣ ಭಾಗದ ರಸ್ತೆಗಳು ಗುಂಡಿಮಯವಾಗಿದ್ದರೂ ಅವುಗಳನ್ನು ಸುಸ್ಥಿತಿಗೆ ತರುವ ಪ್ರಯತ್ನಗಳೇ ನಡೆಯದಿದ್ದಾಗ ಅಪಘಾತಗಳು ಸಂಭವಿಸುವುದು ಸಾಮಾನ್ಯ. ಲೋಕೋಪಯೋಗಿ ಇಲಾಖೆಯೇ ತನಗೆ ಸೇರಿದ ರಸ್ತೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಲಾಗದೆ ದುಸ್ಥಿತಿ ಎದುರಿಸುತ್ತಿದೆ. ಗುತ್ತಲು ಕಾಲೋನಿ ರಸ್ತೆ, ವಿನೋಬಾ ರಸ್ತೆ, ವಿ.ವಿ.ರಸ್ತೆಯನ್ನು ನಗರಸಭೆ ಅನುದಾನದಲ್ಲಿ ಅಭಿವೃದ್ಧಿಪಡಿಸುತ್ತಿರುವುದೇ ಸಾಕ್ಷಿಯಾಗಿದೆ.

ಹಣಕಾಸಿನ ಕೊರತೆಯಿಂದ ಈ ರಸ್ತೆಗಳನ್ನು ನಗರಸಭೆಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳೇ ಹೇಳುತ್ತಿದ್ದಾರೆ. ಇನ್ನು ಮಳೆಯಿಂದ ಸಂಪೂರ್ಣ ಹಾಳಾಗಿರುವ ರಸ್ತೆಗಳನ್ನು ಇಲಾಖೆ ಅಭಿವೃದ್ಧಿಪಡಿಸುವುದು ಯಾವಾಗ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಇದರ ಪರಿಣಾಮ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದ್ದು, ಸಾವು-ನೋವುಗಳು ನಿರಂತರವಾಗಿ ಸಂಭವಿಸುತ್ತಿವೆ. ಪ್ರತಿಯೊಂದು ಅಪಘಾತಕ್ಕೂ ಅತಿ ವೇಗ, ಅಜಾಗರೂಕತೆ, ಮದ್ಯ ಸೇವಿಸಿ ವಾಹನ ಚಾಲನೆ, ಹೆಲ್ಮೆಟ್‌ ಧರಿಸದಿರುವುದನ್ನೇ ಕಾರಣ ಎಂದು ಹೇಳಲಾಗುವುದಿಲ್ಲ. 

ಈಗಿರುವ ರಸ್ತೆಗಳ ಅವ್ಯವಸ್ಥೆಯಲ್ಲಿ 30 ರಿಂದ 40 ಕಿ.ಮೀ. ವೇಗದಲ್ಲಿ ಹೋಗುವುದಕ್ಕೆ ಸಾಧ್ಯವಾಗುವುದೇ ಇಲ್ಲ. ನಗರದೊಳಗಿನ ರಸ್ತೆಯಲ್ಲಿ ವೇಗದ ಮಿತಿ 20 ರಿಂದ 30 ಕಿ.ಮೀ. ಮಾತ್ರ ಇರುತ್ತದೆ. ಇಂತಹ ಗುಂಡಿಮಯ ಸ್ಥಿತಿಯಲ್ಲಿರುವ ರಸ್ತೆಗಳನ್ನು ಸುಸುಸ್ಥಿತಿಗೆ ತರಬೇಕು. ನಗರದ ಹಲವು ರಸ್ತೆಗಳಲ್ಲಿನ ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕ ಜಾಗ ಗುರುತಿಸುವುದು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು. ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಡುಬ್ಬಗಳನ್ನು ತೆರವುಗೊಳಿಸುವುದರೊಂದಿಗೆ ಸಂಭವನೀಯ ಅಪಘಾತಗಳನ್ನು ತಡೆಯುವುದಕ್ಕೆ ಪೊಲೀಸ್‌ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ತುರ್ತು ಕ್ರಮ ವಹಿಸಬೇಕಾದ ಅಗತ್ಯವಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

2022ರ ಜನವರಿಯಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತಗಳು, ಸಾವು-ನೋವಿನ ವಿವರ
ತಿಂಗಳು ಅಪಘಾತ ಸಾವು ತೀವ್ರ ಗಾಯ ಗಾಯ

ಜನವರಿ 33 35 125 153
ಫೆಬ್ರವರಿ 32 33 123 159
ಮಾರ್ಚ್‌ 45 46 124 158
ಏಪ್ರಿಲ್‌ 35 35 114 141
ಮೇ 41 41 150 197
ಜೂನ್‌ 30 30 136 186
ಜುಲೈ 42 42 107 153
ಆಗಸ್ಟ್‌ 40 40 137 181
ಸೆಪ್ಟೆಂಬರ್‌ 33 34 128 178
ಅಕ್ಟೋಬರ್‌ 53 54 114 193
ನವೆಂಬರ್‌ 27 28 126 151
ಡಿಸೆಂಬರ್‌ 38 38 145 184
ಒಟ್ಟು  449 456 1529 2034

ಗೋವುಗಳ ರಕ್ತ ಹರಿಯುವುದರಿಂದ ದೇಶಕ್ಕೆ ಸೂತಕವಿದ್ದಂತೆ: ರಾಘವೇಶ್ವರ ಸ್ವಾಮೀಜಿ

ಪ್ರತಿಯೊಬ್ಬರ ಜೀವ ಅಮೂಲ್ಯ. ವಾಹನ ಚಾಲನೆ ಮಾಡುವಾಗ ಎಚ್ಚರದಿಂದ ಇರಬೇಕು. ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಅತಿ ವೇಗ, ಮದ್ಯಸೇವನೆ, ಹೆಲ್ಮೆಟ್‌ ಧರಿಸದಿರುವ ಕಾರಣದಿಂದಲೇ ಹೆಚ್ಚು ಸಾವು-ನೋವು ಸಂಭವಿಸುತ್ತಿದೆ. ಅದಕ್ಕಾಗಿಯೇ ಪೊಲೀಸ್‌ ಇಲಾಖೆ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಮುಂದಾಗಿದೆ.
- ಎನ್‌.ಯತೀಶ್‌, ಪೊಲೀಸ್‌ ಅಧೀಕ್ಷಕ

Follow Us:
Download App:
  • android
  • ios