Asianet Suvarna News Asianet Suvarna News

ಈ ಬಾರಿ ಪಟಾಕಿ ಅನಾಹುತ ಶೇ. 65 ಇಳಿಮುಖ..!

ಮಳೆ, ಕೊರೋನಾ ಹಿನ್ನೆಲೆ ಈ ಬಾರಿ ಪಟಾಕಿ ಸಿಡಿಸುವವರ ಸಂಖ್ಯೆ ಇಳಿಮುಖ| ಶೇ.55ರಷ್ಟು ವಾಯುಮಾಲಿನ್ಯ| ಪಟಾಕಿ ಮಾಲಿನ್ಯ: ಕಳೆದ ವರ್ಷಕ್ಕಿಂತ ಶೇ. 30 ರಷ್ಟು ಕಮ್ಮಿ| 2 ಕಡೆ ಮಾತ್ರ ಶಬ್ದಮಾಲಿನ್ಯ ಹೆಚ್ಚಳ| ಪಟಾಕಿ ಹೊಡೆತಕ್ಕೆ 45 ಜನರಿಗೆ ಗಾಯ, 30ಕ್ಕೂ ಹೆಚ್ಚಿನ ಮಕ್ಕಳ ಕಣ್ಣಿಗೆ ಹಾನಿ| 

45 People Adimitted to Hospital in Bengaluru due to Cracker incident grg
Author
Bengaluru, First Published Nov 18, 2020, 7:26 AM IST

ಬೆಂಗಳೂರು(ನ.18): ಕೊರೋನಾ ಹಿನ್ನೆಲೆಯಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ, ಪಟಾಕಿಯಿಂದಾಗುವ ಆರೋಗ್ಯ ಹಾನಿಯ ಬಗ್ಗೆ ಅರಿವು ಹಾಗೂ ಜನರಲ್ಲಿ ಹೆಚ್ಚಿದ ಜಾಗೃತಿಯ ಪರಿಣಾಮ ಈ ಬಾರಿಯ ದೀಪಾವಳಿಯಲ್ಲಿ ನಗರದಲ್ಲಿ ಪಟಾಕಿಯ ಅವಘಡದಿಂದ ತೊಂದರೆಗೆ ಒಳಗಾದವರ ಸಂಖ್ಯೆ ಕಡಿಮೆಯಾಗಿದೆ.

ಪಟಾಕಿ ಸಿಡಿಸುವ ವೇಳೆ ಇಲ್ಲವೇ ಬೇರೆಯವರು ಹಚ್ಚಿದ ಪಟಾಕಿ ಸ್ಫೋಟದಿಂದಾಗಿ ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಮಕ್ಕಳು ಸೇರಿದಂತೆ ಒಟ್ಟು 45 ಜನರಿಗೆ ಗಾಯಗಳಾಗಿವೆ. ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 11, ನಾರಾಯಣ ಕಣ್ಣಿನ ಆಸ್ಪತ್ರೆ 10, ಶಂಕರ್‌ ಆಸ್ಪತ್ರೆ 17, ಶೇಖರ್‌ ಆಸ್ಪತ್ರೆ 4 ಹಾಗೂ ನೇತ್ರಧಾಮದಲ್ಲಿ 3 ಪ್ರಕರಣಗಳು ಮಂಗಳವಾರ ಸಂಜೆ ವೇಳೆಗೆ ದಾಖಲಾಗಿವೆ. ಈ ಪೈಕಿ 30ಕ್ಕೂ ಹೆಚ್ಚಿನ ಮಕ್ಕಳೇ ಇದ್ದಾರೆ. ಯಾವುದೇ ಗಂಭೀರ ಪ್ರಕರಣಗಳು ಕಂಡು ಬಂದಿಲ್ಲ.

ಕಳೆದ ವರ್ಷ 130ಕ್ಕೂ ಹೆಚ್ಚಿನ ಕೇಸ್‌:

2019ರ ದೀಪಾವಳಿ ವೇಳೆ ಮಿಂಟೋ ಆಸ್ಪತ್ರೆಯಲ್ಲಿ 48, ನಾರಾಯಣ ಕಣ್ಣಿನ ಆಸ್ಪತ್ರೆ 31, ಶಂಕರ ಕಣ್ಣಿನ ಆಸ್ಪತ್ರೆ16 ಸೇರಿದಂತೆ ಮೂರು ದಿನಗಳಲ್ಲಿ 130ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದವು. ಈ ಬಾರಿ ಕೇವಲ 45 ಪ್ರಕರಣಗಳಷ್ಟೇ ದಾಖಲಾಗಿವೆ.

ಈ ಕುರಿತು ಮಾತನಾಡಿದ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್‌, ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಪಟಾಕಿ ಸಿಡಿಸುವ ವೇಳೆ ಜನರು ಮುಂಜಾಗ್ರತಾ ಕ್ರಮ ಕೈಗೊಳ್ಳುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೂ ಮಕ್ಕಳು ಕೆಲವು ಸಮಯದಲ್ಲಿ ಸಣ್ಣಪುಟ್ಟಗಾಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮತ್ತಷ್ಟುಜಾಗೃತಿ ವಹಿಸುವುದು ಉತ್ತಮ. ಕಳೆದ ವರ್ಷ ಇಬ್ಬರು ಮಕ್ಕಳು ಸಂಪೂರ್ಣ ದೃಷ್ಟಿಕಳೆದುಕೊಂಡಿದ್ದರು. ಈ ಬಾರಿ ಅಂತಹ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ಪಟಾಕಿ ನಿಷೇಧ: ರಾಜ್ಯ ಸರ್ಕಾರದ ‘ಅರ್ಥಹೀನ ಆದೇಶ’: ಹೈಕೋರ್ಟ್‌ ಗರಂ

ಪಟಾಕಿ ಮಾಲಿನ್ಯ: ಕಳೆದ ವರ್ಷಕ್ಕಿಂತ ಶೇ. 30% ಕಮ್ಮಿ

ಹಸಿರು ಪಟಾಕಿಗೆ ಮಾತ್ರ ಅವಕಾಶ, ಕೊರೋನಾ ಸೋಂಕಿತರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಜಾಗೃತಿ, ಹಬ್ಬದ ವೇಳೆ ಸುರಿದ ಮಳೆ ಪರಿಣಾಮ ಈ ಬಾರಿಯ ದೀಪಾವಳಿ ಹಬ್ಬದ ವೇಳೆ ನಗರದ ವಾಯು ಮಾಲಿನ್ಯ ಕಳೆದ ವರ್ಷಕ್ಕಿಂತ ಶೇ.30ರಷ್ಟುಕಡಿಮೆಯಾಗಿದೆ. ನಗರದ ಯಾವುದೇ ಭಾಗದಲ್ಲಿಯೂ ಪಟಾಕಿಯಿಂದ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿಲ್ಲ. ನಗರದ ವಾಯು ಗುಣಮಟ್ಟಸೂಚ್ಯಂಕ (ಎಕ್ಯುಐ) ಉತ್ತಮ ಮತ್ತು ತೃಪ್ತಿದಾಯಕ ಸ್ಥಿತಿಯಲ್ಲಿರುವುದು ಕಂಡು ಬಂದಿದೆ.

ಮೆಜೆಸ್ಟಿಕ್‌ ಬಳಿ ಹೆಚ್ಚು ಮಾಲಿನ್ಯ:

ಮಾಲಿನ್ಯ ನಿಯಂತ್ರಣ ಮಂಡಳಿ ನಗರದ ವಿವಿಧ ಏಳು ಕಡೆ ಮಾಲಿನ್ಯ ಅಳೆಯುವ ಮಾಪಕಗಳನ್ನು ಅಳವಡಿಸಿದೆ. ಕಳೆದ ವರ್ಷದ ದೀಪಾವಳಿ ವೇಳೆ ಸಿಟಿ ರೈಲು ನಿಲ್ದಾಣ ಕೇಂದ್ರದಲ್ಲಿ ವಾಯು ಗುಣಮಟ್ಟಸೂಚ್ಯಂಕ ಗರಿಷ್ಠ 111 ಹಾಗೂ ಸಿಲ್ಕ್‌ ಬೋರ್ಡ್‌ನಲ್ಲಿ ಕನಿಷ್ಠ 67 ದಾಖಲಾಗಿತ್ತು. ಈ ಬಾರಿ ಸಿಟಿ ರೈಲು ನಿಲ್ದಾಣದಲ್ಲಿ ಗರಿಷ್ಠ 76.67 ಹಾಗೂ ಬಸವೇಶ್ವರನಗರದಲ್ಲಿ ಕನಿಷ್ಠ 39.33 ದಾಖಲಾಗಿದೆ. ಕಳೆದ ಸಾರಿ ಒಟ್ಟಾರೆ ಮಾಲಿನ್ಯ ಪ್ರಮಾಣ ಶೇ.81.29 ರಷ್ಟಿತ್ತು. ಈ ಬಾರಿ ಶೇ.55.6ಕ್ಕೆ ಕುಸಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.30.4 ಕಡಿಮೆಯಾಗಿದೆ.

ಪಟಾಕಿಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ, ಹಸಿರು ಪಟಾಕಿಗೆ ಒತ್ತು ನೀಡಿರುವುದು, ಎಲ್ಲದಕ್ಕಿಂತ ಹೆಚ್ಚಾಗಿ ಜನರಲ್ಲಿ ಜಾಗೃತಿ ಮೂಡಿರುವುದು ಹಾಗೂ ಭಾನುವಾರ ಮತ್ತು ಸೋಮವಾರ ಸತತವಾಗಿ ಮಳೆ ಸುರಿದಿದ್ದರಿಂದಲೂ ಮಾಲಿನ್ಯ ಏರಿಕೆಯಾಗಿಲ್ಲ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು.

ಸಾಮಾನ್ಯ ದಿನಗಳಿಂತ ಶೇ.46ರಷ್ಟು ಕಡಿಮೆ:

ಹಬ್ಬಕ್ಕೂ ಮೊದಲ ದಿನವಾದ ನ.9 ಹಾಗೂ ಹಬ್ಬದ ದಿನಗಳಾದ ನ.14, 15 ಮತ್ತು 16ರಂದು ಮೂರು ದಿನಗಳಿಗೆ ಮಾಲಿನ್ಯ ಪ್ರಮಾಣ ತಾಳೆ ನೋಡಿದರೆ ಸಾಮಾನ್ಯ ದಿನಗಳಿಗಿಂತಲೂ ಶೇ.46.7ರಷ್ಟುಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ.

2 ಕಡೆ ಮಾತ್ರ ಶಬ್ದಮಾಲಿನ್ಯ ಹೆಚ್ಚಳ

ಶಬ್ದ ಮಾಲಿನ್ಯವನ್ನು ಕೈಗಾರಿಕಾ ಪ್ರದೇಶ ( ರಾಷ್ಟ್ರೀಯ ಮಿತಿ 75 ಡೆಸಿಬಲ್‌), ವಸತಿ ಪ್ರದೇಶ (55), ವಾಣಿಜ್ಯ ಪ್ರದೇಶ (65) ಹಾಗೂ ಸೂಕ್ಷ್ಮ ವಲಯ (50) ಗಳಾಗಿ ಗುರುತಿಸಿ ರಾಷ್ಟ್ರೀಯ ಮಿತಿ ನಿಗದಿ ಮಾಡಿದೆ. ಈ ಪೈಕಿ ಕಳೆದ ವರ್ಷಗಳಿಗಿಂತ ವಸತಿ ಪ್ರದೇಶಗಳಾದ ಬಸವೇಶ್ವರನಗರದಲ್ಲಿ ನಿಗದಿಗಿಂತ 4.69 ಡೆಸಿಬಲ್‌ ಹಾಗೂ ದೊಮ್ಮಲೂರಿನಲ್ಲಿ 3.53 ಡೆಸಿಬಲ್‌ನಷ್ಟುಶಬ್ದ ಹೆಚ್ಚಳವಾಗಿದೆ. ಇನ್ನು ಸೂಕ್ಷ್ಮ ವಲಯವಾಗಿರುವ ನಿಮ್ಹಾನ್ಸ್‌ ಬಳಿ 12.47 ಡೆಸಿಬಲ್‌ನಷ್ಟುಶಬ್ದ ಹೆಚ್ಚಳವಾಗಿದೆ.

ಮಾಲಿನ್ಯ ಪ್ರಮಾಣ (ಎಕ್ಯುಐ)

ಸ್ಥಳ 2019 2020
ಸಿಟಿ ರೈಲ್ವೆ ನಿಲ್ದಾಣ 111 76.67
ಬಸವೇಶ್ವರನಗರ 85. 39.33
ಹೆಬ್ಬಾಳ 71 63.67
ಜಯನಗರ 90 44
ಮೈಸೂರು ರಸ್ತೆ 76 61.67
ನಿಮ್ಹಾನ್ಸ್‌ 69 61
ಸಿಲ್ಕ್‌ ಬೋರ್ಡ್‌ 67 43
ಒಟ್ಟಾರೆ 81.29 55.62

ಎಕ್ಯುಐ ನಿಗದಿ ಮಾಡುವುದು ಹೇಗೆ?

0-50 ಉತ್ತಮ
51-100 ತೃಪ್ತಿದಾಯಕ
101-200 ಮಧ್ಯಮ
201-300 ಕಳಪೆ
301-400 ತುಂಬಾ ಕಳಪೆ
401- ತೀವ್ರ

ಶಬ್ದ ಮಾಲಿನ್ಯ ಪ್ರಮಾಣ (ಡೆಸಿಬಲ್‌ನಲ್ಲಿ)

ಸ್ಥಳ ರಾಷ್ಟ್ರೀಯ ಮಿತಿ 2019 2020
ವೈಟ್‌ಫೀಲ್ಡ್‌ 75 64 57.3
ಪೀಣ್ಯ ಕೈಗಾರಿಕಾ ಪ್ರದೇಶ 75 61.7 62.1
ಚರ್ಚ್‌ಸ್ಟ್ರೀಟ್‌ 65 65.7 60.9
ಯಶವಂತಪುರ 65 69
ಮಾರತಹಳ್ಳಿ 65 71.6 59.1
ಬಸವೇಶ್ವರನಗರ 55 67.381.1
ಬಿಟಿಎಂ 55 68.8 40.6
ದೊಮ್ಮಲೂರು 55 62 62.1
ಮೈಸೂರು ರಸ್ತೆ 50 59.7 59.2
ನಿಮ್ಹಾನ್ಸ್‌ 50 63.8 61.5
 

Follow Us:
Download App:
  • android
  • ios