ನಗರದ ಕೆಂಗೇರಿ ಮತ್ತು ಉಲ್ಲಾಳದಲ್ಲಿ ಕಳೆದ ಮಂಗಳವಾರ ಬರೋಬ್ಬರಿ 41.8 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಕೆಎಸ್‌ಎನ್‌ಎಂಸಿಡಿ (ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ) ತಿಳಿಸಿದೆ. 

ಬೆಂಗಳೂರು (ಮೇ.02): ನಗರದ ಕೆಂಗೇರಿ ಮತ್ತು ಉಲ್ಲಾಳದಲ್ಲಿ ಕಳೆದ ಮಂಗಳವಾರ ಬರೋಬ್ಬರಿ 41.8 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಕೆಎಸ್‌ಎನ್‌ಎಂಸಿಡಿ (ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ) ತಿಳಿಸಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗುತ್ತಿದ್ದು, ನಗರದ ಹಲವು ಭಾಗದಲ್ಲಿ ಮಂಗಳವಾರ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ದಾಖಲಾದ ವರದಿಯಾಗಿದೆ.

ಕೆಂಗೇರಿ ಮತ್ತು ಉಲ್ಲಾಳದಲ್ಲಿ ತಲಾ 41.8 ಡಿಗ್ರಿ ಸೆಲ್ಶಿಯಸ್‌, ಕಮ್ಮನಹಳ್ಳಿ, ಕೋನೇನ ಅಗ್ರಹಾರ, ಸುಧಾಮನಗರ, ಹನುಮಂತನಗರ, ಬಸವಗುಡಿ ಸೇರಿದಂತೆ ಹಲವು ಕಡೆ 40.5 ಡಿಗ್ರಿ ಸೆಲ್ಶಿಯಸ್‌, ದೀಪಾಂಜಲಿ ನಗರ, ಗಾಳಿ ಆಂಜನೇಯ ದೇವಸ್ಥಾನ, ಬಾಪೂಜಿ ನಗರ, ಹಂಪಿ ನಗರ, ಅತ್ತಿಗುಪ್ಪೆ ಸೇರಿದಂತೆ ಹಲವು ಕಡೆ 40 ಡಿಗ್ರಿ ಸೆಲ್ಶಿಯಸ್‌, ಉತ್ತರಹಳ್ಳಿಯಲ್ಲಿ 39.4 ಡಿಗ್ರಿ ಸೆಲ್ಶಿಯಸ್‌, ಲಗ್ಗೇರೆ, ರಾಜಗೋಪಾಲ ನಗರ, ಮಹಾಲಕ್ಷ್ಮಿ ಪುರ, ಲಕ್ಷ್ಮೀದೇವಿನಗರ ಸೇರಿದಂತೆ ಹಲವು ಕಡೆ 38.6 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಕೆಎಸ್‌ಎನ್‌ಎಂಸಿಡಿ ಮಾಹಿತಿ ನೀಡಿದೆ. ಆದರೆ, ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ನಗರದಲ್ಲಿ ಮಂಗಳವಾರ 37.8 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ತಿಳಿಸಿದೆ.

ಮೇ ಮೊದಲ ದಿನವೇ 38.1 ಡಿಗ್ರಿ ಬಿಸಿಲು: ಬೆಂಗಳೂರಿನಲ್ಲಿ ಬುಧವಾರ 38.1 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗುವ ಮೂಲಕ ಕಳೆದ 13 ವರ್ಷದಲ್ಲಿ ಮೇ ಮಾಹೆಯ ಅತಿ ಹೆಚ್ಚು ಗರಿಷ್ಠ ಉಷ್ಣಾಂಶವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 33.3 ಡಿಗ್ರಿ ಸೆಲ್ಶಿಯಸ್‌ ನಗರದ ಮೇ ತಿಂಗಳಿನ ವಾಡಿಕೆ ಗರಿಷ್ಠ ಉಷ್ಣಾಂಶವಾಗಿದ್ದು, ಮೇ 1ರಂದು ವಾಡಿಕೆ ಪ್ರಮಾಣಕ್ಕಿಂತ 3.8 ಡಿಗ್ರಿ ಸೆಲ್ಶಿಯಸ್‌ ಅಧಿಕ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಪ್ರಜ್ವಲ್‌ ರೇವಣ್ಣ ಕಾರು ಚಾಲಕನ ಮಲೇಷ್ಯಾಕ್ಕೆ ಕಳಿಸಿದ್ಯಾರು?: ಎಚ್‌ಡಿಕೆ ಕಿಡಿ

2013ರ ಮೇ 3ರಂದು 37.6 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿತ್ತು. 2016ರ ಮೇ 2ರಂದು 37.3 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿತ್ತು. 1931ರ ಮೇ 22 ರಂದು 38.9 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.