ಮಸ್ಕಿ ಜಲಾಶಯ ಭರ್ತಿ: 400 ಕ್ಯುಸೆಕ್ ನೀರು ಬಿಡುಗಡೆ
ಆಣೆಕಟ್ಟು ಸಂಪೂರ್ಣವಾಗಿ ಭರ್ತಿ| ನಾಲ ಪ್ರದೇಶದ ವ್ಯಾಪ್ತಿಯ ಸುತ್ತಮೂತ್ತಲಿನ ಮಸ್ಕಿ, ಸಿಂಧನೂರು, ಮಾನ್ವಿ ತಾಲೂಕಿನ ಜನರು ಮತ್ತು ಜಾನುವಾರುಗಳನ್ನು ಹಳ್ಳ, ನದಿಗೆ ಇಳಿಯದಂತೆ ಕಟ್ಟೆಚ್ಚರ| ವಾಡಿಕೆಯಂತೆ ಅಧಿಕ ಪ್ರಮಾಣದಲ್ಲಿ ಸುರಿದ ಮಳೆ|
ಮಸ್ಕಿ(ಜು.26): ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ತಾಲೂಕಿನ ಮಾರಲದಿನ್ನಿ (ಘನಮಠೇಶ್ವರ ಜಲಾಶಯ) ಹತ್ತಿರದ ಮಸ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು 0.50 ಟಿಎಂಸಿ ಸಾಮರ್ಥ್ಯದ ಜಲಾಶಯ ಶನಿವಾರ ಸಂಪೂರ್ಣ ಭರ್ತಿಯಾಗಿದೆ. ಇದರಿಂದಾಗಿ ಹಳ್ಳಕ್ಕೆ ಶನಿವಾರ 400 ಕ್ಯುಸೆಕ್ ನೀರನ್ನು ಹರಿಬಿಡಲಾಗಿದೆ ಎಂದು ಜಲಾಶಯದ ಎಇಇ ದಾವುದ್ ತಿಳಿಸಿದ್ದಾರೆ.
ಲಿಂಗಸುಗೂರು: ಜಲಪಾತದಲ್ಲಿ ಕೊಚ್ಚಿ ಹೋದವರ ಶವ ಪತ್ತೆ
ಆಣೆಕಟ್ಟು ಸಾಮಾರ್ಥ್ಯ ಗರಿಷ್ಟ 473.120 ಮೀಟರ್ (29 ಅಡಿ ) ಇದ್ದು ಸಂಪೂರ್ಣವಾಗಿ ಭರ್ತಿಯಾಗಿದೆ. ಒಳ ಹರಿವು 400 ಕ್ಯುಸೆಕ್ ಇದ್ದುದ್ದರಿಂದ ಹೆಚ್ಚಿನ ನೀರನ್ನು ನಾಲಕ್ಕೆ ಹರಿಬಿಡಲಾಗಿದೆ. ನಾಲ ಪ್ರದೇಶದ ವ್ಯಾಪ್ತಿಯ ಸುತ್ತಮೂತ್ತಲಿನ ಮಸ್ಕಿ, ಸಿಂಧನೂರು, ಮಾನ್ವಿ ತಾಲೂಕಿನ ಜನರು ಮತ್ತು ಜಾನುವಾರುಗಳನ್ನು ಹಳ್ಳ, ನದಿಗೆ ಇಳಿಯದಂತೆ ಕಟ್ಟೆಚ್ಚರ ನೀಡಲಾಗಿದ್ದು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಮುಂಜಾಗ್ರತವಾಗಿ ಸೂಚನೆ ನೀಡಿದ್ದಾರೆ.
ಅಧಿಕ ಮಳೆ:
ವಾಡಿಕೆಯಂತೆ ಮಳೆ ಪ್ರಮಾಣ ಅಧಿಕವಾಗಿ ಸುರಿದಿದ್ದು ತಾಲೂಕಿನ ತಲೇಖಾನ ಗ್ರಾಮದಲ್ಲಿ 24.3 ಮೀಮೀ, ಮಸ್ಕಿ ಪಟ್ಟಣದಲ್ಲಿ 13 ಮೀ.ಮೀ. ಹಾಗೂ ಗುಡದೂರು ಗ್ರಾಮದಲ್ಲಿ 36.2ಮೀ.ಮೀ ಮಳೆಯಾಗಿದೆ ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ತಿಳಿಸಿದ್ದಾರೆ.