ಮಾಜಿ ಶಾಸಕ ಸತೀಶ್ ಸೈಲ್ ಅವಧಿಯೂ ನೋಡಿದ್ದೇನೆ, ಪ್ರಸ್ತುತ, ಶಾಸಕರ ಅವಧಿಯನ್ನೂ ನೋಡಿದ್ದೇನೆ. ಇತಿಹಾಸದಲ್ಲಿ ಯಾವತ್ತೂ ಈ ತರಹ ಭ್ರಷ್ಟಾಚಾರ ನೋಡಿಲ್ಲ ಎಂದು ಮಾಜಿ ಸಚಿವ ಆನಂದ ಆಸ್ನೋಟಿಕರ್ ಆರೋಪಿಸಿದ್ದಾರೆ.

ಉತ್ತರಕನ್ನಡ (ಅ.15): ಮಾಜಿ ಶಾಸಕ ಸತೀಶ್ ಸೈಲ್ ಅವಧಿಯೂ ನೋಡಿದ್ದೇನೆ, ಪ್ರಸ್ತುತ, ಶಾಸಕರ ಅವಧಿಯನ್ನೂ ನೋಡಿದ್ದೇನೆ. ಇತಿಹಾಸದಲ್ಲಿ ಯಾವತ್ತೂ ಈ ತರಹ ಭ್ರಷ್ಟಾಚಾರ ನೋಡಿಲ್ಲ ಎಂದು ಮಾಜಿ ಸಚಿವ ಆನಂದ ಆಸ್ನೋಟಿಕರ್ ಆರೋಪಿಸಿದ್ದಾರೆ. ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕರಿಗೆ ಉದ್ಯೋಗವಕಾಶಗಳಿಲ್ಲ. ವಿವಿಧೆಡೆಯ ಕಾಂಟ್ರಾಕ್ಟ್‌ ಕೆಲಸಗಳಲ್ಲೇ ಜೀವನ ನಡೆಸುತ್ತಿದ್ದಾರೆ. ಕಮಿಷನ್ ಇಲ್ಲದೇ, ಅಧಿಕಾರಿಗಳು, ಜನಪ್ರತಿನಿಧಿಗಳು ಹೊರಗೆ ಬರ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೀತಿದೆ. ಬಿಜೆಪಿಯನ್ನು ಶೇ.40 ಕಮಿಷನ್ ಪಕ್ಷ ಅಂತಿದ್ದಾರೆ. ಈ ಪರ್ಸಂಟೇಜ್ ಕಾರವಾರದಿಂದ ಪ್ರಾರಂಭವಾಯ್ತು. 150 ಕೋಟಿ ರೂ. ವೆಚ್ಚದಲ್ಲಿ 450 ಬೆಡ್‌ಗಳ ಆಸ್ಪತ್ರೆ‌ ನಿರ್ಮಾಣ ಕಾರ್ಯ ಕಮಿಷನ್‌ಗಾಗಿ ತಿಂಗಳುಗಟ್ಟಲೇ ಬಾಕಿಯಾಗಿತ್ತು. ಕಾಂಟ್ರಾಕ್ಟ್‌ದಾರರ ಬಳಿ ಕಮಿಷನ್ ಕೇಳ್ತಿದ್ರು, ಸಿಗದಿದ್ದರೆ ಕೆಲಸ ಮಾಡಲು ಬಿಡುತ್ತಿರಲಿಲ್ಲ. ಇದಕ್ಕೆ ಕಾರಣ ಈ ಕ್ಷೇತ್ರದ ಜನಪ್ರತಿನಿಧಿಗಳು. ಈ ಕಳಂಕ ಈ ತಾಲೂಕು ಜನರ ಮೇಲೂ ತಗಲುತ್ತದೆ. ಎಲ್ಲವೂ ತಾನೇ ಮಾಡಿದ್ದು ಅನ್ನೋ ಭ್ರಮೆಯಲ್ಲಿ ಕಾರವಾರದ ಜನಪ್ರತಿನಿಧಿಗಳಿದ್ದಾರೆ.

 ಯಾವುದೇ ಹೊಸ ಯೋಜನೆ, ವಿಶೇಷ ಅನುದಾನ ಕಾರವಾರಕ್ಕೆ ಬಂದಿಲ್ಲ. ಕುಮಾರಸ್ವಾಮಿ ಸರಕಾರವಿದ್ದಾಗ ನಾನೇ ಖುದ್ದಾಗಿ ಪತ್ರ ಬರೆದು ಆಸ್ಪತ್ರೆ‌ ನಿರ್ಮಾಣಕ್ಕೆ 160ಕೋಟಿ ರೂ. ತರಿಸಿದ್ದೆ. ಪ್ರಸ್ತುತ ಶಾಸಕರು ಅವರ ವಿರುದ್ಧ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗಬಾರದೆಂದು ಮಾಧ್ಯಮದ ವಿರುದ್ಧ ಕೋರ್ಟ್ ನೋಟೀಸ್ ತಂದಿರೋದು ದುರ್ದೈವ. ಕಾಂಟ್ರಾಕ್ಟ್‌ದಾರರು ಕೂಡಾ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರು ಯಾವ ಆದಾಯದಲ್ಲಿ ಮೆರೆಯುತ್ತಿದ್ದಾರೆ? ಎಲ್ಲಿಂದ ಹಣ ನೀಡುತ್ತಿದ್ದಾರೆ..? ಅದರ‌ ಮಾಹಿತಿಯನ್ನು ಆದಾಯ ತೆರಿಗೆ ಅಧಿಕಾರಿಗಳ ಮುಂದಿರಿಸಿ ಪಾರದರ್ಶಕವಾಗಿ ಲೆಕ್ಕ ಮಾಡಿ ಜನರಿಗೆ ಮಾಹಿತಿ ನೀಡಿ ಎಂದು ಕಾರವಾರದ ಹಾಲಿ ಶಾಸಕರ ಮುಂದೆ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಸವಾಲೆಸೆದಿದ್ದಾರೆ.

ಬಿಜೆಪಿ ಸರ್ಕಾರದ 40% ಕಮಿಷನ್‌ ವಿರುದ್ಧ ಹೋರಾಟ: ಕೃಷ್ಣ ಭೈರೇಗೌಡ, ಪ್ರಿಯಾಂಕ್‌ ಎಚ್ಚರಿಕೆ

ಬಿಜೆಪಿಯ ಶಾಸಕರಲ್ಲಿ ಹೊಂದಾಣಿಕೆಯಿಲ್ಲ,‌ ಕ್ರೆಡಿಟ್ ಪಡೆಯೋಕೆ ನೋಡ್ತಿದ್ದಾರೆ:
 ಉತ್ತರಕನ್ನಡ ಜಿಲ್ಲೆಯ ಹೋರಾಟದ ಫಲವಾಗಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ನಿರ್ಧಾರವಾಗಿದೆ. ಆದರೆ, ಸರಕಾರ ಜನರಿಗೆ ಯಾಮಾರಿಸುತ್ತಿದ್ದು, ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುತ್ತಿದೆ. ಇರೋ 3-4 ತಿಂಗಳ ಅಧಿಕಾರವಧಿಯಲ್ಲಿ ಸರಕಾರ‌ ಏನು ಮಾಡಲು ಸಾಧ್ಯವಿದೆ..? ಬಿಜೆಪಿಯ ಶಾಸಕರಲ್ಲಿ ಹೊಂದಾಣಿಕೆಯಿಲ್ಲ, ಕ್ರೆಡಿಟ್ ಪಡೆಯೋಕೆ ನೋಡ್ತಿದ್ದಾರೆ ಎಂದು ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಆರೋಪಿಸಿದ್ದಾರೆ.

ಬಿಜೆಪಿ V/S ಕಾಂಗ್ರೆಸ್ QR ಕೋಡ್: ಬೆಂಗಳೂರು ತುಂಬಾ 40% ಕಮಿಷನ್ PayCM ಪೋಸ್ಟರ್!

ಕಾರವಾರದಲ್ಲಿ ಮಾತನಾಡಿದ ಸಚಿವರು, ಸರಕಾರ ಮನಸ್ಸು ಮಾಡಿದಿದ್ರೆ ಅಗತ್ಯ ಮಷಿನರಿ, ತಜ್ಞ ವೈದ್ಯರನ್ನು ಪೂರೈಸಿ ಕೇವಲ 2 ತಿಂಗಳಲ್ಲಿ ಇದ್ದ ಆಸ್ಪತ್ರೆಯನ್ನೇ ಸೂಪರ್ ಸ್ಪೆಷಾಲಿಟಿ ಮಾಡಬಹುದಿತ್ತು. ಆರೋಗ್ಯ ಸಚಿವರು ಬಂದಿದ್ದಾಗ ಶಾಸಕರೋರ್ವರಿಂದಾಗಿ ಜಿಲ್ಲೆಯ ಸಚಿವರಾದ ಶಿವರಾಮ ಹೆಬ್ಬಾರ್ ಕೂಡಾ ಬಂದಿರಲಿಲ್ಲ. ರಾಜಕೀಯ ಉದ್ಧಟತನದಿಂದಲೇ ಜಿಲ್ಲೆಯಲ್ಲಿ ಈ ಸಮಸ್ಯೆಗಳಾಗಿವೆ. ಎಲ್ಲಾ ಶಾಸಕರು ಒಗ್ಗಟ್ಟಾಗಿದಿದ್ರೆ ಈಗಾಗಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗುತ್ತಿತ್ತು. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಲೇ ಇಂತಹ ಸಮಸ್ಯೆಗಳಾಗಿವೆ ಎಂದು ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಟೀಕಿಸಿದರು.