ಬೆಂಗಳೂರು [ಅ.02]:  ತಳ್ಳುಗಾಡಿಯ ಹೋಟೆಲ್‌ನಲ್ಲಿ ಉಪಹಾರ ಸೇವಿಸಿ ಹಣ ಕೇಳಿದ್ದಕ್ಕೆ ಹೋಟೆಲ್‌ ಮಾಲಿಕನಿಗೆ ಬಿಸಿ ಎಣ್ಣೆ ಎರಚಿರುವ ಹೇಯ ಕೃತ್ಯ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸಕೆರೆಹಳ್ಳಿ ನಿವಾಸಿ ಲಕ್ಷ್ಮೀ ನಾರಾಯಣ (50) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೂಲತಃ ಉಡುಪಿ ಜಿಲ್ಲೆಯ ಲಕ್ಷ್ಮೀ ನಾರಾಯಣ ಅವರು ಸುಮಾರು 18 ವರ್ಷಗಳಿಂದ ತಳ್ಳುಗಾಡಿಯಲ್ಲಿ ಉಪಹಾರ ಮಾರಾಟ ಮಾಡುತ್ತಾರೆ. ನಿತ್ಯ ಹೊಸಕೆರೆಹಳ್ಳಿ 100 ಅಡಿ ಹೊರ ವರ್ತುಲ ರಸ್ತೆಯಲ್ಲಿ ಕೆಇಬಿ ಜಂಕ್ಷನ್‌ ಬಳಿ ತಳ್ಳುಗಾಡಿಯಲ್ಲಿ ಹೋಟೆಲ್‌ ಇಟ್ಟುಕೊಂಡಿರೆ. ಸೆ.29ರಂದು ಪತ್ನಿ, ಪುತ್ರ ಮತ್ತು ಕೆಲಸಗಾರ ರಮೇಶ್‌ನ ಜತೆ ಬೆಳಗ್ಗೆ 5ರ ಸುಮಾರಿಗೆ ಅಡುಗೆ ತಯಾರಿಸಿ ತಳ್ಳುಗಾಡಿಯಲ್ಲಿ ಉಪಹಾರ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು. ಈ ವೇಳೆ 5.30ರ ಸುಮಾರಿಗೆ ಮೂರ್ನಾಲ್ಕು ಮಂದಿ ಬಂದು ರೈಸ್‌ ಬಾತ್‌ ಹಾಗೂ ಇಡ್ಲಿ ತಿಂದಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಿಂಡಿ ತಿಂದ ಬಳಿಕ ಆರೋಪಿಗಳು ಸ್ಥಳದಿಂದ ಹೊರಡಲು ಮುಂದಾಗಿದ್ದರು. ಈ ವೇಳೆ ಲಕ್ಷ್ಮೀ ನಾರಾಯಣ ಅವರು ತಿಂದ ತಿಂಡಿಗೆ ಹಣ ಪಾವತಿಸುವಂತೆ ಆರೋಪಿಗಳಿಗೆ ಹೇಳಿದ್ದರು. ಇಷ್ಟಕ್ಕೆ ಆರೋಪಿಗಳು ‘ನಿನಗೆ ಗಾಂಚಲಿನಾ, ನಮ್ಮ ಏರಿಯಾದಲ್ಲಿ ವ್ಯಾಪಾರ ಮಾಡುತ್ತಿದ್ದೀಯ, ನಮ್ಮ ಬಳಿಯೇ ದುಡ್ಡು ಕೇಳುತ್ತಿಯಾ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಧ್ಯ ಪ್ರವೇಶಿಸಿದ ಲಕ್ಷ್ಮೀ ನಾರಾಯಣ ಅವರ ಪತ್ನಿ ‘ಸರಿಯಾಗಿ ಮಾತನಾಡಿ’ ಎಂದು ಆರೋಪಿಗಳಿಗೆ ಹೇಳಿದ್ದಾರೆ. ಮಹಿಳೆಯನ್ನು ನಿಂದಿಸಿರುವ ಆರೋಪಿಗಳು ಬೊಂಡ ಬೇಯುತ್ತಿದ್ದ ಎಣ್ಣೆ ಬಾಂಡ್ಲಿಯನ್ನು ಲಕ್ಷ್ಮೀ ನಾರಾಯಣ ಅವರ ಮೇಲೆ ಎಸೆದಿದ್ದಾರೆ. ಲಕ್ಷ್ಮೀ ನಾರಾಯಣ ಅವರ ಮೇಲೆ ಕುದಿಯುತ್ತಿದ್ದ ಎಣ್ಣೆ ಬಿದ್ದು, ಗಂಭೀರ ಸ್ವರೂಪದ ಸುಟ್ಟು ಗಾಯಗಳಾಗಿವೆ. ಘಟನೆಯಲ್ಲಿ ಕೆಲಸಗಾರ ರಮೇಶ್‌ ಅವರ ಕೈಗಳಿಗೂ ಸಹ ಎಣ್ಣೆ ತಗುಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅದೃಷ್ಟವಶಾತ್‌ ಘಟನೆ ನಡೆದ ವೇಳೆ ಲಕ್ಷ್ಮೀ ನಾರಾಯಣ ಅವರು ಜರ್ಕಿನ್‌ ಧರಿಸಿದ್ದರು. ಕೂಡಲೇ ತಣ್ಣೀರು ಹಾಕಿಕೊಂಡಿದ್ದಾರೆ. ಜರ್ಕಿನ್‌ ಧರಿಸದಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಘಟನೆ ನಡೆದ ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗಿದೆ. ಆರೋಪಿಗಳನ್ನು ಗುರುತಿಸಲಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ವಿವರಿಸಿದರು.

 ತಿಂಡಿ ಮಾರೋದೇ ತಪ್ಪಾ?

‘ದುಷ್ಕರ್ಮಿಗಳು ಅಪರೂಪಕ್ಕೆ ನಮ್ಮ ತಳ್ಳುಗಾಡಿಯಲ್ಲಿ ತಿಂಡಿ ತಿನ್ನಲು ಬರುತ್ತಿದ್ದರು. ಪೊಲೀಸರು ತೋರಿಸಿದರೆ ಆರೋಪಿಗಳನ್ನು ಗುರುತಿಸುತ್ತೇನೆ. ಅಂದು ನನ್ನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸುವಾಗ ಇತರೆ ಯಾವೊಬ್ಬ ಸಾರ್ವಜನಿಕರು ನನ್ನ ರಕ್ಷಣೆಗೆ ಧಾವಿಸಲಿಲ್ಲ. ತಿಂಡಿ ಮಾರಾಟ ಮಾಡುವುದೇ ನನ್ನ ತಪ್ಪಾ?’ ಎಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮೀ ನಾರಾಯಣ ಅವರು  ಅಳಲು ತೋಡಿಕೊಂಡರು.