ಆನೇಕಲ್‌ (ಅ.07): ಸೆಲ್ಫೀ ಗೀಳಿಗೆ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಸೇರಿ ಒಂದೇ ಕುಟುಂಬದ ನಾಲ್ಕು ಮಂದಿ ಬಲಿಯಾದ ಘಟನೆ ಭಾನುವಾರ ಆನೇಕಲ್‌ ಸನಿಹದಲ್ಲಿರುವ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಉತ್ತನಗಿರಿಯ ಪಾಂಬರ್‌ ಅಣೆಕಟ್ಟೆಯಲ್ಲಿ ಸಂಭವಿಸಿದೆ.

ಕೃಷ್ಣಗಿರಿ ಜಿಲ್ಲೆಯ ಒಟ್ಟಮಟ್ಟಿನಿವಾಸಿಗಳಾದ ಸಂತೋಷ್‌ (14), ಸ್ನೇಹ (19), ಕೋನದ (18), ನಿವಿತಾ (20) ಮೃತಪಟ್ಟವರು. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಬಿಡುವು ಮಾಡಿಕೊಂಡು ಪಂಬರ್‌ ಅಣೆಕಟ್ಟೆಗೆ ವೀಕ್ಷಣೆಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ.

ಕೃಷ್ಣಗಿರಿಯಲ್ಲಿ ಮದುವೆ ಸಮಾರಂಭಕ್ಕೆಂದು ಕುಟುಂಬ ಸದಸ್ಯರೊಂದಿಗೆ ಬಂದಿದ್ದ ಈ ನಾಲ್ಕು ಮಂದಿ ಸಂಜೆಯ ವೇಳೆ ಬಿಡುವು ಮಾಡಿಕೊಂಡು ಸಮೀಪದ ಪಾಂಬರ್‌ ಡ್ಯಾಂ ವೀಕ್ಷಣೆಗೆ ತೆರಳಿದ್ದರು. ಡ್ಯಾಂನ ಹಿನ್ನೀರಿನಲ್ಲಿ ಕೆಲಹೊತ್ತು ತಿರುಗಾಡಿದ ಇವರು ಡ್ಯಾಂನ ಅಂಚೊಂದರಲ್ಲಿ ಸೆಲ್ಫೀ ತೆಗೆಯಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಇವರಲ್ಲಿ ಯಾರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.

ಮೃತರಲ್ಲಿ ನಿವಿತಾ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ರಜೆ ಕಳೆಯಲು ತವರಿಗೆ ಹೋಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಇಡೀ ಕುಟುಂಬದ ರೋಧನ ಮುಗಿಲು ಮುಟ್ಟಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಿಂದೆಯೂ ಆಗಿತ್ತು: 15 ದಿನಗಳಿಂದ ಈ ಭಾಗದಲ್ಲಿ ಸತತ ಮಳೆಯಾಗಿದ್ದು, ಹೆಚ್ಚು ನೀರು ಸಂಗ್ರಹವಾಗಿದ್ದರ ಅರಿವಿಲ್ಲದೆ ನೀರಿಗಿಳಿದ ಕಾರಣ ಈ ದುರಂತ ಸಂಭವಿಸಿರಬಹುದೆಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಪಾಂಬರ್‌ ಅಣೆಕಟ್ಟನ್ನು ಕರ್ನಾಟಕದ ಮೂಲಕ ಹರಿಯುವ ದಕ್ಷಿಣ ಪಿನಾಕಿನಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಈ ಅಣೆಕಟ್ಟೆಯಲ್ಲಿ ಸೆಲ್ಫೀ ಗೀಳಿಗೆ ಈ ಹಿಂದೆಯೂ ಅನೇಕ ಮಂದಿ ಜೀವಕಳೆದುಕೊಂಡಿದ್ದಾರೆ.