ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಜಿಲ್ಲೆಗೆ ಉಂಟಾಗಿರುವ ಹಿನ್ನಡೆ ಹಾಗೂ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ನಾಲ್ವರು ಪಿಡಿಒಗಳನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಎಲ್‌.ಹುಲ್ಮನಿ ಆದೇಶ ಹೊರಡಿಸಿದ್ದಾರೆ.

 ಮಂಡ್ಯ (ಅ.22):ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಜಿಲ್ಲೆಗೆ ಉಂಟಾಗಿರುವ ಹಿನ್ನಡೆ ಹಾಗೂ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ನಾಲ್ವರು ಪಿಡಿಒಗಳನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಎಲ್‌.ಹುಲ್ಮನಿ ಆದೇಶ ಹೊರಡಿಸಿದ್ದಾರೆ.

ನರೇಗಾ (NREGA) ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ಮಂಡ್ಯ (Mandya) ಜಿಲ್ಲೆ ಕೊನೆಯ (31ನೇ) ಸ್ಥಾನದಲ್ಲಿದೆ. ಮಾನವ ದಿನಗಳ ಸೃಜನೆಯಲ್ಲಿ ಶೇ.43.02ರಷ್ಟುಕಳಪೆ ಸಾಧನೆ ಮಾಡಿದೆ. ನರೇಗಾದಲ್ಲಿ ಭೌತಿಕ ಪ್ರಗತಿ ಸಾಧಿಸದ ಕಾರಣ ಮಂಡ್ಯ ತಾಲೂಕಿನ ಕೀಲಾರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವೆಂಕಟಯ್ಯ, ಮದ್ದೂರು ತಾಲೂಕಿನ ಗೆಜ್ಜಲಗೆರೆ ಪಿಡಿಒ ಎಂ.ಜಿ.ಶೀಲಾ ಹಾಗೂ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ ನಿಯಮ ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿರುವ ಮದ್ದೂರು ತಾಲೂಕಿನ ನಿಡಘಟ್ಟಪಿಡಿಒ ಎಚ್‌.ಎಸ್‌. ಲಕ್ಷಿ ್ಮೕ ಅವರನ್ನು ಅಮಾನತುಗೊಳಿಸಿದ್ದಾರೆ.

ನರೇಗಾ ಯೋಜನೆಯಡಿ ಪ್ರಗತಿ ಪರಿಶೀಲನೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ 2022- ಅ.17ರಂದು ನಡೆದ ಸಭೆಯಲ್ಲಿ ಜಿಲ್ಲೆಯ ಪ್ರಗತಿ ಕುರಿತಂತೆ ಅಸಮಾಧಾನ, ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಪಿಡಿಒಗಳನ್ನು ಅಮಾನತು ಶಿಕ್ಷೆಗೆ ಗುರಿಪಡಿಸಿದ್ದಾರೆ.

ಮಾನವ ದಿನಗಳ ಸೃಜನೆಯಲ್ಲಿ ಲೋಪ:

ಕೀಲಾರ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಯೋಜನೆಯಡಿ 8971 ಮಾನವ ದಿನಗಳು ಸೃಜನೆ ನಿಗದಿಯಾಗಿದ್ದು, ಪ್ರಸ್ತುತ ಈ ವರೆಗೆ 794 ಮಾನವ ದಿನಗಳ ಸೃಜನೆಯನ್ನು ಪೂರ್ಣಗೊಳಿಸಿರುವುದು ಕಂಡುಬಂದಿದೆ. ಅಕ್ಟೋಬರ್‌ 2022ರ ಅಂತ್ಯದವರೆವಿಗೂ ಶೇ.8.85 ರಷ್ಟುಪ್ರಗತಿಯನ್ನು ಸಾಧಿಸಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಪ್ರಗತಿ ಕುಂಠಿತವಾಗಲು ಕಾರಣವಾಗಿರುವುದರಿಂದ ಇವರ ವಿರುದ್ಧ ಕ್ರಮ ವಹಿಸಲಾಗಿದೆ. ನರೇಗಾ ಯೋಜನೆಯನ್ನು ಅನುಷ್ಟಾನಗೊಳಿಸುವಲ್ಲಿ ವಿಫಲರಾಗಿ ಕರ್ತವ್ಯ ಲೋಪವೆಸಗಿರುವ ಇವರನ್ನು ಅಮಾನತುಗೊಳಿಸಲಾಗಿದೆ.

257 ಮಾನವ ದಿನ ಸೃಷ್ಟಿ:

ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಡಿ 10,039 ಮಾನವ ದಿನಗಳು ಸೃಜನೆ ನಿಗದಿಯಾಗಿದ್ದು, ಈವರೆಗೂ 257 ಮಾನವ ದಿನಗಳ ಸೃಜನೆಯನ್ನು ಪೂರ್ಣಗೊಳಿಸಿರುವುದು ಕಂಡುಬಂದಿದೆ. ಅಕ್ಟೋಬರ್‌-2022ರ ಅಂತ್ಯದವರೆಗೆ ಶೇ.2.56 ರಷ್ಟುಪ್ರಗತಿ ಸಾಧಿಸಿದ್ದು, ನರೇಗಾ ಯೋಜನೆಯ ಪ್ರಗತಿಯು ಕುಂಠಿತವಾಗಲು ಕಾರಣರಾಗಿದ್ದಾರೆ. ನರೇಗಾ ಯೋಜನೆಯನ್ನು ಅನುಷ್ಟಾನಗೊಳಿಸುವಲ್ಲಿ ವಿಫಲರಾಗಿ ಕರ್ತವ್ಯ ಲೋಪವೆಸಗಿರುವುದರಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಸಮಯಕ್ಕೆ ಸರಿಯಾಗಿ ಹಾಜರಾಗಿಲ್ಲ:

ಜಿಲ್ಲೆಯ ಗಡಿ ಭಾಗ ಮದ್ದೂರು ತಾಲೂಕಿನ ನಿಡಘಟ್ಟಗ್ರಾಮದ ಪಿಡಿಒ ಎಚ್‌.ಎಸ್‌.ಲಕ್ಷ್ಮೇ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ ನಿಯಮ ಉಲ್ಲಂಘಿಸಿರುವುದರಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪ್ರತಿಯೊಬ್ಬ ಸರ್ಕಾರಿ ನೌಕರನು ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗತಕ್ಕದ್ದು ಹಾಗೂ ತನ್ನ ಹುದ್ದೆಯ ಕರ್ತವ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಗರಿಷ್ಠ ಸಮಯವನ್ನು ಮೀಸಲಿಡುವುದು. ತುರ್ತು ಸೇವೆ ಅಗತ್ಯವಿದ್ದಾಗ ಮತ್ತು ಉನ್ನತ ಅಧಿಕಾರಿಗಳ ಸೂಚನೆ ಮೇಲೆ ಕಚೇರಿಯ ಅವಧಿ ಮೀರಿ ಕಾರ್ಯ ನಿರ್ವಹಿಸಿ ಹಾಜರಾತಿಯಲ್ಲಿ ಸಮಯ ಪಾಲನೆ ಮಾಡುವಂತೆ ಸೂಚಿಸಿದ್ದರೂ, ಆಕಸ್ಮಿಕವಾಗಿ ಭೇಟಿ ನೀಡಿ ಪರಿಶೀಲಿಸಲಾಗಿ ಕರ್ತವ್ಯಕ್ಕೆ ಹಾಜರಾಗದೆ ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪಿಡಿಒ ಎಚ್‌.ಎಸ್‌.ಲಕ್ಷ್ಮೇ ಅವರನ್ನು ಅಮಾನತು ಮಾಡಲಾಗಿದೆ ಎಂದು ಅದೇಶದಲ್ಲಿ ತಿಳಿಸಿದ್ದಾರೆ.

ನರೇಗಾ ಪ್ರಗತಿ ಬಗ್ಗೆ ದೂರವಾಣಿಯಲ್ಲಿ ಪಿಡಿಒ ಅವರನ್ನು ವಿಚಾರಿಸಿದಾಗ ಬೇಜವಾಬ್ದಾರಿತನ ಉತ್ತರವನ್ನು ನೀಡಿದ್ದಾರೆ. ಅಕ್ಟೋಬರ್‌-2022ರ ಅಂತ್ಯದವರೆಗೆ ಶೇ.9.20ರಷ್ಟುಪ್ರಗತಿ ಸಾಧಿಸಿ ಪ್ರಗತಿ ಕುಂಠಿತವಾಗಲು ನೇರ ಕಾರಣರಾಗಿದ್ದು, ಕರ್ತವ್ಯ ಲೋಪವೆಸಗಿರುವುದು ಕಂಡು ಬಂದಿದೆ.

ಬಾಕ್ಸ್‌...

ಕರ್ತವ್ಯಲೋಪ: ಪಿಡಿಒ ಅಮಾನತು

ಮಂಡ್ಯ

ತಾಲೂಕಿನ ಇಂಡುವಾಳು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಶಾಂತಾ ಎಲ್‌.ಹುಲ್ಮನಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇಂಡುವಾಳು ಪಿಡಿಒ ಎ.ಎಸ್‌.ಸಿದ್ದರಾಜು ಅಮಾನತುಗೊಂಡವರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗ್ರಾಮ ಪಂಚಾಯ್ತಿ ಕಟ್ಟಡದ ಒತ್ತುವರಿಗಾಗಿ ಗ್ರಾಪಂಗೆ ಸ್ವೀಕೃತವಾಗಿರುವ ಮೊತ್ತವನ್ನು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ನಿಯಮ ಬಾಹೀರವಾಗಿ ವೆಚ್ಚ ಭರಿಸಿರುವುದು. ನಿಧಿ-2 ಖಾತೆಯಿಂದ ಧನಾದೇಶಗಳ ಮೂಲಕ ವೆಚ್ಚ ಭರಿಸಿರುವುದಕ್ಕೆ ಅಗತ್ಯ ಓಚರ್‌ಗಳು, ದಾಖಲಾತಿಗಳನ್ನು ಹಾಜರು ಪಡಿಸದಿರುವುದು ಹಾಗೂ ಬಿಡುಗಡೆಗೊಂಡ ಸದಸ್ಯರ ಅನುದಾನಗಳನ್ನು ಇತರೆ ಉದ್ದೇಶಗಳಿಗೆ ಬಳಸಿಕೊಂಡಿರುವುದು, 11ಇ-ಸ್ವತ್ತುಗಳನ್ನು ನಿಯಮಬಾಹೀರವಾಗಿ ವಿತರಿಸಿರುವುದು ಕಂಡುಬಂದಿದೆ.

15ನೇ ಹಣಕಾಸು ಯೋಜನೆಯ ಅನುಷ್ಠಾನದಲ್ಲಿ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ನಿಯಮ ಬಾಹಿರವಾಗಿ ವೆಚ್ಚ ಭರಿಸುವುದು. ಗ್ರಾಪಂ ಅನುದಾನಗಳನ್ನು ಕೆಟಿಪಿಪಿ ನಿಯಮಗಳನ್ನು ಉಲ್ಲಂಘಟಿಸಿ ನಿಯಮ ಬಾಹಿರವಾಗಿ ವೆಚ್ಚಭರಿಸಿರುವುದು ಸೇರಿದಂತೆ ಇಷ್ಟೆಲ್ಲಾ ಕರ್ತವ್ಯ ಲೋಪ ಎಸಗಿರುವುದು ತನಿಖೆಯಲ್ಲಿ ಕಂಡುಬಂದಿದೆ.

ಪಿಡಿಒ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಅಧಿಕಾರಿ ಹಾಗೂ ಲೆಕ್ಕಾಧೀಕ್ಷಕ, ಮುಖ್ಯ ಲೆಕ್ಕಾಧಿಕಾರಿ ಹಾಗೂ ಸಹಾಯಕ ಕಾರ್ಯದರ್ಶಿ(ಆಡಳಿತ) ಅವರು ಖುದ್ದಿ ಇಂಡುವಾಳು ಗ್ರಾಪಂಗೆ ಭೇಟಿ ನೀಡಿ ಜಂಟಿ ತಪಾಸಣೆ ನಡೆಸಿ ನಂತರ ವರದಿ ನೀಡಿರುತ್ತಾರೆ.

ನರೇಗಾ ಯೋಜನೆಯಡಿ ಗ್ರಾಮ ಪಂಚಾಯ್ತಿಗೆ 2022-23ನೇ ಸಾಲಿಗೆ ಸರ್ಕಾರದಿಂದ ವಾರ್ಷಿಕವಾಗಿ ನಿಗಧಿ ಪಡಿಸಿರುವ ಮಾನವ ದಿನ ಸೃಜನೆ ಗುರಿಯ ಮಾಹಿತಿಯನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ನರೇಗಾ ಯೋಜನೆಯಡಿ ನಿಡಘಟ್ಟಗ್ರಾಮ ಪಂಚಾಯ್ತಿಗೆ 2022-23ನೇ ಸಾಲಿಗೆ 10,100 ಮಾನವ ದಿನಗಳು ಸೃಜನೆ ನಿಗದಿಯಾಗಿದ್ದು, ಈವರೆಗೂ ಕೇವಲ 929 ಮಾನವ ದಿನಗಳ ಸೃಜನೆಯನ್ನು ಪೂರ್ಣಗೊಳಿಸಿರುವುದು ಕಂಡುಬಂದಿದೆ. ಪ್ರಗತಿಯ ಕುಂಠಿತಕ್ಕೆ ನೇರ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಅಮಾನಗೊಳಿಸಿ ಅದೇಶಿಸಲಾಗಿದೆ.

- ಶಾಂತಾ ಎಲ್‌.ಹುಲ್ಮನಿ, ಸಿಇಒ, ಜಿಲ್ಲಾ ಪಂಚಾಯ್ತಿ