ಭದ್ರಾವತಿಯಲ್ಲಿ ಹೊಸದಾಗಿ 4 ಕೊರೋನಾ ಪ್ರಕರಣ ಪತ್ತೆ..!
ಉಕ್ಕಿನ ನಗರಿ ಭದ್ರಾವತಿಗೆ ಕೊರೋನಾ ಮತ್ತೆ ಶಾಕ್ ನೀಡಿದ್ದು ಶುಕ್ರವಾರ(ಜು.03) ಮತ್ತೆ ಹೊಸದಾಗಿ 4 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಭದ್ರಾವತಿ(ಜು.04): ತಾಲೂಕಿನಲ್ಲಿ ಸೋಂಕಿನ ಪ್ರಕರಣ ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದು ವರೆಗೂ ಒಟ್ಟು 23 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಶುಕ್ರವಾರ 4 ಪ್ರಕರಣಗಳು ಪತ್ತೆಯಾಗಿವೆ.
ಹೊಳೆಹೊನ್ನೂರಿನಲ್ಲಿ 19 ವರ್ಷದ ಯುವಕನಿಗೆ, ವಿಶ್ವೇಶ್ವರಯ್ಯ ನಗರದಲ್ಲಿ ಬೆಂಗಳೂರಿನಿಂದ ಬಂದಿರುವ 22, 20 ವರ್ಷದ ಇಬ್ಬರು ಸಹೋದರಿಯರಿಗೆ, ಕಡದಕಟ್ಟೆಯಲ್ಲಿ ಬೆಂಗಳೂರಿನಿಂದ ಬಂದಿರುವ 28 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ನಗರಸಭೆ ಆಡಳಿತ ಸೋಂಕು ಪತ್ತೆಯಾಗಿರುವ ಸ್ಥಳದ 100, 200 ಮೀಟರ್ ವಿಸ್ತೀರ್ಣದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸ್ಯಾನಿಟೈಸ್ ಮಾಡಿಸಿ ಕಂಟೈನ್ಮೆಂಟ್ ವಲಯವನ್ನಾಗಿಸಿ ಸೀಲ್‌ಡೌನ್‌ಗೆ ಮುಂದಾಗಿದೆ.
ಶಿವಮೊಗ್ಗದಲ್ಲಿ ಡಬಲ್ ಸೆಂಚುರಿ ಬಾರಿಸಿದ ಕೊರೋನಾ..!
ಸುರಗಿತೋಪು ಸೀಲ್‌ಡೌನ್: ನಗರಸಭೆ ವ್ಯಾಪ್ತಿ ಘೋಷಿತ ಕೊಳಚೆ ಪ್ರದೇಶ ಸುರಗಿತೋಪಿನಲ್ಲಿ ಗುರುವಾರ ಯುವಕನೊಬ್ಬ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ 4 ರಸ್ತೆಗಳ ಸೀಲ್ಡೌನ್ ಮಾಡಲಾಗಿದೆ. ತಾಲೂಕಿನ ಕೂಡ್ಲಿಗೆರೆ ನಾಡಕಚೇರಿ ಅಧಿಕಾರಿಯೊಬ್ಬರ ಪತ್ನಿಗೆ ಸೋಂಕು ತಗುಲಿದೆ ಎನ್ನುವ ಮಾಹಿತಿ ಗುರುವಾರ ಎಲ್ಲೆಡೆ ಹರದಾಡುತ್ತಿತ್ತು. ಈ ನಡುವೆ ನಾಡಕಚೇರಿ ಅಧಿಕಾರಿ ನಗರದ ತಾಲೂಕು ಕಚೇರಿಗೂ ಭೇಟಿ ನೀಡಿರುವ ಮಾಹಿತಿ ಹಿನ್ನೆಲೆ ನಗರಸಭೆವತಿಯಿಂದ ತಾಲೂಕು ಕಚೇರಿಗೆ ಸ್ಯಾನಿಟೈಸ್ ಮಾಡಿಸಲಾಗಿದೆ. ಆಶಾ ಕಾರ್ಯಕರ್ತೆಯೊಬ್ಬರಿಗೆ ಸೋಂಕು ಹರಡಿರುವುದು ಪತ್ತೆಯಾಗಿದ್ದು, ಇವರು ಮನವಿ ಸಲ್ಲಿಸಲು ಭೇಟಿ ನೀಡಿದ ಕಾರಣ ಶಾಸಕರ ಗೃಹ ಕಚೇರಿಗೂ ಸ್ಯಾನಿಟೈಸಿಂಗ್ ಮಾಡಲಾಗಿದೆ.