ಶಿವಮೊಗ್ಗ(ಜೂ.09): ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ್ದ 9 ವರ್ಷದ ಬಾಲಕಿ ಸೇರಿದಂತೆ ನಾಲ್ವರಲ್ಲಿ ಕರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಆ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆಯಾದಂತಾಗಿದೆ. 

ಈ ಕುರಿತು ಆರೋಗ್ಯ ಇಲಾಖೆ ಬುಲೆಟಿನ್‌ ಬಿಡುಗಡೆ ಮಾಡಿದ್ದು, ಇದರಂತೆ ಸೋಮವಾರ ನಾಲ್ವರಲ್ಲಿ ಕೊರೋನಾ ಪಾಸಿಟಿವ್‌ ಪತ್ತೆಯಾಗಿದೆ. ನಾಲ್ಕು ಮಂದಿಯೂ ಮಹಾರಾಷ್ಟ್ರ ಟ್ರಾವೆಲ್‌ ಹಿಸ್ಟರಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಜೂನ್‌ 5ರಂದು ಶಿವಮೊಗ್ಗಕ್ಕೆ ಆಗಮಿಸಿದ ನಾಲ್ವರನ್ನು ನಗರದಲ್ಲಿನ ಹಾಸ್ಟೆಲ್‌ನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿತ್ತು. ಪಿ-5475 (38ವರ್ಷದ ಯುವಕ), ಪಿ-5476 (34ವರ್ಷದ ಯುವತಿ), ಪಿ-5477 (9ವರ್ಷದ ಬಾಲಕಿ) ಹಾಗೂ ಪಿ-5478 (20ವರ್ಷದ ಯುವಕ) ಸೋಂಕು ತಗುಲಿರುವುದು ದೃಢಪಟ್ಟಿದೆ. 

ಶಿವಮೊಗ್ಗಕ್ಕೆ ಮಹಾ ಕಂಟಕ: ಒಂದೇ ದಿನ 12 ಮಂದಿಗೆ ಕೊರೋನಾ ಸೋಂಕು

ಇವರೆಲ್ಲರೂ ಶಿಕಾರಿಪುರ ತಾಲೂಕಿನವರು ಎಂದು ತಿಳಿದುಬಂದಿದೆ. ಜಿಲ್ಲೆಯಲ್ಲಿ ಒಟ್ಟು ಕೊರೋನಾ ಪಾಸಿಟಿವ್‌ ಸಂಖ್ಯೆ 69ಕ್ಕೆ ಏರಿಕೆಯಾಗಿದ್ದು, ಇವರಲ್ಲಿ 28 ಮಂದಿ ಗುಣಮುಖರಾಗಿದ್ದಾರೆ. 41 ಸಕ್ರಿಯ ಪ್ರಕರಣ ಜಿಲ್ಲೆಯಲ್ಲಿದೆ.

ಭಾನುವಾರ ಒಂದೇ ದಿನ ಜಿಲ್ಲೆಯಲ್ಲಿ 12 ಕೊರೋನಾ ಕೇಸ್‌ಗಳು ಪತ್ತೆಯಾಗುವ ಮೂಲಕ ಜಿಲ್ಲೆಯ ಜನರನ್ನು ಆತಂಕಕ್ಕೆ ಈಡು ಮಾಡಿತ್ತು. ಆದರೆ ಸೋಮವಾರದ ರಿಪೋರ್ಟ್ ಮಲೆನಾಡಿನ ಮಂದಿಗೆ ತುಸು ನೆಮ್ಮದಿಯನ್ನು ನೀಡಿದೆ. ಶಿವಮೊಗ್ಗದ ಜನತೆಗೆ ಮುಂಬೈ ಡೆಡ್ಲಿ ವೈರಸ್ ಕಾಟ ಮಾತ್ರ ನಿಂತಿಲ್ಲ.