ಶಿವಮೊಗ್ಗದಲ್ಲಿ ಒಂದೇ ಕುಟುಂಬದ 4 ಮಂದಿಗೆ ಕೊರೋನಾ ಪತ್ತೆ
ಶಿವಮೊಗ್ಗದಲ್ಲಿ ಭಾನುವಾರ(ಜೂ.28)ದಂದು ಹೊಸದಾಗಿ 4 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಒಂದೇ ಕುಟುಂಬದ ನಾಲ್ವರಿಗೆ ಕೊರೋನಾ ಸೋಂಕು ತಗುಲಿರುವುದು ಜಿಲ್ಲೆಯ ಜನರನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.27): ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಳವಾಗತೊಡಗಿದೆ. ಭಾನುವಾರ ನಾಲ್ವರಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆತಂಕದ ಸಂಗತಿ ಎಂದರೆ ಈ ನಾಲ್ವರು ಒಂದೇ ಕುಟುಂಬವರಾಗಿದ್ದಾರೆ.
ಸೋಂಕಿತರಲ್ಲಿ 19 ವರ್ಷದ ಮಹಿಳೆ (ಪಿ-11963), 80 ವರ್ಷದ ವೃದ್ಧೆ (ಪಿ-11964), 56 ವರ್ಷದ ಪುರುಷ (ಪಿ-11965) ಹಾಗೂ 20 ವರ್ಷದ ಯುವತಿ (ಪಿ- 11966) ಇದ್ದಾರೆ. ಭಾನುವಾರ ಪತ್ತೆಯಾದ ನಾಲ್ವರು ಸೋಂಕಿತರಿಗೂ ತಮ್ಮ ಸಂಬಂಧಿಯಿಂದಲೇ ಕೊರೋನಾ ತಗುಲಿರುವ ಸಾಧ್ಯತೆ ದಟ್ಟವಾಗಿದೆ. ಭದ್ರಾವತಿಯ ಬಸ್ ಏಜೆಂಟ್ ಒಬ್ಬರಿಗೆ ಕಳೆದೆರಡು ದಿನದ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಆತ ಬಸವನಗುಡಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದು ಹೋಗಿದ್ದರು. ಇದೀಗ ಇಡೀ ಕುಟುಂಬಕ್ಕೆ ಸೋಂಕು ತಗುಲಿದೆ.
ಸಿಡಿಪಿಒ ಕಚೇರಿಯಿರುವ ಕ್ವಾಟ್ರಸ್‌ನಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಕೊರೋನಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಬಸವನಗುಡಿ ಬಡಾವಣೆಯಲ್ಲಿ ಅವರು ವಾಸಿಸುತ್ತಿರುವ ಸುತ್ತಮುತ್ತಲ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರಿಗೆ ಮೆಗ್ಗಾನ್ ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಾವೇರಿ: ಆಶಾ ಕಾರ್ಯಕರ್ತೆಯರು, ಡಾಕ್ಟರ್ ಸೇರಿ 12 ಜನರಿಗೆ ಕೊರೋನಾ
ಜಿಲ್ಲೆಯಲ್ಲಿ ಈವರೆಗೆ ಒಟ್ಟು 146 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ 104 ಗುಣಮುಖರಾಗಿದ್ದು, 40 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.
ತೀರ್ಥಹಳ್ಳಿಯಲ್ಲಿ ಕೊರೋನಾ ಪಾಸಿಟಿವ್
ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿದೆ. ಪಟ್ಟಣದ ಗಾಂಧೀನಗರ ವ್ಯಾಪ್ತಿಯಲ್ಲಿ ನರ್ಸ್ ಒಬ್ಬರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ತಮ್ಮ ಕರ್ತವ್ಯದ ಮೇರೆಗೆ ಇವರು ತೀರ್ಥಹಳ್ಳಿಯಿಂದ ಹೆಬ್ರಿಗೆ ದಿನ ನಿತ್ಯ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.
ಸೇವೆ ವೇಳೆಯಲ್ಲಿ ಇವರಿಗೆ ಸೋಂಕು ತಗಲಿರಬಹುದು ಎನ್ನಲಾಗಿದೆ. ಇವರು ವಾಸಿಸುತ್ತಿರುವ ಗಾಂಧಿನಗರದ ಮನೆ ಸುತ್ತಮುತ್ತ ಸೀಲ್‌ಡೌನ್ ಮಾಡಲಾಗಿದೆ. ಇವರ ಪತಿ ಆಟೋ ಚಾಲಕನಾಗಿದ್ದು, ಅನೇಕ ಕಡೆ ಓಡಾಡಿರುವ ಶಂಕೆ ಇದೆ. ಮನೆ ಇರುವ ಪ್ರದೇಶದಲ್ಲಿ 8 ಮನೆಗಳ ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಹಾಗೂ ಸುತ್ತಮುತ್ತಲಿನ 80 ಮನೆಗಳ ವ್ಯಾಪ್ತಿಯನ್ನು ಬಫರ್‌ಝೋನ್ ಎಂದು ಗುರುತಿಸಲಾಗಿದೆ.