ಬೆಂಗಳೂರು,(ಜೂ.17): ಆಟೋ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ‌ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಬಳಿ ನಡೆದಿದೆ.

ಹಸೀನಾ(30), ಸಾನಿಯಾ(17) ಹಾಗೂ ಮಕ್ಕಳಾದ ಶಾಜಿಯಾ(8) ಮತ್ತು ಜೋಯಾ(5) ಮೃತರು. ಮೃತರೆಲ್ಲರೂ ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ನಿವಾಸಿಗಳು.

 ಆಧಾರ್ ಕಾರ್ಡ್ ಮಾಡಿಸಲು ಆಟೋ ಮೂಲಕ ದೇವನಹಳ್ಳಿ-ದೊಡ್ಡಬಳ್ಳಾಪುರ ಮಾರ್ಗ ಮಧ್ಯೆ ಚಪ್ಪರಕಲ್ಲು ಬಳಿಯಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನಕ್ಕೆ ತೆರಳಿದ್ದರು. 

ಆದರೆ, ಮಾರ್ಗ ಮಧ್ಯೆ ಗುಂಡಿ ತಪ್ಪಿಸಲು ಹೋದಾಗ ಆಟೋ ಚಕ್ರವೊಂದು ಕಳಚಿ ಬಸ್​ಗೆ ಡಿಕ್ಕಿ ಹೊಡೆದಿದೆ. ಆಟೋದಲ್ಲಿ ಒಟ್ಟು 11 ಜನರ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉಳಿದ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ದೇವನಹಳ್ಳಿ ತಾಲ್ಲೂಕು ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಾಲ್ವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. 

ಅಪಘಾತದಲ್ಲಿ ಆಟೋ ಸಂಪೂರ್ಣ ಜಖಂಗೊಂಡಿದ್ದು ಸ್ಥಳಕ್ಕೆ ಭೇಟಿ ನೀಡಿದ್ದ ವಿಶ್ವನಾಥಪುರ ಪಿಎಸ್ ಐ ಮಂಜುನಾಥ್ ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಿ ಅಪಘಾತಕ್ಕೀಡಾದ ಆಟೋವನ್ನು ಸ್ಥಳಾಂತರ ಮಾಡಿಸಿದ್ದಾರೆ. ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.