ಅಂದು ಮದ್ಯ ಸಿಗದೆ ಪರದಾಟ, ಈಗ ಅತಿಯಾಗಿ ಕುಡಿದು ಸಾವು..!
ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆಗೂ ಮುನ್ನ ಮದ್ಯ ಸಿಗದೆ 8 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮದ್ಯ ಮಾರಾಟ ಆರಂಭವಾಗುತ್ತಿದ್ದಂತೆ ಮದ್ಯ ಕುಡಿದು 4 ಮಂದಿ ಮೃತಪಟ್ಟಿದ್ದಾರೆ.
ಉಡುಪಿ(ಮೇ.08): ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆಗೂ ಮುನ್ನ ಮದ್ಯ ಸಿಗದೆ 8 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮದ್ಯ ಮಾರಾಟ ಆರಂಭವಾಗುತ್ತಿದ್ದಂತೆ ಮದ್ಯ ಕುಡಿದು 4 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಸಾವನ್ನಪ್ಪಿದ್ದವರ ಪೈಕಿ ಓರ್ವ ಮದ್ಯಪಾನಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅತಿಯಾದ ಮದ್ಯಪಾನದಿಂದ ಇಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬಾತ ಮದ್ಯಪಾನದ ನಂತರ ವಿಪರೀತ ಹೊಟ್ಟೆನೋವಿನಿಂದ ಮೃತನಾಗಿದ್ದಾನೆ.
13 ವ್ಯಕ್ತಿಗಳಿಂದ ರಾಜ್ಯದಲ್ಲಿ ಬರೋಬ್ಬರಿ 328 ಮಂದಿಗೆ ಕೊರೋನಾ ವೈರಸ್..!
ಲಾಕ್‌ಡೌನ್ ಘೋಷಣೆಯಾಗಿ ಉಡುಪಿ ಜಿಲ್ಲೆಯಲ್ಲಿ ಮದ್ಯ ಮಾರಾಟ ಸ್ಥಗಿತಗೊಂಡು ಮದ್ಯ ಸಿಗದೇ ಹತಾಶೆಯಲ್ಲಿ ಒಂದೇ ವಾರದಲ್ಲಿ 8 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಇನ್ನೂ ಇಬ್ಬರು ಮದ್ಯಪಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಅದಕ್ಕೆ ಮದ್ಯ ಸಿಗದೇ ಇರುವುದೇ ಕಾರಣ ಎಂಬುದು ಸ್ಪಷ್ಟವಾಗಿಲ್ಲ.
ಮತ್ತೆ ಸರಣಿ ಸಾವು:
ಈಗ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಮತ್ತೆ ಮದ್ಯಪಾನಿಗಳ ಸಾವಿನ ಸರಣಿ ಶುರುವಾಗಿದೆ. ಬುಧವಾರ ಉಡುಪಿ ನಗರದಲ್ಲಿ ಸುಮಾರು 40 ವರ್ಷದ ವಲಸೆ ಕಾರ್ಮಿಕನೊಬ್ಬ ವಿಪರೀತ ಅಮಲೇರಿಸಿಕೊಂಡು ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದುಕೊಂಡಿದ್ದ, ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ.
ಜ್ಯುಬಿಲಿಯೆಂಟ್ ನಂಜಿನ ರಹಸ್ಯ ಕೊನೆಗೂ ಬಯಲು; ಕಾರಣವಾಯ್ತಾ ಈ ಸಭೆ?
ಬುಧವಾರ ಕುಂದಾಪುರ ತಾಲೂಕಿನ ಕಸಬಾ ಗ್ರಾಮದಲ್ಲಿ 35 ವರ್ಷದ ಅಪರಿಚಿತ ಯುವಕನೊಬ್ಬ ಅತಿಯಾದ ಮದ್ಯಸೇವನೆಯಿಂದ ರಸ್ತೆ ಬದಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಕಾಪು ತಾಲೂಕಿನ ಕಟಪಾಡಿಯ ಜೆ.ಎನ್.ನಗರದಲ್ಲಿ ಮಂಗಳವಾರ ಚಂದ್ರಕಾಂತ್ (32) ಎಂಬ ಯುವಕ ಮದ್ಯಪಾನ ಮಾಡಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾನೆ.
ಇಲ್ಲಿನ ಬ್ರಹ್ಮಾವರ ತಾಲೂಕಿನ ಶಿರಿಯಾರ ಎಂಬಲ್ಲಿ ವಿಪರೀತ ಕುಡಿತದ ಚಟವಿದ್ದ ಕೃಷ್ಣ ಪಾಣ (48) ಎಂಬಾತ ಬಹಳ ದಿನಗಳಿಂದ ಮದ್ಯ ಕುಡಿಯದೇ ಅನಾರೋಗ್ಯಕ್ಕೊಳಗಾಗಿದ್ದರು. ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.