ಬೆಳಗಾವಿ(ಫೆ.13): ತಾಲೂಕಿನ ವಾಘವಡೆ ಗ್ರಾಮದ ಹೊರ ವಲಯದ ಹೊಲವೊಂದರ ಬಳಿ ತುಕ್ಕು ಹಿಡಿದ ನಾಲ್ಕು ಹಳೆಯ ಕಂಟ್ರಿ ಪಿಸ್ತೂಲ್‌ ಪತ್ತೆಯಾಗಿವೆ. ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೂ ಈ ಪಿಸ್ತೂಲ್‌ಗಳಿಗೂ ನಂಟಿದೆ ಎಂಬುದರ ಬಗ್ಗೆ ಶಂಕೆ ಮೂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ವಾಘವಡೆ ಗ್ರಾಮದ ಭಾವುಕಣ್ಣಾ ಪಾಟೀಲ ಎಂಬುವರ ಜಮೀನಿನ ಬಳಿ ಈ ಪಿಸ್ತೂಲ್‌ಗಳು ದೊರೆತಿವೆ. ತಮ್ಮ ಹೊಲದ ಬಳಿ ಅಪರಿಚಿತರು ನಾಲ್ಕು ಕಂಟ್ರಿ ಪಿಸ್ತೂಲ್‌ ಎಸೆದುಹೋಗಿರುವ ಕುರಿತು ಭಾವುಕಣ್ಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ನಾಲ್ಕು ಪಿಸ್ತೂಲ್‌ಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಶಸ್ತ್ರಾಸ್ತ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಗೌರಿ ಪ್ರಕರಣಕ್ಕೆ ನಂಟು:

ಪಿಸ್ತೂಲ್‌ಗಳು ಪತ್ತೆಯಾಗಿರುವ ವಾಘವಡೆ ಗ್ರಾಮ ಗೌರಿ ಲಂಕೇಶ್‌ ಹತ್ಯೆಕೋರರು ಬಂದೂಕು ಬಳಕೆ ತರಬೇತಿ ಪಡೆದಿದ್ದರು ಎನ್ನಲಾದ ಖಾನಾಪುರ ತಾಲೂಕಿನ ಚಿಕಲೆ ಅರಣ್ಯ ಪ್ರದೇಶದಿಂದ 30 ಕಿ.ಮೀ. ಅಂತರದಲ್ಲಿದೆ. ಗೌರಿ ಲಂಕೇಶ್‌, ವಿಚಾರವಾದಿಗಳಾದ ಎಂ.ಎಂ. ಕಲಬುರ್ಗಿ, ಗೋವಿಂದ ಪಾನ್ಸರೆ , ನರೇಂದ್ರ ಧಾಬೋಳ್ಕರ ಅವರ ಹತ್ಯೆ ತರಬೇತಿಗೆ ಆರೋಪಿಗಳು ಈ ಪಿಸ್ತೂಲ್‌ಗಳನ್ನು ಬಳಸಿರಬಹುದು ಎಂದು ಹೇಳಲಾಗಿದೆ. ಈ ಪ್ರಕರಣ ಪೊಲೀಸರ ನಿದ್ದೆಗೆಡಿಸುವಂತೆ ಮಾಡಿದೆ. ಆದರೆ, ಒಂದು ಮೂಲದ ಪ್ರಕಾರ ವಿಚಾರವಾದಿಗಳ ಹತ್ಯೆಗೂ ಈ ಪಿಸ್ತೂಲ್‌ಗಳಿಗೂ ಯಾವುದೇ ರೀತಿಯ ನಂಟಿಲ್ಲ ಎನ್ನಲಾಗಿದೆ.

ಪತಂಜಲಿ ಉತ್ಪನ್ನ ಮಾರುತ್ತಿದ್ದ ಗೌರಿ ಹತ್ಯೆ ಆರೋಪಿ ದೇವ್ಡೇಕರ!

ವಾಘವಡೆ ಬಳಿ ಜಮೀನುವೊಂದರ ಬಳಿ ಎಸೆದು ಹೋಗಿರುವ ನಾಲ್ಕು ಕಂಟ್ರಿ ಪಿಸ್ತೂಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಇವು ಬಹಳಷ್ಟುಹಳೆಯದಾಗಿವೆ. ಜತೆಗೆ ತುಕ್ಕು ಹಿಡಿದು ಮುರಿದುಹೋಗಿವೆ. ಇವುಗಳನ್ನು ಬಳಕೆ ಮಾಡುತ್ತಿದ್ದರೆ ಆರೋಪಿಗಳು ಬಿಸಾಕಿ ಹೋಗುತ್ತಿರಲಿಲ್ಲ ಎಂಬ ವಾದವೂ ಕೇಳಿಬರುತ್ತಿದೆ. ಈ ಪಿಸ್ತೂಲ್‌ಗಳನ್ನು ದುಷ್ಕೃತ್ಯಕ್ಕೆ ಬಳಸಲಾಗಿದೆಯೋ ಅಥವಾ ಬೇರೆ ಯಾವುದಕ್ಕೆ ಬಳಸಲಾಗಿದೆ ಎಂಬುದರ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಬೆಳಗಾವಿ ಪೊಲೀಸ್‌ ಆಯುಕ್ತ ಬಿ.ಎಸ್‌.ಲೋಕೇಶ್‌ ಕುಮಾರ್‌ ತಿಳಿಸಿದ್ದಾರೆ.