ಬೆಂಗಳೂರು [ಮಾ.12]:  ಬೆಂಗಳೂರಿನ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ನಾಲ್ಕು ಮಂದಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲಾ ರೀತಿಯ ವೈದ್ಯಕೀಯ ವ್ಯವಸ್ಥೆ ಕಲ್ಪಿಸಿದ್ದು ಸೋಂಕಿತರ ಆರೋಗ್ಯ ಸ್ಥಿರವಾಗಿದೆ.

ಆಸ್ಪತ್ರೆಯಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೊರೋನಾ ಚಿಕಿತ್ಸಾ ಘಟಕಗಳನ್ನು ಮಾಡಲಾಗಿದೆ. ಇದಲ್ಲದೆ ಸೋಂಕು ಶಂಕಿತರಿಗೆ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡಲಾಗಿದೆ.

ನಾಲ್ಕೂ ಮಂದಿ ಸೋಂಕಿತರಿಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ, ರಾತ್ರಿಯ ಊಟ ಎಲ್ಲಾ ರೋಗಿಗಳಿಗೆ ನೀಡುವಂತೆಯೇ ನೀಡಲಾಗುತ್ತಿದೆ. ಎಲ್ಲರ ಆರೋಗ್ಯವೂ ಸ್ಥಿರವಾಗಿದ್ದು, ವಿಶೇಷ ಉಪಚಾರದ ಅಗತ್ಯವಿಲ್ಲ.

46 ವರ್ಷದ ಟೆಕ್ಕಿಯ ಪತ್ನಿ ಹಾಗೂ ಮಗಳಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಹೀಗಾಗಿ ಸಾಮಾನ್ಯರಂತೆ ಇದ್ದು, ವಾರ್ಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. 46 ವರ್ಷದ ಟೆಕ್ಕಿಗೆ ಜ್ವರದ ಜತೆಗೆ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಹೆಚ್ಚಾಗಿದ್ದು, ವೈದ್ಯರು ಚಿಕಿತ್ಸೆ ಬಳಿಕ ಹತೋಟಿಗೆ ಬಂದಿದೆ. ಮತ್ತೊಬ್ಬ 50 ವರ್ಷದ ಟೆಕ್ಕಿಗೆ ಜ್ವರ ಸೇರಿದಂತೆ ಇತರೆ ಸಮಸ್ಯೆ ಇದ್ದು, ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಸೋಂಕಿತರಿಗೆ ನಾಲ್ಕು ದಿನದ ಬಳಿಕ ಪರೀಕ್ಷೆ ಮತ್ತೊಮ್ಮೆ ಸೋಂಕು ಪರೀಕ್ಷೆ ಮಾಡಲಾಗುವುದು.

ಬಳ್ಳಾರಿ: ದುಬೈನಿಂದ ಬಂದ ದಂಪತಿಗೆ ಕೊರೋನಾ ಭೀತಿ!..

ಈ ವೇಳೆ ವರದಿ ಕೊರೋನಾ ನೆಗೆಟಿವ್‌ ಬಂದರೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು. ಎರಡು ಬಾರಿಯೂ ನೆಗೆಟಿವ್‌ ಬಂದರೆ ಬಿಡುಗಡೆ ಮಾಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ದೂರವಾಣಿ ಮೂಲಕ ಕೌನ್ಸಿಲಿಂಗ್‌

ವಿದೇಶದಿಂದ ಆಗಮಿಸಿ ಮನೆಯಲ್ಲೇ ಪ್ರತ್ಯೇಕ ನಿಗಾ ವ್ಯವಸ್ಥೆಯಡಿ ನಿಗಾ ವಹಿಸಿರುವವರಿಗೆ ಆರೋಗ್ಯ ಇಲಾಖೆಯ ಮನೋವೈದ್ಯರ ತಂಡ ಟೆಲಿಫೋನಿಕ್‌ ಕೌನ್ಸಿಲಿಂಗ್‌ ನಡೆಸುತ್ತದೆ.

ಪ್ರತಿ ನಿತ್ಯ ಟೆಲಿಫೋನ್‌ ಮೂಲಕ ಮಾತನಾಡಿ ರೋಗದ ಲಕ್ಷಣಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಈ ವೇಳೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.