ಮುಂಡಗೋಡ [ಜ.24]:  ತಾಲೂಕಿನ ಬೆಡಸಗಾಂವ ಗ್ರಾಪಂ ವ್ಯಾಪ್ತಿಯ ಕೂರ್ಲಿ ಅರಣ್ಯದಲ್ಲಿ ಅಕ್ರಮವಾಗಿ ಎರಡು ಶ್ರೀಗಂಧದ ಮರ ಕಡಿದು, ಕಳ್ಳ ಸಾಗಾಣಿಕೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತರಿಂದ ಬೈಕ್ ಹಾಗೂ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಬಾಳೆಕೊಪ್ಪ ಗ್ರಾಮದ ವಿಶ್ವನಾಥ ಬಿಕನಾಳಕರ, ಸುರೇಶ ಗೌಡ, ದೇವೇಂದ್ರ ಗೌಡ, ಬೆಡಸಗಾಂವ ಗ್ರಾಮದ ಸತೀಶ ನಾಯ್ಕ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಒಂದು ಟಿವಿಎಸ್ ಬೈಕ್ ಹಾಗೂ 80 ಸಾವಿರ ಮೌಲ್ಯದ 23 ಕೆಜಿ ಶ್ರೀಗಂಧದ ಕಟ್ಟಿಗೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 

ಜ. 16 ರಂದು ತಾಲೂಕಿನ ಬೆಡಸಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರ್ಲಿ ಅರಣ್ಯ ಪ್ರದೇಶದಿಂದ ಎರಡು ಶ್ರೀಗಂಧದ ಮರಗಳನ್ನು ಕಡಿದು ಕಳ್ಳ ಸಾಗಾಣಿಕೆ ಮಾಡಲಾಗಿತ್ತು. ಈ ಕುರಿತು ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಗಂಧದ ಮರಗಳನ್ನು ಕಡಿದು, ತುಂಡು ತುಂಡಾಗಿ ಕತ್ತರಿಸಿ ಶಿರಸಿ ನಗರದ ಬಿಜೆಪಿ ಧುರೀಣನಿಗೆ ನೀಡುತ್ತಿದ್ದೆವು ಎಂದು ತನಿಖೆಯ ವೇಳೆ ಈ ನಾಲ್ಕು ಮಂದಿ ಆರೋಪಿಗಳು ಅಧಿಕಾರಿಗಳ ಎದುರು ಬಾಯಿಬಿಟ್ಟಿದ್ದಾರೆ.

ಬಿಜೆಪಿ ಮುಖಂಡನ ವಿಚಾರಣೆ: ಕೂರ್ಲಿ ಅರಣ್ಯದಿಂದ ಅಕ್ರಮವಾಗಿ ಕಡಿದು ಸಾಗಿಸಲಾದ ಎರಡು ಶ್ರೀಗಂಧದ ಮರದ ಕಟ್ಟಿಗೆಯನ್ನು ಪಡೆದುಕೊಂಡಿರುವ ಆರೋಪದ ಮೇಲೆ ಕಾತೂರ ಅರಣ್ಯ ಇಲಾಖೆಯವರು ಶಿರಸಿಯ ಬಿಜೆಪಿ ಮುಖಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ನಾಲ್ಕು ಜನ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಈ ಮುಖಂಡನ ವಿಚಾರಣೆ ನಡೆಸಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.

ತಾಲೂಕಿನ ಅರಣ್ಯ ಹಾಗೂ ಮನೆಗಳ ಮುಂದೆ ಬೆಳೆಸಿರುವ ಶ್ರೀಗಂಧ ಮರಗಳನ್ನು ಕೆಲವು ಕಳ್ಳರು ರಾತ್ರಿ ವೇಳೆ ಕಡಿದುಕೊಂಡು ಶಿರಸಿಯ ಕೆಲ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಅರಣ್ಯ ಇಲಾಖೆಯವರು ಆರೋಪಿಗಳಿಂದ ಮತ್ತಷ್ಟು ತನಿಖೆ ನಡೆಸಿದರೆ ಮತ್ತಷ್ಟು ಪ್ರಕರಣಗಳು ಹೊರ ಬರುವ ಸಾಧ್ಯತೆಗಳಿವೆ.