ಮದ್ದೂರು [ಮಾ.02]:  ತಾಲೂಕಿನ ಕೆ.ಹಾಗಲಹಳ್ಳಿ ಗ್ರಾಮದಲ್ಲಿ ಫೆ.26ರಂದು ನಡೆದಿದ್ದ ಕೃಷ್ಣ(ಮಂಗಳಮುಖಿ ವೇಷಧಾರಿ) ಎಂಬುವವರ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಮದ್ದೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಗ್ರಾಮದ ಬಸವರಾಜು ಪುತ್ರ ಮನುಕುಮಾರ್‌ ಅಲಿಯಾಸ್‌ ಮನು, ಲೇ.ಪುಟ್ಟೇಗೌಡನ ಪುತ್ರ ಸುರೇಶ, ಡಿ.ಹೊಸೂರು ಗ್ರಾಮದ ಜವರಾಯಿ ಪುತ್ರ ಎಚ್‌.ಬಿ. ಸಂಜಯ್‌, ವೆಂಕಟೇಶ್‌ರ ಪುತ್ರ ಎಚ್‌.ವಿ.ತಿಮ್ಮರಾಜು ಅಲಿಯಾಸ್‌ ಬೋಂಡಾ ಬಂಧಿತರು.

ಕೃಷ್ಣನ ಸಾವಿನ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ತಾಲೂಕಿನ ನಿಡಘಟ್ಟಗ್ರಾಮದ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರನ್ನು ಪಟ್ಟಣದ ಜೆಎಂಎಫ್‌ಸಿ 2ನೇ ಅಪರ ಸಿವಿಲ… ನ್ಯಾಯಾಯಲಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಆದಿತ್ಯ ಆರ್‌.ಕಲಾಲ… ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ಕೆ.ಹಾಗಲಹಳ್ಳಿ ಗ್ರಾಮದ ಪಾಪೇಗೌಡರ ಪತ್ನಿ ಶೋಭಾ ಮತ್ತು ಕೃಷ್ಣನ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ಕೃಷ್ಣ, ಶೋಭಾರನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಜನರು ಕೃಷ್ಣನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಈ ವೇಳೆ ತೀವ್ರ ಗಾಯಗೊಂಡಿದ್ದ ಕೃಷ್ಣ ಆಸ್ಪತ್ರೆಯಲ್ಲಿ ಅಸುನೀಗಿದ್ದ.