ಬೆಂಗಳೂರು (ಸೆ.10):  ರಾಜಧಾನಿಯಲ್ಲಿ ಮಾದಕ ವಸ್ತು ದಂಧೆ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಮತ್ತೆ ಎರಡು ಪ್ರತ್ಯೇಕ ದಾಳಿಯಲ್ಲಿ ಆರು ಮಂದಿ ಗಾಂಜಾ ದಂಧೆಕೋರರು ಸಿಕ್ಕಿಬಿದ್ದಿದ್ದಾರೆ.

ಯಶವಂತಪುರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಪೆಡ್ಲರ್‌ಗಳನ್ನು ಬಂಧಿಸಿರುವ ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು, ಆರೋಪಿಗಳಿಂದ ಎರಡು ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಗೊರಗುಂಟೆಪಾಳ್ಯ ನಿವಾಸಿ ನವೀನ್‌ (19), ಅಜಯ್‌(20), ರಾಹುಲ್‌ (20) ಹಾಗೂ ಕೆ.ನವೀನ್‌ ಬಂಧಿತರು. ಯಶವಂತಪುರದ ಇಂಡಸ್ಟ್ರಿಯಲ್‌ ಸಬ್‌ ಅಬರ್ಬ್‌ ಹತ್ತಿರ ಆರೋಪಿಗಳು ಗಾಂಜಾ ಮಾರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಲ್ಲಾಳ ಉಪನಗರದ ಕಾರ್ತಿಕ್‌ ಹಾಗೂ ಹಮೀದ್‌ ಎಂಬುವರಿಂದ ಕಡಿಮೆ ಬೆಲೆಗೆ ಬೆಲೆಗೆ ಗಾಂಜಾ ಖರೀದಿಸಿ, ನಂತರ ಹೆಚ್ಚಿನ ಬೆಲೆಗೆ ತಾವು ಮಾರುತ್ತಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಈ ಕೃತ್ಯದಲ್ಲಿ ತಪ್ಪಿಸಿಕೊಂಡಿರುವ ಹಮೀದ್‌ ಹಾಗೂ ಕಾರ್ತಿಕ್‌ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೈಕ್‌ ಕಳ್ಳತನ: ಚಂದ್ರಾಲೇಔಟ್‌ ಠಾಣೆ ಪೊಲೀಸರ ಮತ್ತೊಂದು ಕಾರ್ಯಾಚರಣೆ ಮತ್ತಿಬ್ಬರು ಸೆರೆಯಾಗಿದ್ದಾರೆ.

ಗಂಗೊಂಡನಹಳ್ಳಿಯ ಮೊಯೀನ್‌ ಪಾಷಾ (20) ಹಾಗೂ ಈತನಿಗೆ ಸಹಕರಿಸುತ್ತಿದ್ದ ನಯಾಜ್‌ ಅಹಮದ್‌ (40) ಬಂಧಿಸಲಾಗಿದ್ದು, ಆರೋಪಿಗಳಿಂದ ಬೈಕ್‌ ಹಾಗೂ 310 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಷಹಬಾಜ್‌ ಎಂಬಾತನ ಪತ್ತೆಗೆ ತನಿಖೆ ನಡೆದಿದೆ.

15 ದಿನಗಳ ಹಿಂದೆ ರಾಮನಗರದಲ್ಲಿ ಪಲ್ಸರ್‌ ಬೈಕ್‌ನ್ನು ಕಳ್ಳತನ ಮಾಡಿದ್ದ ಪಾಷ, ಆ ಬೈಕ್‌ ಬಳಸಿ ರಾತ್ರಿ ವೇಳೆ ಓಡಾಡುವ ಸಾರ್ವಜನಿಕರಿಗೆ ಬೆದರಿಕೆ ಹಾಕಿ ಮೊಬೈಲ್‌ ಕಳ್ಳತನ ಕೃತ್ಯ ಎಸಗಿದ್ದ. ಬಳಿಕ ಈ ಕಳವು ಮೊಬೈಲ್‌ಗಳನ್ನು ಮೆಜೆಸ್ಟಿಕ್‌ನ ಬ್ಯಾಂಕಾಂಕ್‌ ಬಜಾರ್‌ನಲ್ಲಿ ಮೊಬೈಲ್‌ ಅಂಗಡಿ ಇಟ್ಟುಕೊಂಡಿದ್ದ ನಯಾಜ್‌ಗೆ ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಗಾಂಜಾ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.