ಬೆಂಗಳೂರು(ಅ.01): ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಯಲಹಂಕ-ದೇವನಹಳ್ಳಿ ನಡುವೆ ನಿರ್ಮಿಸಲಾಗಿರುವ ಹಾಲ್ಟ್‌ ರೈಲು ನಿಲ್ದಾಣ ಉದ್ಘಾಟನೆಗೆ ಸಜ್ಜುಗೊಂಡಿದ್ದು, ಶೀಘ್ರದಲ್ಲೇ ಸೇವೆಗೆ ಮುಕ್ತವಾಗಲಿದೆ.

ಈ ರೈಲು ನಿಲ್ದಾಣ ಸೇವೆಗೆ ಮುಕ್ತಾವಾಗುವುದರಿಂದ ವಿಮಾನ ಪ್ರಯಾಣಿಕರು ರೈಲಿನಲ್ಲಿ ಮೆಜೆಸ್ಟಿಕ್‌ನ ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಹಾಲ್ಟ್‌ ರೈಲು ನಿಲ್ದಾಣಕ್ಕೆ 30 ನಿಮಿಷದಲ್ಲಿ ತಲುಪಬಹುದು. ಬಳಿಕ ಅಲ್ಲಿಂದ ಶೆಟಲ್‌ ಬಸ್‌ನಲ್ಲಿ 10ರಿಂದ 15 ನಿಮಿಷದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಬಹುದು. ಅಂದರೆ, ಪ್ರಯಾಣಿಕರು ಮೆಜೆಸ್ಟಿಕ್‌ನಿಂದ ವಿಮಾನ ನಿಲ್ದಾಣವನ್ನು 45 ನಿಮಿಷದೊಳಗೆ ತಲುಪಬಹುದು.

ನೈಋುತ್ಯ ರೈಲ್ವೆ ಹಾಗೂ ಬೆಂಗಳೂರು ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌(ಬಿಐಎಎಲ್‌) ಸಹಯೋಗದಲ್ಲಿ ಸುಮಾರು .3 ಕೋಟಿ ವೆಚ್ಚದಲ್ಲಿ ಈ ನಿಲ್ದಾಣ ನಿರ್ಮಿಸಲಾಗಿದೆ. ರೈಲ್ವೆ ಇಲಾಖೆಯು ನಿಲ್ದಾಣಕ್ಕೆ ಭೂಮಿ ನೀಡಿದ್ದು, ಬಿಐಎಎಲ್‌ ಸುಸಜ್ಜಿತ ನಿಲ್ದಾಣ ನಿರ್ಮಿಸಿದೆ. ಈ ರೈಲು ನಿಲ್ದಾಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 4.5 ಕಿ.ಮೀ. ದೂರದಲ್ಲಿದೆ.

ಕೇವಲ 10 ನಿಮಿಷದಲ್ಲಿ ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಯಾಣ!

ಈ ರೈಲು ನಿಲ್ದಾಣದ ಪ್ಲಾಟ್‌ ಫಾಮ್‌ರ್‍ನಲ್ಲಿ ಟಿಕೆಟ್‌ ಕೌಂಟರ್‌, ರಾರ‍ಯಂಪ್‌, ಓಪನ್‌ ಪಾರ್ಕಿಂಗ್‌, 10 ವಾಟರ್‌ ಸಿಂಕ್ಸ್‌, 10 ಬೆಂಚ್‌ಗಳು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರೈಲ್ವೆಯು ನಿಲ್ದಾಣ ಕಾಮಗಾರಿ ಆರಂಭಿಸಲು 2019ರ ಜೂನ್‌ನಲ್ಲಿ ಅನುಮತಿ ನೀಡಿ, ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿತ್ತು. ಕೆಲ ತಾಂತ್ರಿಕ ಸಮಸ್ಯೆಗಳಿಂದ ಕಾಮಗಾರಿ ವಿಳಂಬವಾಗಿತ್ತು. ಹೀಗಾಗಿ 2020ರ ಏಪ್ರಿಲ್‌ ಅಂತ್ಯಕ್ಕೆ ಗಡುವು ನೀಡಲಾಗಿತ್ತು. ಆದರೆ, ಕೊರೋನಾದಿಂದ ಲಾಕ್‌ಡೌನ್‌, ಕಾರ್ಮಿಕರ ಕೊರತೆ ಹೀಗೆ ನಾನಾ ಕಾರಣಗಳಿಂದ ಮತ್ತಷ್ಟು ವಿಳಂಬವಾಗಿತ್ತು. ಇದೀಗ ಎಲ್ಲ ಅಡೆತಡೆ ದಾಟಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಶೆಟಲ್‌ ಬಸ್‌ ಸೇವೆ:

ಈ ಹಾಲ್ಟ್‌ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣದ ನಡುವೆ ಬಿಎಂಟಿಸಿ ಶೆಟಲ್‌ ಬಸ್‌ ಸೇವೆ ಕಲ್ಪಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ರೈಲ್ವೆ ಹಾಗೂ ಬಿಐಎಎಲ್‌ ಅಧಿಕಾರಿಗಳು ಬಿಎಂಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಆದರೆ, ಈ ಸಂಬಂಧ ಬಿಎಂಟಿಸಿ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ರೈಲು ಸಂಚಾರ ಸಮಯ, ಪ್ರಯಾಣಿಕರ ಸಂಖ್ಯೆ ಮೊದಲಾದ ಅಂಶಗಳನ್ನು ಗಮನಿಸಿ ಬಸ್‌ ಸಂಚಾರ ವೇಳಾ ಪಟ್ಟಿ ಸಿದ್ಧಪಡಿಸಬೇಕಾಗುತ್ತದೆ. ಶೀಘ್ರದಲ್ಲಿಯೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಹಾಲ್ಟ್‌ ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಿದ್ದೇವೆ. ಕೇಂದ್ರ ರೈಲ್ವೆ ಸಚಿವಾಲಯದ ಸೂಚನೆಗೆ ಕಾಯುತ್ತಿದ್ದು, ಶೀಘ್ರದಲ್ಲೇ ಅನುಮತಿ ಸಿಗುವ ನಿರೀಕ್ಷೆಯಿದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್‌ ಕುಮಾರ್‌ ವರ್ಮಾ ತಿಳಿಸಿದ್ದಾರೆ.