ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಅ.30): ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲ 6,255 ಮತದಾರರ ಪೈಕಿ 3,504 ಮತದಾರರು ಚುನಾವಣಾ ಆಯೋಗದ ಅಧಿಕಾರಿಗಳ ಸಂಪರ್ಕಕ್ಕೆ ಸಿಕ್ಕಿಲ್ಲ!

ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನದ ವೇಳೆ 80 ವರ್ಷ ಮೇಲ್ಪಟ್ಟಹಾಗೂ ಅಂಗವಿಕಲರಿಗೆ ಅಂಚೆ ಮತದಾನಕ್ಕೆ ಚುನಾವಣಾ ಆಯೋಗ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಒಟ್ಟು ಮತದಾರ ಪೈಕಿ 80 ವರ್ಷ ಮೇಲ್ಪಟ್ಟ 5,560 ಹಿರಿಯ ಮತದಾರರು ಹಾಗೂ 695 ಅಂಗವಿಕಲ ಮತದಾರರು ಸೇರಿದಂತೆ ಒಟ್ಟು 6,255 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 1,426 ಹಿರಿಯ ನಾಗರಿಕರು ಹಾಗೂ 100 ಅಂಗವಿಕಲರು ಲಾಕ್‌ಡೌನ್‌, ಕೊರೋನಾ ಸೋಂಕು ಹಾಗೂ ಇತರೆ ಕಾರಣಗಳಿಂದಾಗಿ ಮನೆ ಬದಲಾಯಿಸಿದ್ದಾರೆ. ಇನ್ನು 1,272 ಹಿರಿಯ ನಾಗರಿಕರು ಹಾಗೂ 308 ಅಂಗವಿಕಲರು ಆರ್‌ಆರ್‌ನಗರದಲ್ಲಿ ಇದ್ದಾರೆ. ಆದರೆ, ಮತದಾರರು ಚುನಾವಣಾ ಅಧಿಕಾರಿ-ಸಿಬ್ಬಂದಿಯ ಸಂಪರ್ಕಕ್ಕೆ ಮಾತ್ರ ಸಿಕ್ಕಿಲ್ಲ.

717 ಮಂದಿ ಮರಣ:

ಇನ್ನು 6,255 ಮಂದಿಯ ಪೈಕಿ 708 ಹಿರಿಯ ನಾಗಕರಿಕರು ಹಾಗೂ 9 ಮಂದಿ ಅಂಗವಿಕಲರು ಈಗಾಗಲೇ ಮೃತಪಟ್ಟಿದ್ದಾರೆ. ಆದರೆ, ಅವರು ಮೃತಪಟ್ಟ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಅವರ ಹೆಸರು ಮತದಾರ ಪಟ್ಟಿಯಲ್ಲಿ ಇವೆ ಎಂದು ಆಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಉಪಚುನಾವಣೆ: ಮತಗಟ್ಟೆ ಹೆಚ್ಚಳಕ್ಕೆ ಆಯೋಗ ಒಪ್ಪಿಗೆ

ಅಂಚೆ ಮತದಾನ ಬೇಡ ಎಂದ ಎರಡು ಸಾವಿರ ಮತದಾರರು

ಅಂಚೆ ಮತದಾನ ಅವಕಾಶ ನೀಡಿದ 6,255 ಮತದಾರರ ಪೈಕಿ 1,765 ಹಿರಿಯ ನಾಗರಿಕರು ಹಾಗೂ 255 ಅಂಗವಿಕಲರು ತಾವು ಅಂಚೆ ಮತದಾನ ಮಾಡುವುದಿಲ್ಲ. ನೇರವಾಗಿ ಮತಗಟ್ಟೆಗೆ ಬಂದು ಮತದಾನ ಹಕ್ಕು ಚಲಾಯಿಸುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಂಚೆ ಮತಪತ್ರ ಪಡೆಯದ ಮತದಾರರು ನೇರವಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಬಹುದು. ಒಂದು ವೇಳೆ ಅಂಚೆ ಮತ ಪತ್ರ ಪಡೆದುಕೊಂಡಿದ್ದರೆ ಅವರಿಗೆ ಮತಗಟ್ಟೆಯಲ್ಲಿ ಮತದಾನಕ್ಕೆ ಅವಕಾಶ ಇರುವುದಿಲ್ಲ. ಅಂಚೆ ಮತಪತ್ರದ ಮೂಲಕವೇ ಮತದಾನ ಮಾಡಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

502 ಜನ ಮಾತ್ರ ಅಂಚೆ ಮತದಾನ

ಇನ್ನು 489 ಹಿರಿಯ ನಾಗರಿಕರು ಹಾಗೂ 23 ಅಂಗವಿಕಲರು ಅಂಚೆ ಮತದಾನ ಮಾಡಲು ಒಪ್ಪಿಗೆ ಸೂಚಿಸಿ ಅಂಚೆ ಮತಪತ್ರ ಪಡೆದಿದ್ದಾರೆ. ಅ.29ರಿಂದ ಅ.31ರ ವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಅಂಚೆ ಮತಪತ್ರ ಪಡೆಯುವುದಕ್ಕೆ 12 ತಂಡ ರಚಿಸಲಾಗಿದೆ. ತಂಡದಲ್ಲಿ ಮತಗಟ್ಟೆ ಅಧಿಕಾರಿ, ವಿಡಿಯೋಗ್ರಾಫರ್‌, ಪೊಲೀಸ್‌ ಸಿಬ್ಬಂದಿ ಇರಲಿದ್ದಾರೆ.

ಅಂಚೆ ಮತದಾನಕ್ಕೆ ಗುರುತಿಸಿದ 6,255 ಮತದಾರರ ಪೈಕಿ ಕೆಲವರು ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗಿದ್ದಾರೆ. ಚುನಾವಣಾ ಆಯೋಗಕ್ಕೆ ನೀಡಿದ ವಿಳಾಸದಲ್ಲಿ ಇಲ್ಲ. ಮತ್ತೆ ಕೆಲವರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವುದಾಗಿ ಹೇಳಿದ್ದಾರೆ ಎಂದು ಚುನಾವಣಾ ಅಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.