Asianet Suvarna News Asianet Suvarna News

ಹಾವೇರಿ: ಅತಿವೃಷ್ಟಿಗೆ 3500 ಹೆಕ್ಟೇರ್‌ ಬೆಳೆಹಾನಿ

ನೆರೆಯಿಂದ ನದಿಪಾತ್ರ, ಅತಿವೃಷ್ಟಿಯಿಂದ ಕೃಷಿ, ತೋಟಗಾರಿಕೆ ಬೆಳೆಗಾರರಿಗೆ ನಷ್ಟ| ನೂರಕ್ಕೂ ಹೆಚ್ಚು ಮನೆಗಳಿಗೂ ಹಾನಿ| ಜಿಲ್ಲಾಡಳಿತದಿಂದ ಮನೆಹಾನಿ ಸಮೀಕ್ಷೆ| ಜೋರಾಗಿ ಬೀಸಿದ ಗಾಳಿಯಿಂದಲೂ ಬೆಳೆ ನೆಲಸಮವಾಗಿ ಹಾನಿ| 

3500 hectares of crop damage due to Flood in Haveri District
Author
Bengaluru, First Published Aug 19, 2020, 12:17 PM IST

ಹಾವೇರಿ(ಆ.19): ಈ ತಿಂಗಳ ಮೊದಲ ವಾರದಲ್ಲಿ ಆದ ಅತಿವೃಷ್ಟಿ ಹಾಗೂ ನದಿಪಾತ್ರದಲ್ಲಿ ನೆರೆಯಿಂದ ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ 3511 ಹೆಕ್ಟೇರ್‌ ಬೆಳೆಹಾನಿಯಾಗಿದೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರಿಗೆ ಕೋಟ್ಯಂತರ ರು. ಆರ್ಥಿಕ ನಷ್ಟವಾಗಿದೆ.

ಪ್ರತಿವರ್ಷವೂ ಜಿಲ್ಲೆಯ ರೈತರು ಪ್ರಕೃತಿವಿಕೋಪಕ್ಕೆ ಸಮಸ್ಯೆ ಎದುರಿಸುವಂತಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಹರಿದಿರುವ ನದಿಗಳಲ್ಲಿ ಪ್ರವಾಹ ಬಂದು ಲಕ್ಷಾಂತರ ಹೆಕ್ಟೇರ್‌ ಜಮೀನು ಜಲಾವೃತವಾಗಿ ಸುಮಾರು .200 ಕೋಟಿಗೂ ಹೆಚ್ಚು ಹಾನಿಯಾಗಿತ್ತು. ಹತ್ತಾರು ಸಾವಿರ ಜನರು ಮನೆಮಠ ಕಳೆದುಕೊಂಡಿದ್ದರು. ಇದರಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಕೊರೋನಾ ಮಹಾಮಾರಿ ವಕ್ಕರಿಸಿದ್ದರಿಂದ ಬೆಳೆ ಮಾರಾಟ ಮಾಡಲಾಗದೇ ರೈತರು ನಷ್ಟಅನುಭವಿಸಿದ್ದರು. ಈ ಸಲದ ಮುಂಗಾರಿನಲ್ಲಿ ಹದವಾಗಿ ಮಳೆಯಾಗಿ 3.10 ಲಕ್ಷಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಆದರೆ, ಈ ತಿಂಗಳ ಮೊದಲ ವಾರದಲ್ಲಿ ಬಿದ್ದ ಅತಿಯಾದ ಮಳೆ ಹಾಗೂ ನದಿಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿ ನದಿ ಪಾತ್ರದ ಜಮೀನುಗಳಿಗೆ ನೀರು ಹೊಕ್ಕು ನಷ್ಟವಾಗಿದೆ. ಹೀಗೆ ಪ್ರತಿ ಹಂಗಾಮಿನಲ್ಲೂ ರೈತರು ಸಂಕಷ್ಟ ಎದುರಿಸುವಂತಾಗಿದೆ.

ಸವಣೂರು: ಪಾಕಿಸ್ತಾನದ ಧ್ವಜಾರೋಹಣದ ವಿಡಿಯೋ ಶೇರ್‌ ಮಾಡಿದ್ದ ಆರೋಪಿ ಬಂಧನ

3098 ಹೆಕ್ಟೇರ್‌ ಬೆಳೆಹಾನಿ:

ಪ್ರಕೃತಿ ವಿಕೋಪದಿಂದ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 3098 ಹೆಕ್ಟೇರ್‌ ಪ್ರದೇಶದಲ್ಲಿನ ಕೃಷಿ ಬೆಳೆಹಾನಿಯಾಗಿದೆ. ಈ ಪೈಕಿ ನದಿ ಪಾತ್ರದ 167 ಗ್ರಾಮಗಳ 1245 ಹೆಕ್ಟೇರ್‌ ಹಾಗೂ ಅತಿವೃಷ್ಟಿಯಿಂದ 111 ಗ್ರಾಮಗಳ 1853 ಹೆಕ್ಟೇರ್‌ ಬೆಳೆನಷ್ಟವಾಗಿದೆ. ಅದರಲ್ಲೂ ಶಿಗ್ಗಾಂವಿ ಮತ್ತು ಹಿರೇಕೆರೂರು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಶಿಗ್ಗಾಂವಿ ತಾಲೂಕಿನಲ್ಲಿ 1704 ಹೆಕ್ಟೇರ್‌, ಹಿರೇಕೆರೂರು ತಾಲೂಕಿನಲ್ಲಿ 1035 ಹೆಕ್ಟೇರ್‌ ಬೆಳೆನಷ್ಟವಾಗಿದೆ.
ಹಾನಗಲ್ಲ ತಾಲೂಕಿನಲ್ಲಿ 192 ಹೆಕ್ಟೇರ್‌, ಸವಣೂರು ತಾಲೂಕಿನಲ್ಲಿ 97 ಹೆಕ್ಟೇರ್‌, ಹಾವೇರಿ ತಾಲೂಕಿನಲ್ಲಿ 71 ಹೆಕ್ಟೇರ್‌ ಬೆಳೆಹಾನಿಯಾಗಿದೆ ಎಂದು ಕೃಷಿ ಇಲಾಖೆ ನಡೆಸಿದ ಜಂಟಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ. ಒಟ್ಟು 278 ಗ್ರಾಮಗಳಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿಯಾಗಿದೆ. ಸಾವಿರಾರು ರೈತರಿಗೆ ಸೇರಿದ ಹೊಲಗದ್ದೆಗಳಲ್ಲಿ ನೀರು ಹೊಕ್ಕು ಬೆಳೆಹಾನಿಯಾಗಿದೆ. ಅದರಲ್ಲೂ ಈ ವರ್ಷ ಮೆಕ್ಕೆಜೋಳ ಮತ್ತು ಹತ್ತಿ ಹೆಚ್ಚಾಗಿ ಬೆಳೆಯಲಾಗಿದ್ದು, ಆ ಬೆಳೆಗಳು ಹಾನಿಯಾಗಿವೆ. ಇದೇ ವೇಳೆ ಜೋರಾಗಿ ಬೀಸಿದ ಗಾಳಿಯಿಂದಲೂ ಬೆಳೆ ನೆಲಸಮವಾಗಿ ಹಾನಿಯಾಗಿದೆ.

413 ಹೆಕ್ಟೇರ್‌ ತೋಟಗಾರಿಕಾ ಬೆಳೆ:

ಅತಿವೃಷ್ಟಿಯಿಂದ ಕೃಷಿಯಷ್ಟೇ ಅಲ್ಲದೇ ತೋಟಗಾರಿಕಾ ಬೆಳೆಗಳಾದ ಬಾಳೆ, ಮೆಣಸಿನಕಾಯಿ ಬೆಳೆಯೂ ಹಾನಿಯಾಗಿದೆ. ಜಿಲ್ಲೆಯಲ್ಲಿ 413 ಹೆಕ್ಟೇರ್‌ ಪ್ರದೇಶದ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೊಪ್ಪು, ತರಕಾರಿ ಬೆಳೆಯಲಾಗುತ್ತಿದ್ದು, ನಿರಂತರ ಮಳೆಯಿಂದ ಕಾಯಿಪಲ್ಲೆ ಗಿಡಗಳು ಕೊಳೆತಿವೆ. ಗಾಳಿಯ ರಭಸಕ್ಕೆ ಬಾಳೆ ತೋಟಗಳು ನೆಲಕ್ಕುರುಳಿವೆ.

ಮನೆಗಳಿಗೂ ಹಾನಿ:

ಇದೇ ವೇಳೆ ನೂರಕ್ಕೂ ಹೆಚ್ಚು ಮನೆಗಳಿಗೂ ಹಾನಿಯಾಗಿದೆ. ಅನೇಕ ಮನೆಗಳು ಮಳೆಯಿಂದ ಬಿದ್ದಿದ್ದು, ಜಿಲ್ಲಾಡಳಿತವು ಮನೆಹಾನಿ ಸಮೀಕ್ಷೆ ನಡೆಸುತ್ತಿದೆ. ಕಳೆದ ವರ್ಷ ನೆರೆ ವೇಳೆ 10 ಸಾವಿರಕ್ಕೂ ಹೆಚ್ಚು ಮನೆಗಳು ಬಿದ್ದಿದ್ದವು. ಬಿದ್ದ ಮನೆಗಳ ಮರುನಿರ್ಮಾಣಕ್ಕೆ ಸರ್ಕಾರ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಿದ್ದು, ಮತ್ತೆ ಈ ಸಲವೂ ಜಿಲ್ಲೆಯ ಜನರು ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿದ್ದಾರೆ. ಆದರೆ, ಮಳೆ ಇಳಿಕೆಯಾಗಿದ್ದರಿಂದ ಎದುರಾಗಬಹುದಾಗಿದ್ದ ಅಪಾಯ ಸದ್ಯಕ್ಕೆ ದೂರವಾಗಿದೆ.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮನೆ ಹಾಗೂ ಬೆಳೆಹಾನಿಯಾಗಿದೆ. ಈಗಾಗಲೇ ಜಂಟಿ ಸಮೀಕ್ಷೆ ಕೈಗೊಂಡು ಬೆಳೆಹಾನಿ ಅಂದಾಜು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಬಿದ್ದಿರುವ ಮನೆ ಹಾನಿ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದ್ದು, ಇನ್ನೊಂದು ದಿನದೊಳಗಾಗಿ ವರದಿ ಸಲ್ಲಿಸುವಂತೆ ಎಲ್ಲ ತಹಸೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios