ಧಾರವಾಡ: ಮಾಸ್ಕ್ ಧರಿಸದವರಿಂದ 35 ಲಕ್ಷ ದಂಡ ವಸೂಲಿ
ಪೊಲೀಸರು, ವಿವಿಧ ಇಲಾಖೆಗಳ ಅಧಿಕಾರಿಗಳ ಕಾರ್ಯಾಚರಣೆ| ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಸೋಂಕು| ಮಾಸ್ಕ್ ಧರಿಸುವುದು ಸೇರಿದಂತೆ ಕೊರೋನಾ ನಿಯಮಗಳನ್ನು ಪಾಲಿಸಲು ಹಿಂದೇಟು ಹಾಕುತ್ತಿರುವ ಜನತೆ| ಮಾಸ್ಕ್ ಹಾಕದೇ ಜಗಳಕ್ಕಿಳಿದ ವ್ಯಕ್ತಿ|
ಧಾರವಾಡ(ಅ.02): ಕೊರೋನಾ ಬರದಂತೆ ಎಚ್ಚರ ವಹಿಸಲು ಮಾಸ್ಕ್ ಹಾಕಿಕೊಳ್ಳಿ ಎಂದು ಜಿಲ್ಲಾಡಳಿತ ಎಷ್ಟೇ ಎಚ್ಚರಿಕೆ ಮಾತು ಹೇಳಿದರೂ ಮಾರುಕಟ್ಟೆಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಜನರು ಬಿಂದಾಸ್ ಆಗಿ ಅಡ್ಡಾಡುತ್ತಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಕಳೆದ ಸೆ. 25ರಿಂದ ಮಾಸ್ಕ್ ಹಾಕಿಕೊಳ್ಳದೇ ಇರುವವರಿಗೆ ದಂಡ ವಿಧಿಸುವ ಕ್ರಮಕ್ಕೆ ಮುಂದಾಗಿದೆ.
ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತವು ಕಳೆದ ಸೆ. 25ರಿಂದ ವಿಶೇಷ ಕಾರ್ಯಾಚರಣೆ ಮಾಡುತ್ತಿದೆ. ಇಲ್ಲಿಯವರೆಗೆ ಹು- ಧಾ ಮಹಾನಗರ ಪಾಲಿಕೆ 5 ಸಾವಿರಕ್ಕೂ ಹೆಚ್ಚು ಜನರಿಂದ .10.30 ಲಕ್ಷ ಸೇರಿದಂತೆ ಜಿಲ್ಲೆಯಲ್ಲಿ ಅಂದಾಜು .35 ಲಕ್ಷ ವರೆಗೆ ದಂಡ ವಿಧಿಸಲಾಗಿದೆ. ಜನರು ಸೇರುವ ಮಾರುಕಟ್ಟೆ, ಹೋಟೆಲ್, ಪಾನ್ ಶಾಪ್ ಮತ್ತಿತರ ಅಂಗಡಿ- ಮುಂಗಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾಸ್ಕ್ ಹಾಕದೇ ಇದ್ದರೆ, ನಗರ ಪ್ರದೇಶಗಳಲ್ಲಿ .200 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ .100 ದಂಡ ವಿಧಿಸಲು ಸರ್ಕಾರ ಸೂಚಿಸಿದೆ.
ಕರ್ನಾಟಕ ಬಿಜೆಪಿಯ ಮತ್ತಿಬ್ಬರು ಶಾಸಕರುಗಳಿಗೆ ಕೊರೋನಾ ದೃಢ
ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದಂಡ ವಿಧಿಸಲು ಪೊಲೀಸ್, ಮಹಾನಗರಪಾಲಿಕೆ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಕಂದಾಯ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡಗಳನ್ನು ರಚಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ .35 ಲಕ್ಷ ದಂಡ ವಿಧಿಸಲಾಗಿದೆ. ಕೊರೋನಾ ವೈರಾಣು ನಿಯಂತ್ರಣಕ್ಕೆ ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಈ ನಿಯಮ ಪಾಲಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ಮಾಸ್ಕ್ ಹಾಕದೇ ಜಗಳಕ್ಕಿಳಿದ ವ್ಯಕ್ತಿ
ದಿನೇ ದಿನೇ ಕೋವಿಡ್ ಸೋಂಕು ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಜನತೆ ಮಾತ್ರ ಮಾಸ್ಕ್ ಧರಿಸುವುದು ಸೇರಿದಂತೆ ಕೊರೋನಾ ನಿಯಮಗಳನ್ನು ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ವ್ಯಕ್ತಿಯೊಬ್ಬರು ಮಾಸ್ಕ್ ಧರಿಸದೇ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರ ಜತೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ.
ಧಾರವಾಡದ ಸುಭಾಸ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಮಾಸ್ಕ್ ಧರಿಸದೇ ಓಡಾಡುತ್ತಿದ್ದರು. ಆಗ ಪಾಲಿಕೆ ಅಧಿಕಾರಿಗಳು, ಪೊಲೀಸರು ಪ್ರಶ್ನಿಸಿದ್ದಾರೆ. ಆಗ ಅಧಿಕಾರಿಗಳ ಜತೆ ವಾದಕ್ಕಿಳಿದ ವ್ಯಕ್ತಿ ‘ನಾನೊಬ್ಬನೇ ಮಾಸ್ಕ್ ಹಾಕಿಲ್ಲ. ಇಲ್ಲಿ ನೂರಾರು ಜನರು ಹಾಕಿಕೊಂಡಿಲ್ಲ. ನನಗೆ ಮಾತ್ರ ಏತಕ್ಕೆ ಹೇಳುತ್ತಿದ್ದೀರಿ’ ಎಂದು ಜಗಳಕ್ಕೆ ಇಳಿದಿದ್ದಾನೆ. ಕೊನೆಗೆ ಆತನ ರಂಪಾಟಕ್ಕೆ ಬೇಸತ್ತ ಅಧಿಕಾರಿಗಳು ಇನ್ನಾದರೂ ಮಾಸ್ಕ್ ಹಾಕಿಕೋ ಎಂದು ಮನೆಗೆ ಕಳಿಸಿದರು.