ಬಳ್ಳಾರಿ(ಡಿ.03):  ಗ್ರಾಪಂ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಅಂದಾಜು ಮೌಲ್ಯ 5,12,900ದ ಅಕ್ರಮ ಮದ್ಯ ಮತ್ತು ವಾಹನ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಅಧಿಕಾರಿಗಳು ತಮ್ಮ ಸಿಬ್ಬಂದಿ ಜತೆ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಡಂಗ ಮತ್ತು ವೆಂಕಟಾಪುರ ಗ್ರಾಮಗಳ ಮ​ಧ್ಯೆ ಬರುವ ನಾಳಾ ಹತ್ತಿರ ಅನುಮಾನಾಸ್ಪದವಾಗಿ ನಿಂತಿದ್ದ ಒಂದು ಲಾರಿ ಹಾಗೂ ಒಂದು ಟ್ರ್ಯಾಕ್ಟರ್‌ ಪರಿಶೀಲನೆ ನಡೆಸಿದರು. ಈ ವೇಳೆ ಮದ್ಯ ಪತ್ತೆಯಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

'ಕಂಪ್ಲಿ, ವಿಜಯನಗರ ಜಿಲ್ಲೆ ಸೇರ್ಪಡೆಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ'

ಹೊಸಪೇಟೆ ಅಬಕಾರಿ ಜಂಟಿ ಆಯುಕ್ತ ಎಲ್‌. ಮೋಹನಕುಮಾರ್‌, ಬಳ್ಳಾರಿ ಅಬಕಾರಿ ಉಪ ಆಯುಕ್ತ ನರೇಂದ್ರಕುಮಾರ್‌ ಆದೇಶದ ಮೇರೆಗೆ ಅಬಕಾರಿ ನಿರೀಕ್ಷಕರಾದ ತುಕಾರಾಂ ನಾಯ್ಕ, ಪಿ. ಗಿರೀಶ್‌ ಮತ್ತು ಸಿಬ್ಬಂದಿಯಾದ ಸಿ. ದಕ್ಷಿಣಾಮೂರ್ತಿ ಮತ್ತು ಹರೀಶಸಿಂಗ್‌ ಅವರು ಮಂಗಳವಾರ ಸಂಜೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಈ ಲಾರಿ ಮತ್ತು ಟ್ರ್ಯಾಕ್ಟರ್‌ ರಹದಾರಿ ಪರವಾನಗಿ ಹೊಂದಿತ್ತು. ಆದರೆ ಹೆಚ್ಚಿಗೆ ಸಾಗಿಸಲಾಗುತ್ತಿತ್ತು. ಲಾರಿ ಮತ್ತು ಟ್ರ್ಯಾಕ್ಟರ್‌ನಲ್ಲಿರುವ ಮದ್ಯದ ಪೆಟ್ಟಿಗೆಗಳನ್ನು ಎಣಿಕೆ ಮಾಡಲಾಯಿತು. ಲಾರಿಯಲ್ಲಿ ರಹದಾರಿ ಪತ್ರದಲ್ಲಿರುವ ಮದ್ಯಕ್ಕಿಂತ 103.68 ಲೀ (90 ಮಿಲಿಯ ಒಸಿ ವಿಸ್ಕಿಯ 12 ಪೆಟ್ಟಿಗೆಗಳು) ಮದ್ಯವು ಹೆಚ್ಚಿರುವುದು ಹಾಗೂ ಟ್ರ್ಯಾಕ್ಟರ್‌ನಲ್ಲಿ ಪರವಾನಗಿ ಇಲ್ಲದೇ 241.92 ಲೀ. (90 ಮಿಲಿಯ ಒಸಿ ವಿಸ್ಕಿಯ 28 ಪೆಟ್ಟಿಗೆಗಳು) ಇದ್ದವು. ಒಟ್ಟು 345.60 ಲೀ. ಅಕ್ರಮ ಮದ್ಯ ಕಂಡುಬಂದಿದೆ.