ಕೊಪ್ಪಳ ಅಜ್ಜನ ಜಾತ್ರೆಗಾಗಿ ಸಿದ್ಧವಾಗುತ್ತಿವೆ 4 ಲಕ್ಷ ಶೇಂಗಾ ಹೋಳಿಗೆ!
ಅಜ್ಜನ ಭಕ್ತರಿಗೆ ದಾಸೋಹದಲ್ಲಿ ಸಿಗಲಿವೆ ರುಚಿ ರುಚಿ ಶೇಂಗಾ ಹೋಳಿಗೆ
ಸಿಂಧನೂರು ಗೆಳಯರ ಬಳಗದಿಂದ ರೆಡಿಯಾಗುತ್ತಿವೆ ಶೇಂಗಾ ಹೋಳಿಗೆ
32 ಹಳ್ಳಿಯ ಜನರು ತಯಾರಿ
90 ಕ್ವಿಂಟಾಲ್ ಶೇಂಗಾದಿಂದ 4 ಲಕ್ಷ ಹೋಳಿಗೆ ಪ್ಲಾನ್!
ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು: ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆಯ ಸಂಭ್ರಮದ ದಿನ ಜನವರಿ 8ಕ್ಕೆ ಬಂದೇ ಬಿಟ್ಟಿದೆ.
ಲಕ್ಷಾಂತರ ಜನ ಸೇರಿ ಆಚರಣೆ ಮಾಡುವ ಗವಿಸಿದ್ದೇಶ್ವರ ಜಾತ್ರೆ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಅತಿದೊಡ್ಡ ಹಬ್ಬ. ಸಾತ್ವಿಕ ರೀತಿಯಲ್ಲಿ, ಭಕ್ತರ ಹಿಡಿ ಕೊಡುಗೆಯನ್ನೇ ಮಹಾ ಎಂಬಂತೆ ಸ್ವೀಕರಿಸಿ ಸಮಸ್ತರಿಗೆ ಹಂಚುವ ಮಹತ್ಕಾರ್ಯ ಈ ಉತ್ಸವದಲ್ಲಿ ನಡೆಯುತ್ತದೆ.
ಇಲ್ಲಿ ನಾನು– ನೀನು ಎಂಬ ಬೇಧವಿಲ್ಲ. ಮೌಢ್ಯಕ್ಕೆ ಅವಕಾಶವಿಲ್ಲ. ದೇವರ ಹೆಸರಿನಲ್ಲಿ ಎಲ್ಲಾ ಜಾತಿ ಬಾಂಧವರು ಸೇರಿ ಅಜ್ಜನ ತೇರು ಎಳೆಯುವುದು ನೋಡುವುದೇ ಒಂದು ಸಂಭ್ರಮ ಸಡಗರ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಸಂಭ್ರಮದಿಂದ ಜಾತ್ರೆ ಆಚರಣೆ ಮಾಡಲು ಆಗಿರಲಿಲ್ಲ. ಹೀಗಾಗಿ ಈ ವರ್ಷ ಮತ್ತೆ ಲಕ್ಷಾಂತರ ಜನರು ಸೇರಿ ಅಜ್ಜನ ಜಾತ್ರೆ ಆಚರಣೆಗೆ ಸಕಲ ಸಿದ್ಧತೆಗಳು ನಡೆದಿವೆ.
ಜನವರಿ 8ರಂದು ಗವಿಸಿದ್ದೇಶ್ವರ ಮಠದ ಮಹಾ ರಥೋತ್ಸವ ನಡೆಯುತ್ತದೆ. ಮಠದ ಅಧಿಕೃತ ಉತ್ಸವ ಕೇವಲ ಮೂರು ದಿನಗಳಾದರೂ ತಿಂಗಳುಗಳ ಕಾಲ ಜಾತ್ರೆಯ ಸಂಭ್ರಮ ಇಲ್ಲಿ ಇರುತ್ತದೆ. ಈ ಜಾತ್ರೆಗೆ ಬರುವವರೆಷ್ಟೋ, ಹೋದವರೆಷ್ಟೋ ಲೆಕ್ಕ ಇಟ್ಟವರಿಲ್ಲ. ಬಂದವರಿಗೆ ದಾಸೋಹಕ್ಕೆ ಕೊರತೆ ಇಲ್ಲ. ಇಂತಹ ದಾಸೋಹಕ್ಕಾಗಿ ಈ ವರ್ಷ ಜಾತ್ರೆಯ ನಿಮಿತ್ಯ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗೆಳೆಯರ ಬಳಗ 4 ಲಕ್ಷ ಶೇಂಗಾದ ಹೋಳಿಗೆ ರೆಡಿ ಮಾಡಲು ಮುಂದಾಗಿದ್ದಾರೆ.
4 ಲಕ್ಷ ಶೇಂಗಾ ಹೋಳಿಗೆ ಏನು ಬೇಕಾಗಬಹುದು?
ಜನವರಿ 8 ರಂದು ನಡೆಯಲಿರುವ ಕೊಪ್ಪಳದ ಗವಿಸಿದ್ದೇಶ್ವರ ಮಠದ ಮಹಾರಥೋತ್ಸವಕ್ಕಾಗಿ ಬರುವ ಭಕ್ತರ ದಾಸೋಹಕ್ಕಾಗಿ ನಾಲ್ಕು ಲಕ್ಷ ಶೇಂಗಾದ ಹೋಳಿಗೆ ರೆಡಿಯಾಗುತ್ತಿವೆ.
ತಿರುಪತಿ ದೇವಾಲಯದ ಗೋಪುರಕ್ಕೆ ಚಿನ್ನದ ಲೇಪನ, 6-8 ತಿಂಗಳು ದೇಗುಲ ಕ್ಲೋಸ್?
ರಾಯಚೂರು ಜಿಲ್ಲೆ ಸಿಂಧನೂರಿನ ಗೆಳೆಯರ ಬಳಗ ಹಾಗೂ ಸಿಂಧನೂರಿನ ಗವಿಸಿದ್ದೇಶ್ವರ ಆಗ್ರೋ ಫುಡ್ಸ್ ಮಾಲೀಕ ವಿಜಯಕುಮಾರ್ ಗುಡಿಹಾಳ ನೇತೃತ್ವದಲ್ಲಿ ಈ ಸೇವಾ ಕಾರ್ಯ ಶುರು ಮಾಡಿದ್ದು, ಕಳೆದ ವರ್ಷದ ಜಾತ್ರೆಯಲ್ಲಿ ಮಿರ್ಚಿ ಬಜ್ಜಿ ವ್ಯವಸ್ಥೆ ಮಾಡಲಾಗಿತ್ತು. ಈ ವರ್ಷ ಇದೇ ಗೆಳೆಯರ ಬಳಗ ಅಜ್ಜನ ಅಪ್ಪಣೆಯಂತೆ 4 ಲಕ್ಷ ಶೇಂಗಾ ಹೋಳಿಗೆ ತಯಾರಿಕೆಗೆ ಮುಂದಾಗಿದ್ದಾರೆ. ನಾಲ್ಕು ಲಕ್ಷ ಶೇಂಗಾ ಹೋಳಿಗೆ ಮಾಡಲು 90 ಕ್ವಿಂಟಾಲ್ ಶೇಂಗಾ(ಕಡಲೇಕಾಯಿ), 75 ಕ್ವಿಂಟಾಲ್ ಬೆಲ್ಲ, 25 ಕ್ವಿಂಟಾಲ್ ಮೈದಾಹಿಟ್ಟು ಮತ್ತು ಹೋಳಿಗೆಗೆ ಬೇಕಾದಷ್ಟು ಅಡುಗೆ ಎಣ್ಣೆ ಮತ್ತು ತುಪ್ಪ ಬಳಸಲಾಗುತ್ತಿದೆ.
32 ಹಳ್ಳಿಯಲ್ಲಿ ರೆಡಿ ಆಗುತ್ತಿವೆ 4 ಲಕ್ಷ ಶೇಂಗಾ ಹೋಳಿಗೆ
ಗವಿಸಿದ್ದೇಶ್ವರ ಜಾತ್ರೆ ಅಂದ್ರೆ ಅದು ಒಂದು ಸಂಭ್ರಮದ ಉತ್ಸವ. ಆ ಜಾತ್ರೆ ನೋಡುವುದೇ ಮಹಾ ಆನಂದ. ಇಂತಹ ಜಾತ್ರೆಯ ದಾಸೋಹ ಊಟ ಅಂದ ಮೇಲೆ ಹೇಳುವುದೇ ಬೇಡ. ದಾಸೋಹದ ರುಚಿ ಸವಿದವರಿಗೆ ಗೊತ್ತು. ಇಂತಹ ದಾಸೋಹಕ್ಕಾಗಿ ಸಿಂಧನೂರಿನ ಗೆಳೆಯರ ಬಳಗ 4 ಲಕ್ಷ ಶೇಂಗಾದ ಹೋಳಿಗೆ ಮಾಡಿಸಲು ಮುಂದಾಗಿದೆ. ಗೆಳೆಯರ ಬಳಗ ಹಳ್ಳಿ- ಹಳ್ಳಿ ಅಲೆದಾಟ ಮಾಡಿ 32 ಹಳ್ಳಿಯಲ್ಲಿ ಸಭೆ ನಡೆಸಿ ಅಜ್ಜನ ಜಾತ್ರೆಗೆ ಶೇಂಗಾ ಹೋಳಿಗೆ ಮಾಡಿಸಲು ಮುಂದಾಗಿದೆ. ಅದರಂತೆ 32 ಹಳ್ಳಿಗಳಿಗೆ ಮನೆ ಮನೆಗೆ 3 ಕೆ.ಜಿ. ಶೇಂಗಾ, 2 ಕೆ.ಜಿ. ಬೆಲ್ಲ, 1 ಕೆ.ಜಿ. ಮೈದಾಹಿಟ್ಟು ಪ್ಯಾಕೆಟ್ ಮಾಡಿ ಭಕ್ತರಿಗೆ ಕೊಡಲಾಗುತ್ತಿದ್ದು, ಹಳ್ಳಿಗೆ 3- 4 ಕ್ವಿಂಟಾಲ್ ಫುಡ್ ಕಿಟ್ ಗಳನ್ನು ವಿತರಣೆ ಮಾಡಿ ಹೋಳಿಗೆ ತಯಾರು ಮಾಡುತ್ತಿದ್ದಾರೆ. ಅದರಲ್ಲೂ ಸಿಂಧನೂರು, ಕಲಮಂಗಿ, ಹತ್ತಿಗುಡ್ಡ, ಗುಡಿಹಾಳ, ಹೊಗರನಾಳ, ಗದ್ರಟಗಿ, ಬಾಗಲ್ವಾಡ, ಬಪ್ಪೂರ, ಗುಂಡ, ಸಂಕನಾಳ, ಚಿಕ್ಕಬೇರ್ಗಿ, ವಿರಾಪುರಕ್ಯಾಂಪ್, ಚನ್ನಳ್ಳಿ, ಆದಾಪುರ, ರಾಮಾತ್ನಾಳ, ಬಸಾಪುರ ಕೆ, ಮೆದಿಕಿನಾಳ, ತಲೇಖಾನ, ಯರದೋಡ್ಡಿ, ಹಡಗಲಿ ಸೇರಿದಂತೆ ಹಲವು ಗ್ರಾಮದಲ್ಲಿ ದಾಸೋಹಕ್ಕಾಗಿ ಶೇಂಗಾ ಹೋಳಿಗೆ ರೆಡಿ ಮಾಡಲಾಗುತ್ತಿದೆ.
Good luck indications: ಬಲಗೈ ತುರಿಸ್ತಿದ್ಯಾ? ಚಿಂತೆ ಬೇಡ, ಕೈ ತುಂಬಾ ದುಡ್ಡು ಬರುತ್ತೆ!
4 ದಿನಗಳಲ್ಲಿ ರೆಡಿಯಾಗಲಿವೆ ನಾಲ್ಕು ಲಕ್ಷ ಶೇಂಗಾ ಹೋಳಿಗೆ
ಜನವರಿ 8 ರಂದು ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಇರುವುದು. ಜಾತ್ರೆ ಬರುವ ಭಕ್ತರಿಗೆ ಜನವರಿ 7ರಂದು ದಾಸೋಹದಲ್ಲಿ ಶೇಂಗಾ ಹೋಳಿಗೆ ನೀಡಬೇಕು ಎಂಬುವುದು ಅಜ್ಜರ ಆದೇಶ ಆಗಿದೆ. ಹೀಗಾಗಿ ಸಿಂಧನೂರಿನ ಗೆಳೆಯರ ಬಳಗ ಈಗಾಗಲೇ 32 ಹಳ್ಳಿಯಲ್ಲಿ ಶೇಂಗಾ ಹೋಳಿಗೆ ತಯಾರಿಕೆ ಬೇಕಾದ ಸಾಮಾಗ್ರಿಗಳು ಭಕ್ತರಿಗೆ ನೀಡಿದೆ. ಜನವರಿ 2 ರಿಂದ 6 ವರೆಗೆ ಅಂದ್ರೆ ನಾಲ್ಕು ದಿನಗಳಲ್ಲಿ 32 ಗ್ರಾಮದಲ್ಲಿ ಭಕ್ತರು ದಾಸೋಹಕ್ಕಾಗಿ ಶೇಂಗಾದ ಹೋಳಿಗೆ ತಯಾರಿಕೆ ಮಾಡಲಿದ್ದಾರೆ. ಹಳ್ಳಿಯಲ್ಲಿ
ಮಾಡಿದ ಹೋಳಿಗೆಗಳನ್ನು ಸಿಂಧನೂರು ತಾಲ್ಲೂಕಿನ ಗದ್ರಟಗಿಯ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ 1300ಕ್ಕೂ ಹೆಚ್ಚು ಟ್ರೈನಲ್ಲಿ ಸಂಗ್ರಹಿಸಿ ಜನವರಿ 7ರಂದು ಗವಿಸಿದ್ದೇಶ್ವರ ದಾಸೋಹಕ್ಕೆ ನೀಡಲು ಪ್ಲಾನ್ ಆಗಿದೆ.
ಸಿಂಧನೂರಿನ ಗೆಳೆಯರ ಬಳಗ ಹಿಂದಿನ ಜಾತ್ರಾ ಮಹೋತ್ಸವದ ಮಹಾ ದಾಸೋಹಕ್ಕೆ ಮಾದಲಿ, ಸಿಹಿ ಬೂಂದಿ ಹಾಗೂ ಮಿರ್ಚಿ ಸೇವೆ ಒದಗಿಸಿತ್ತು.
ಜೋಳದ ರೊಟ್ಟಿಗಳ ರಾಶಿ : ಮಹಾ ದಾಸೋಹಕ್ಕಾಗಿ ರೊಟ್ಟಿ ಹಾಗೂ ದವಸ, ಧಾನ್ಯಗಳ ಅರ್ಪಣೆ ಸೇವೆ ಆರಂಭಗೊಂಡಿವೆ. ಬಾಗಲಕೋಟೆಯ ಭಕ್ತರಾದ ಅವಿನಾಶ್, ಅಜಯ್, ಸಂತೋಷ, ನವೀನ್ ಗವಿಮಠಕ್ಕೆ ಹತ್ತು ಸಾವಿರ ರೊಟ್ಟಿ ಹಾಗೂ ದವಸ, ಧಾನ್ಯಗಳನ್ನು ಅರ್ಪಿಸಿದರು.
ಒಟ್ಟಿನಲ್ಲಿ ದಕ್ಷಿಣ ಕಾಶಿಯಾದ ಗವಿಸಿದ್ದೇಶ್ವರ ಜಾತ್ರೆಗೆ ಕೆಲವೇ ದಿನಗಳು ಬಾಕಿಯಿದ್ದು, ಜಾತ್ರೆಗಾಗಿ ಸಕಲ ಸಿದ್ದತೆ ನಡೆದಿದೆ. ತಾವು ಕೂಡ ಜಾತ್ರೆಗೆ ಬನ್ನಿ ಅಜ್ಜನ ದಾಸೋಹದಲ್ಲಿ ಊಟ ಮಾಡಿ ಶೇಂಗಾದ ಹೋಳಿಗೆಯ ರುಚಿಯನ್ನ ಸವಿಯಿರಿ!