ಜೆಡಿಎಸ್ ಚುನಾವಣಾ ಟಿಕೆಟ್ ಯಾರಿಗೆ ..? : ನಿಖಿಲ್ ರಿಂದ ಹೊರಬಿತ್ತು ಮಾಹಿತಿ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶೇ. 30 ರಷ್ಟುಯುವಕರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ಪಕ್ಷದ ಹಿರಿಯ ನಾಯಕರಲ್ಲಿ ಮನವಿ ಮಾಡಿರುವುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಮೈಸೂರು(ಅ.20): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶೇ. 30 ರಷ್ಟುಯುವಕರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ಪಕ್ಷದ ಹಿರಿಯ ನಾಯಕರಲ್ಲಿ ಮನವಿ ಮಾಡಿರುವುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ನಡೆಯುತ್ತಿರುವ ಜೆಡಿಎಸ್ (JDS) ಚಿಂತನ- ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯುವಕರು ಹೆಚ್ಚಾಗಿ ರಾಜಕೀಯಕ್ಕೆ (Politics) ಬರಬೇಕು. ಯುವಕರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ಗೆಲ್ಲುವ ಅರ್ಹತೆ ಇರುವ ಯುವ ನಾಯಕರು ಟಿಕೆಟ್ ಕೇಳಬೇಕು. ಈ ನಿಟ್ಟಿನಲ್ಲಿ ನಾವು ಕೂಡ ಸರ್ವೇ ಮಾಡುತ್ತಿದ್ದೇವೆ. ಗೆಲ್ಲುವ ಸಾಮರ್ಥ್ಯ ಇರುವವರಿಗೆ ಟಿಕೆಟ್ ಕೊಡುತ್ತೇವೆ ಎಂದರು.
ಮಳವಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಆಕೆಯ ಕುಟುಂಬ ವರ್ಗದವರನ್ನು ನಾನು ಮತ್ತು ಶಾಸಕ ಡಾ.ಕೆ. ಅನ್ನದಾನಿ ಅವರು ಭೇಟಿಯಾಗಿ ಸಾಂತ್ವನ ಹೇಳಿ ಧೈರ್ಯ ತುಂಬಿದೆವು. ಅವರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿಯೂ ಅನ್ನದಾನಿ ಅವರು ಶ್ರಮಿಸಿದ್ದಾರೆ. ಆದರೆ ಸಂಸದೆ ಸುಮಲತಾ ಅಂಬರೀಷ್ ಅವರು ನಾಲ್ಕುದಿನ ಬಿಟ್ಟು ಹೋಗಿದ್ದಾರೆ. ಅದೂ ಕೂಡ ಯಾವುದೋ ಕಾರ್ಯಕ್ರಮಕ್ಕೆ ಹೋಗಿ, ನಂತರ ಅಲ್ಲಿಗೆ ಭೇಟಿ ನೀಡಿದ್ದಾರೆ. ಅವರು ಘಟನೆ ನಡೆದ ದಿನವೇ ಹೋಗಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೆವ್ವದ ಜೊತೆ ಆಣೆ ಪ್ರಮಾಣವೇ
ಮೈಸೂರು : ದೆವ್ವದ ಜೊತೆ ಯಾರಾದರೂ ಆಣೆ ಪ್ರಮಾಣ ಮಾಡಲು ಹೋಗುತ್ತಾರಾ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಸಂಸದೆ ಸುಮಲತಾ ಅಂಬರೀಷ್ ಅವರನ್ನು ಮೂದಲಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆವ್ವದ ಜೊತೆ ಯಾರದರೂ ಆಣೆ ಪ್ರಮಾಣಕ್ಕೆ ಹೋಗುತ್ತರಾ? ಸಂಸದೆ ಮಾತು ಕೇಳಿದ್ರೆ ದೆವ್ವದ ಬಾಯಲಿ ಭಗವದ್ಗೀತೆ ಕೇಳಿದ ರೀತಿ ಆಗುತ್ತಿದೆ. ಜೆ ಡಿ ಎಸ್‌ನ ಶಾಸಕರಾದ ನಾವು ದೈವದ ಮೇಲೆ ಅಪಾರ ನಂಬಿಕೆ ಇಟ್ಟಿದ್ದೇವೆ. ಇಂಥಹವರು ಯಾರೋ ಆಣೆ ಪ್ರಮಾಣಕ್ಕೆ ಕರೆದರೆ ಹೋಗುವುದಕ್ಕೆ ಸಾಧ್ಯವೇ. ಸಂಸದೆ ಸುಮಲತಾ ಅಂಬರೀಷ್ ಅವರ ಹಿಂದೆ, ಮುಂದೆ ಇರುವವರು ರೈತರ ದುಡ್ಡು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಮೊದಲು ಸಂಸದೆ (MP) ರಾಷ್ಟ್ರೀಯ ಹೆದ್ದಾರಿ ಡೀಲ್ ವಿಚಾರದಲ್ಲಿ ತಮ್ಮವರನ್ನು ಏಟ್ರಿಯಾ ಹೋಟೆಲ್‌ಗೆ ಏಕೆ ಕಳುಹಿಸಿದರು ಎಂಬುದನ್ನು ಹೇಳಲಿ. ಯಾರು ಸತ್ಯವಂತರು ಎಂಬುದು ಆಗ ಗೊತ್ತಾಗುತ್ತದೆ. ಸಂಸದರ ಸುತ್ತ ಇರುವವರೆಲ್ಲಾ ರೈತರ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಲೂಟಿ ಮಾಡಿರುವ ಜನ ಎಂದು ಅವರು ದೂರಿದರು.
ನೂರಾರು ಎಕರೆಗೆ ನಕಲಿ ದಾಖಲೆ ಸೃಷ್ಟಿಸಿ ಹಣ ಮಾಡಿದ ದೊಡ್ಡ ಗ್ಯಾಂಗ್ ಸಂಸದರ ಸುತ್ತ ಇದ್ದಾರೆ. ಇವರು ನಮ್ಮ ಶಾಸಕರ ಬಗ್ಗೆ ಮಾತನಾಡುತ್ತಾರೆ. ಇದರಲ್ಲಿ ಅರ್ಥ ಇದೆಯಾ. ಇಂತಹ ಸಂಸದೆ ಕರೆದಾಗ ಹೋಗಿ ಆಣೆ ಪ್ರಮಾಣ ಮಾಡುವ ಪ್ರಮೇಯವೇ ಬರುವುದಿಲ್ಲ. ಈಗ ಸಂಸದರ ವಿರುದ್ಧ ಜನಾಕ್ರೋಶ ಶುರುವಾಗಿದೆ. ಜನರೇ ಅವರಿಗೆ ಪಾಠ ಕಳಿಸುತ್ತಾರೆ ಎಂದು ಅವರು ಕಿಡಿಕಾರಿದರು.
ಸಂಸದರು ಬೆದರಿಕೆ ಹಾಕುವ ರೀತಿ ಮಾತನಾಡುತ್ತಿದ್ದಾರೆ. ನಿನ್ನೆ ಸಂಸದರ ವಿರುದ್ಧ ಪ್ರತಿಭಟನೆ ಸಹ ನಡೆದಿದೆ. ಮಂಡ್ಯ ಜಿಲ್ಲೆಯಲ್ಲಿ ಸಂಸದರ ಬೆಂಬಲಿಗರು ಸಾಕಷ್ಟುಅವ್ಯವಹಾರ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶೇ. 30 ರಷ್ಟುಯುವಕರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ಪಕ್ಷದ ಹಿರಿಯ ನಾಯಕರಲ್ಲಿ ಮನವಿ
- ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ