ಬೆಂಗಳೂರು(ಫೆ.13): ಖಾಸಗಿ ಸುದ್ದಿ ವಾಹಿನಿಗಳಲ್ಲಿ ಅಸಭ್ಯ ಹಾಗೂ ಕೀಳು ಅಭಿರುಚಿಯ ಕಾರ್ಯಕ್ರಮ ಪ್ರಸಾರ ಮಾಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ 30 ಜಿಲ್ಲೆಗಳಲ್ಲೂ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ ಎಂದು ಸರ್ಕಾರ ಹೈಕೊರ್ಟ್‌ಗೆ ಮಾಹಿತಿ ನೀಡಿದೆ.

ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ರಚನೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ನಡೆಸಿತು. ವಿಚಾರಣೆ ವೇಳೆ ಸರ್ಕಾರಿ ವಕೀಲ ವಿ.ಶ್ರೀನಿಧಿ, ಜಿಲ್ಲೆ ಸಮಿತಿ ರಚನೆಯಾದ ದಿನಾಂಕ, ಅವುಗಳು ನಡೆಸಿರುವ ಸಭೆ, ದಾಖಲಾದ ದೂರುಗಳ ಬಗ್ಗೆ ಮಾಹಿತಿ ಒಳಗೊಂಡ ಜ್ಞಾಪನಾ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ವಾಲಿದ್ದ ಕಟ್ಟಡ ಸಂಪೂರ್ಣ ನೆಲಸಮ!

ರಾಜ್ಯ 30 ಜಿಲ್ಲೆಗಳಲ್ಲಿ ಮೇಲ್ವಿಚಾರಣಾ ಸಮಿತಿ ರಚನೆ ಮಾಡಲಾಗಿದೆ. ಪ್ರತಿ ಜಿಲ್ಲಾ ಸಮಿತಿಯೂ ತಲಾ ಒಂದು ಸಭೆ ನಡೆಸಿವೆ. ಮಡಿಕೇರಿಯಲ್ಲಿ ಒಂದು ದೂರು ದಾಖಲಾಗಿದ್ದು, ವಿಚಾರಣೆ ಹಂತದಲ್ಲಿದೆ. ಹಾಸನದಲ್ಲಿ ಎರಡು ದೂರುಗಳು ದಾಖಲಾಗಿದ್ದವು. ಅವುಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಜ್ಞಾಪನಾ ಪತ್ರದಲ್ಲಿ ವಿವರಿಸಲಾಗಿದೆ.

ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಮಾಚ್‌ರ್‍ 31ರ ವೇಳೆಗೆ ಜಿಲ್ಲಾ ಮೇಲ್ವಿಚಾರಣಾ ಸಮಿತಿಗಳು ಎಷ್ಟುಸಭೆಗಳನ್ನು ನಡೆಸಿವೆ? ಎಷ್ಟುದೂರು ದಾಖಲಾದವು? ಅವುಗಳ ಸಂಬಂಧ ಸಮಿತಿ ಕೈಗೊಂಡ ಕ್ರಮಗಳೇನು ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಏಪ್ರಿಲ್‌ಗೆ ಮುಂದೂಡಿತು.

BBMP ಸೋಶಿಯಲ್ ಮೀಡಿಯಾ ನಿರ್ವಹಣೆಗೆ ಲಕ್ಷ ಲಕ್ಷ ಹಣ ಖರ್ಚು!

ಖಾಸಗಿ ಸುದ್ದಿವಾಹಿನಿಗಳಲ್ಲಿ ಅಸಭ್ಯ ಹಾಗೂ ಕೀಳು ಅಭಿರುಚಿಯ ಕಾರ್ಯಕ್ರಮ ಪ್ರಸಾರ ಮಾಡುವುದನ್ನು ನಿಯಂತ್ರಿಸಲು ಈಗಾಗಲೇ ರಾಜ್ಯಮಟ್ಟದ ಮೇಲ್ವಿಚಾರಣಾ ಸಮಿತಿ ರಚಿಸಿರುವ ಸರ್ಕಾರ, ಆ ಕುರಿತು 2019ರ ಡಿ.16ರಂದು ಪ್ರಮಾಣಪತ್ರ ಸಲ್ಲಿಸಿ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು. ಖಾಸಗಿ ಟಿ.ವಿ. ಕಾರ್ಯಕ್ರಮಗಳ ಬಗ್ಗೆ ಯಾವುದಾದರೂ ಆಕ್ಷೇಪವಿದ್ದರೆ ಸಾರ್ವಜನಿಕರು ದೂರವಾಣಿ ಸಂಖ್ಯೆ 080-22028013ಗೆ ಅಥವಾ ವಾಟ್ಸಪ್‌ ಮೂಲಕ (9480841212) ದೂರು ನೀಡಬಹುದು. ಆ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ದೂರುಗಳ ನಿರ್ವಹಣೆಗೆ ದಿನದ 24 ಗಂಟೆ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿ ತೆರೆಯಲಾಗಿದೆ ಎಂದು ಪ್ರಮಾಣಪತ್ರದಲ್ಲಿ ಸರ್ಕಾರ ತಿಳಿಸಿತ್ತು.