ಕೋಲಾರ(ಮಾ.21): ವಿಶ್ವ ವ್ಯಾಪ್ತಿಯಲ್ಲಿ ಹರಡುತ್ತಿರುವ ಮಹಾ ಮಾರಿ ಕಿಲ್ಲರ್‌ ಕರೋನಾ ವೈರಸ್‌ ಹರಡದಂತೆ ಮುಂಜಾಗ್ರತೆಯಾಗಿ ಜಿಲ್ಲಾಧ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬೆನ್ನಲ್ಲೆ ಇಲ್ಲಿನ ಮೂರು ಗಾರ್ಮೆಂಟ್ಸ್‌ ಕಂಪನಿಗಳು ಶುಕ್ರವಾರದಿಂದ ಉತ್ಪಾದನೆ ಪ್ರಾರಂಭಿಸುವ ಮೂಲಕ ಜಿಲ್ಲಾಡಳಿತ ಆದೇಶವನ್ನ ಧಿಕ್ಕರಿಸಿದ ಹಿನ್ನೆಲೆಯಲ್ಲಿ ತಹಸಿಲ್ದಾರ್‌ ಚಂದ್ರಮೌಳೇಶ್ವರ ದಾಳಿ ಮಾಡಿ ಗಾರ್ಮೆಂಟ್ಸ್‌ ಮುಚ್ಚಿಸಿದರು.

ಕರೋನಾ ಸೋಂಕು ಹರಡದಂತೆ ತಡೆಗಟ್ಟಲು ಯಾರು ಗುಂಪಾಗಿ ಸೇರಬಾರದು ಎಂದು ಹೇಳಿ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ. ಆದರೆ ಕೆಜಿಎಫ್‌ ಮುಖ್ಯರಸ್ತೆಯಲ್ಲಿರುವ ಮೂರು ಗಾರ್ಮೆಂಟ್ಸ್‌ ಕಂಪನಿಗಳು ಆದೇಶವನ್ನು ಉಲ್ಲಂಘಿಸಿ ಶುಕ್ರವಾರ ಕೆಲಸವನ್ನು ಪ್ರಾರಂಭಿಸಿದ ಕಾರಣ ನೂರಾರು ಮಂದಿ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದರು.

3 ಪ್ಯಾಕ್ಟರಿಗಳ ಬಂದ್‌

ತಹಸೀಲ್ದಾರ್‌ ಚಂದ್ರಮೌಳೇಶ್ವರ್‌ರಿಗೆ ಮಾಹಿತಿ ತಿಳಿದ ತಕ್ಷಣ ಸಬ್‌ಇನ್ಸ್‌ಫೆಕ್ಟರ್‌ ಜಗದೀಶ್‌ರೆಡ್ಡಿ ಹಾಗು ಸಿಬ್ಬಂದಿ ಸಮೇತೆ ಗಾರ್ಮೆಂಟ್ಸ್‌ ಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಗಾರ್ಮೆಂಟ್ಸ್‌ನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ಜಿಲ್ಲಾಧಿಕಾರಿಗಳು ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ, ಕರೋನಾ ಸೋಂಕು ಯಾವ ರೂಪದಲ್ಲಿ ಹೇಗೆ ಹರಡುತ್ತದೋ ಯಾರಿಗೂ ಗೊತ್ತಿಲ್ಲ. ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸಬೇಕೆಂದು ಹೇಳಿ ಗಾರ್ಮೆಂಟ್ಸ್‌ಗಳನ್ನು ಮುಚ್ಚಿಸಿದರು. ಮತ್ತೆ ಗಾರ್ಮೆಂಟ್ಸ್‌ ಆರಂಭಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಹಸು, ಕುರುಗಳ ಮಾರಾಟ

ಪಟ್ಟಣದಲ್ಲಿ ಪ್ರತಿ ಶುಕ್ರವಾರ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುವ ವಾರದ ಸಂತೆಯನ್ನು ತಾಲೂಕು ಆಡಳಿತ ರದ್ದುಗೊಳಿಸಿದ್ದರೂ ಸಹ ಕೆಲವರು ಹಸು, ಕುರಿಗಳನ್ನು ಹಾಗೂ ಕೋಳಿಗಳನ್ನು ಸಂತೆಯಲ್ಲಿ ಮಾರಾಟ ಮಾಡಲು ತಂದಿದ್ದು, ಎಪಿಎಂಸಿ ಪ್ರಾಂಗಣ ಗೇಟ್‌ ಮುಚ್ಚಿದ್ದರಿಂದ ಕೆಲವರು ಶ್ಯಾಂ ಆಸ್ಪತ್ರೆ ಬಳಿ ರಾಜರೋಷವಾಗಿ ತಮ್ಮ ಜಾನುವಾರುಗಳನ್ನು ದಲ್ಲಾಳಿಗಳ ಮೂಲಕ ಮಾರಾಟ ಮಾಡುತ್ತಿದ್ದು ಕಂಡು ಬಂತು. ಬಳಿಕ ಅಧಿಕಾರಿಗಳ ದಾಳಿಯಿಂದ ಎಚ್ಚೆತ್ತುಕೊಂಡು ಸ್ಥಳದಿಂದ ಕಾಲ್ಕಿತ್ತರು.