Uttara Kannada: ನೆರೆಮನೆಯಾತನ ಕಾಟದಿಂದ ಗೃಹಬಂಧನದಲ್ಲಿ ಮೂರು ಕುಟುಂಬ!

  • ಜನರು ಸಾಗುವ ಕಾಲು ದಾರಿಯಲ್ಲಿ ಕಂಪೌಂಡ್ ಕಟ್ಟಿ ವ್ಯಕ್ತಿಯಿಂದ ದರ್ಪ
  • ನೆರೆಮನೆಯಾತನ ಕಾಟದಿಂದ ಗೃಹ ಬಂಧನದಲ್ಲಿವೆ ಮೂರು ಕುಟುಂಬಗಳು
  • ನ್ಯಾಯಕ್ಕಾಗಿ ಬಡ ಕುಟುಂಬಗಳು ಗೋಗರೆದ್ರೂ ಸುಮ್ಮನಿದ್ದಾರೆ ಅಧಿಕಾರಿಗಳು
3 Families Under House Arrest Because the neighbor has blocked the way karwaar rav

ಕಾರವಾರ (ಫೆ.20) : ಆ ಕುಟುಂಬಗಳು ಹಲವು ವರ್ಷಗಳಿಂದ ಆ ಕಾಲುದಾರಿಯನ್ನೇ ಬಳಸುತ್ತಿದ್ದರು‌. ಆದರೆ, ನೆರೆಮನೆಯಾತನ ಕಾಟದಿಂದ ದಾರಿಯಿಲ್ಲದೇ ಆ ಕುಟುಂಬಗಳು ಗೃಹಬಂಧನದಲ್ಲಿ ಬೀಳುವಂತಾಗಿದೆ. 

ಕಾಲು ದಾರಿಯಲ್ಲಿ ಕಂಪೌಂಡ್ ಕಟ್ಟುವ ಮೂಲಕ ಪಕ್ಕದ ಮನೆಯವರು ತೋರಿಸಿದ ದರ್ಪದಿಂದ‌ ಈ ಕುಟುಂಬಗಳ‌ ಹಿರಿಯರು ಕೆಲಸಕ್ಕೆ, ಮಕ್ಕಳು ಶಾಲೆಗಳಿಗೆ ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.‌ ಅಧಿಕಾರಿಗಳು ಬಂದು ಹೇಳಿದ್ರೂ ಕ್ಯಾರೇ ಎನ್ನದ ಈ ವ್ಯಕ್ತಿಯ ಕಾಟದಿಂದ ಮುಕ್ತಿ ನೀಡಲು ಈ ಕುಟುಂಬಗಳು ಗೋಗರೆಯುತ್ತಿವೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ...

Shivaji Jayanti:ಕಾರವಾರದಲ್ಲಿ ಅದ್ದೂರಿ ಶಿವಾಜಿ ಮಹಾರಾಜರ ಜಯಂತಿ: ಇಡೀ ನಗರವೇ ಕೇಸರಿಮಯ

 

ಹೌದು, ನೆರೆಮನೆಯಾತನ ದರ್ಪದಿಂದ ಮೂರು ಕುಟುಂಬಗಳು ಗೃಹಬಂಧನದಲ್ಲಿ ಬಿದ್ದಿರುವಂತಹ ಅಮಾನವೀಯ ಘಟನೆ ಉತ್ತರಕನ್ನಡ‌(Uttarakannada) ಜಿಲ್ಲೆಯ ಕಾರವಾರದ ಅಂಗಡಿವಾಡ(Angadivada) ಕಡವಾಡ(Kadavada)ಲ್ಲಿ ನಡೆದಿದೆ. ನೂರಕ್ಕೂ ಹೆಚ್ಚು ವರ್ಷಗಳಿಂದ ದಿಗಂಬರ್ ದೇವರಾಯ ನಾಯ್ಕ್(Digambar devaraya naik), ರವಿ ದೇವರಾಯ್ ನಾಯ್ಕ್(Ravi devaraya naik), ಸಂತೋಷ್ ದೇವರಾಯ್ ನಾಯ್ಕ್(Santosh devaraya naik) ಕುಟುಂಬಗಳು ತಮ್ಮ ಮನೆಯ ಪಕ್ಕದಲ್ಲಿರುವ ಕಾಲು ದಾರಿಯನ್ನೇ ಬಳಸುತ್ತಿದ್ದರು. ಯಾವಾಗ ಗ್ರಾಮ ಪಂಚಾಯತ್ ವತಿಯಿಂದ ರಸ್ತೆ ಅಭಿವೃದ್ಧಿ ಮಾಡುವ ಹಿನ್ನೆಲೆಯಲ್ಲಿ ಕಾಲುದಾರಿ ಸಂಪರ್ಕ ಮಾಡುವ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಿ ಈ ಕಾಲುದಾರಿಯನ್ನೂ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲು ನಿರ್ಧಾರ ಮಾಡಲಾಯ್ತೋ ಆಗ ಅಡ್ಡಗಾಲಿಟ್ಟದ್ದೇ ದಾಮೋದರ್ ನಾಯ್ಕ್(Damodar naik). ದಿಗಂಬರ್ ದೇವರಾಯ ನಾಯ್ಕ್, ರವಿ ದೇವರಾಯ್ ನಾಯ್ಕ್ ಹಾಗೂ ಸಂತೋಷ್ ದೇವರಾಯ್ ನಾಯ್ಕ್ ಕುಟುಂಬಗಳು ಒಂದೇ ಕಡೆ ನೆಲೆಸಿದ್ದು, ಇವರ ನೆರೆಮನೆ ವ್ಯಕ್ತಿಯೇ ದಾಮೋದರ್ ನಾಯ್ಕ್. ಕಾಲುದಾರಿಯನ್ನು ಕಾಂಕ್ರೀಟ್ ರಸ್ತೆ ಮಾಡುವ ವಿಚಾರ ಈತನ ಕಿವಿಗೆ ಬೀಳುತ್ತಿದ್ದಂತೇ ಕಾಲುದಾರಿ ತನಗೆ ಸೇರಿದ ಜಾಗ, ಇಲ್ಲಿ ಯಾರೂ ಹೋಗಬಾರದು ಎಂದು ರೌಡಿಸಂ ಮೂಲಕ ಕಂಪೌಂಡ್ ಕಟ್ಟಿ ಈ ಮೂರು ಕುಟುಂಬಗಳನ್ನು ಗೃಹ ಬಂಧನದಲ್ಲಿರಿಸಿದ್ದಾನೆ. ಕಳೆದ 15 ದಿನಗಳಿಂದ ಈ ಮೂರು ಕುಟುಂಬಗಳು ಮನೆಯಿಂದ ಹೊರಕ್ಕೆ ಹೋಗಲಾಗದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ತಮ್ಮ ಪ್ರತಿಯೊಂದು ಕೆಲಸಕ್ಕೂ ಬೇರೆ ಮನೆಯ ಕಂಪೌಂಡ್‌ ಹಾರಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ತಮಗಾಗುತ್ತಿರುವ ಅನ್ಯಾಯಕ್ಕೆ ಈ ಕುಟುಂಬಗಳು ಕಣ್ಣೀರು ಹಾಕುತ್ತಿವೆ.

ಅಂದಹಾಗೆ, ಈ ಮೂರು ಸಂತ್ರಸ್ತ ಕುಟುಂಬಗಳ ಪೈಕಿ ಓರ್ವರಿಗೆ ಇತ್ತೀಚೆಗಷ್ಟೇ ಓಪನ್ ಹಾರ್ಟ್ ಸರ್ಜರಿ(Open heart surgery)ಯೂ ಆಗಿತ್ತು. ಈ ವ್ಯಕ್ತಿಗೂ ಚಿಕಿತ್ಸೆ ಅಗತ್ಯವಾಗಿ ಬೇಕಂದ್ರೂ ಮನೆಯವರು ಯಾರೂ ತಮ್ಮ ಕಂಪೌಂಡ್‌ನಿಂದ ಹೊರಕ್ಕೆ ಹೋಗಲಾದಂತಹ‌ ಸ್ಥಿತಿ ನಿರ್ಮಾಣವಾಗಿದೆ. ಕೆಲಸಕ್ಕೆ ಹೋಗುವ ಯುವಕ, ಯುವತಿಯರು, ಶಾಲೆ- ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಕೂಡಾ ಈ ಮನೆಯಲ್ಲಿದ್ದು, ರಸ್ತೆಯಿರದ ಕಾರಣ ಮನೆಯಲ್ಲೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಮಾರುಕಟ್ಟೆಯಿಂದ ಏನೇ ತರಬೇಕಂದ್ರೂ ಅಥವಾ ಕೆಲಸಕ್ಕೆ ಹೋಗಬೇಕಂದ್ರೂ ಸದ್ಯಕ್ಕೆ‌ ಮನೆಯ ಹಿರಿಯರು ಹಾಗೂ ಯುವಕರು ಕಂಪೌಂಡ್ ಹಾರಿಕೊಂಡೇ‌ ತೆರಳುತ್ತಿದ್ದು, ಮಹಿಳೆಯರು ಮಾತ್ರ ಎಲ್ಲಿಗೂ ಹೋಗಲಾಗದೆ ಮನೆಯಲ್ಲೇ ಇರಬೇಕಾದ ಸ್ಥಿತಿಯಿದೆ. ಈ ಕುಟುಂಬಗಳ ಪರಿಸ್ಥಿತಿ ನೋಡಿ ಇನ್ನೋರ್ವ ನೆರೆಮನೆಯ ವ್ಯಕ್ತಿ ತಮ್ಮ ಮನೆಯ ಹಿಂಬಂದಿ ದಾರಿಯ ಮೂಲಕ ಸದ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಶೀಘ್ರದಲ್ಲಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸೂಚಿಸಿದ್ದಲ್ಲೇ, ಮುಂದಿನ ದಿನಗಳಲ್ಲಿ ಈ ರಸ್ತೆಯನ್ನೂ ಮುಚ್ಚುವುದಾಗಿ ತಿಳಿಸಿದ್ದಾರೆ. 

ದಿಗಂಬರ್ ದೇವರಾಯ ನಾಯ್ಕ್, ರವಿ ದೇವರಾಯ್ ನಾಯ್ಕ್ ಹಾಗೂ ಸಂತೋಷ್ ದೇವರಾಯ್ ನಾಯ್ಕ್ ಕುಟುಂಬಗಳು ತಾವು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಸಾಕಷ್ಟು ಬಾರಿ  ಅಧಿಕಾರಿಗಳ ಮೊರೆ ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗೂ ಎರಡ್ಮೂರು ಬಾರಿ ಮನವಿ ಸಲ್ಲಿಸಿದ್ದು, ಇಲ್ಲಿಯವರೆಗೆ ಆಶ್ವಾಸನೆ ಬಿಟ್ರೆ ಬೇರೇನೂ ದೊರಕಿಲ್ಲ. ಈ ಕಾರಣದಿಂದ ತಮಗೆ ಸಾಗಲು ಕಾಲುದಾರಿ ನೀಡುವ ಮೂಲಕ ನ್ಯಾಯ ಒದಗಿಸಲು ಈ ಕುಟುಂಬ ಕೇಳಿಕೊಂಡಿವೆ.

 

ಕಾಂಗ್ರೆಸ್‌ ಭಯೋತ್ಪಾದನಾ ಸಂಘಟನೆ: ನಳಿನ್ ಕುಮಾರ್ ಕಟೀಲ್‌

ಒಟ್ಟಿನಲ್ಲಿ ನೆರೆಮನೆಯ ದಾಮೋದರ ನಾಯ್ಕ್ ಎಂಬಾತ ತೋರಿಸುತ್ತಿರುವ ದರ್ಪದಿಂದಾಗಿ ಮೂರು ಕುಟುಂಬಗಳು ದಾರಿಯಿಲ್ಲದೇ ಗೃಹಬಂಧನದಲ್ಲಿದ್ದು, ನ್ಯಾಯಕ್ಕಾಗಿ ಅಧಿಕಾರಿಗಳಲ್ಲಿ ಗೋಗರೆಯುತ್ತಿವೆ. ಇನ್ನಾದ್ರೂ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಕುಟುಂಬಗಳಿಗೆ ನ್ಯಾಯ ಒದಗಿಸಿ, ಗೃಹ ಬಂಧನದಿಂದ ಮುಕ್ತಿ ನೀಡಬೇಕಿದೆ.

ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ

Latest Videos
Follow Us:
Download App:
  • android
  • ios