ಮತ್ತೆ ಕೊರೋನಾ ಅಟ್ಟಹಾಸ: ಬಂಟ್ವಾಳದ ಮೂವರಿಗೆ ದೃಢ
ಕಳೆದ ಎರಡು ದಿನಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗದ ದಕ್ಷಿಣ ಕನ್ನಡದಲ್ಲಿ ಶನಿವಾರ ಒಂದೇ ಕುಟುಂಬದ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ.
ಮಂಗಳೂರು(ಮೇ 10): ಕಳೆದ ಎರಡು ದಿನಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗದ ದಕ್ಷಿಣ ಕನ್ನಡದಲ್ಲಿ ಶನಿವಾರ ಒಂದೇ ಕುಟುಂಬದ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ.
ಬಂಟ್ವಾಳ ಕೆಳಪೇಟೆಯ 70 ವರ್ಷದ ಮಹಿಳೆ, 60 ವರ್ಷದ ಮಹಿಳೆ ಮತ್ತು 30 ವರ್ಷದ ಪುರುಷನ ಗಂಟಲುದ್ರವದ ಪರೀಕ್ಷಾ ಫಲಿತಾಂಶ ಶನಿವಾರ ಲಭಿಸಿದ್ದು ಪಾಸಿಟಿವ್ ಆಗಿದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ತಿಳಿಸಿದ್ದಾರೆ. ಮೂವರೂ ಜಿಲ್ಲೆಯ ಕರೋನಾ ವೈರಸ್ ಚಿಕಿತ್ಸೆಗಾಗಿ ಗೊತ್ತುಪಡಿಸಿದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ನಿ ಮಕ್ಕಳ ನೋಡಲು ಟ್ರಕ್‌ನಲ್ಲಿ ಬಂದ ಬಾಗಲಕೋಟೆ ಕಾರ್ಮಿಕ!
ಆಸ್ಪತ್ರೆ ಮೂಲ: ಫಸ್ಟ್ ನ್ಯೂರೊ ಆಸ್ಪತ್ರೆಯ ಮೂಲದಿಂದ ಸೋಂಕು ತಗುಲಿಸಿಕೊಂಡು ಸಾವಿಗೀಡಾದ ಬಂಟ್ವಾಳ ಕೆಳಪೇಟೆಯ 50ರ ಹರೆಯದ ಮಹಿಳೆಯ (ಮೊದಲ ಸಾವು ಪ್ರಕರಣ) ಪಕ್ಕದ ಮನೆಯ 69 ವರ್ಷದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ ಈ ಮೂವರಿಗೂ ಸೋಂಕು ತಗುಲಿದೆ. 69 ವರ್ಷದ ವ್ಯಕ್ತಿಗೆ ಮೇ 1ರಂದು ಸೋಂಕು ದೃಢಪಟ್ಟಿತ್ತು. ಆಗಲೇ ಅವರ ಮನೆಯ 8 ಮಂದಿ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿತ್ತು. ಸದ್ಯ ಅವರಲ್ಲಿ ಮೂವರಿಗೆ ಕೊರೋನಾ ಬಂದಿದೆ. ಉಳಿದವರು ಇನ್ನೂ ಕ್ವಾರಂಟೈನ್‌ನಲ್ಲಿದ್ದಾರೆ.
ಕೆಳಪೇಟೆಯಲ್ಲಿ 9 ಪ್ರಕರಣ: ಶನಿವಾರದ ಮೂರು ಹೊಸ ಪ್ರಕರಣಗಳನ್ನು ಸೇರಿಸಿದರೆ ಬಂಟ್ವಾಳ ಕೆಳಪೇಟೆಯೊಂದರಲ್ಲೇ ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಈಗಾಗಲೇ ಈ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಇನ್ನಷ್ಟುಮಂದಿಗೆ ಸೋಂಕು ಹರಡಲಿದೆಯೇ ಎನ್ನುವ ಆತಂಕವೂ ಇಲ್ಲಿ ಸೃಷ್ಟಿಯಾಗಿದೆ.
ಪಾಸ್ ಇಲ್ಲ, ಮಾಸ್ಕ್ ಇಲ್ಲ, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕ ಮೇಲೆ ಕೇಸ್!
ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 31 ಪ್ರಕರಣಗಳು ದಾಖಲಾಗಿದ್ದು, ಅವರಲ್ಲಿ 13 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾಜ್‌ರ್ ಆಗಿದ್ದಾರೆ. ಮೂವರು ಮೃತಪಟ್ಟಿದ್ದು, ಪ್ರಸ್ತುತ 15 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರು ಮಹಿಳೆಯರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಉಳಿದೆಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ.
ಕಂಟಕವಾದ ಆಸ್ಪತ್ರೆ
ಪಡೀಲ್‌ನ ಫಸ್ಟ್ ನ್ಯೂರೋ ಆಸ್ಪತ್ರೆ ಇದೀಗ ಜಿಲ್ಲೆಯ ಮಟ್ಟಿಗೆ ಕಂಟಕವಾಗಿ ಪರಿಣಮಿಸಿದೆ. ಏಪ್ರಿಲ್ 19ರಿಂದ ದೃಢಪಟ್ಟಎಲ್ಲ ಪ್ರಕರಣಗಳು ನೇರವಾಗಿ ಅಥವಾ ಪರೋಕ್ಷವಾಗಿ ಆ ಆಸ್ಪತ್ರೆಯೊಂದಿಗೆ ಸಂಪರ್ಕ ಹೊಂದಿದವರೇ ಆಗಿದ್ದಾರೆ. ಇದುವರೆಗೆ ಒಟ್ಟು 17 ಮಂದಿ ಆಸ್ಪತ್ರೆ ಮೂಲದಿಂದ ಸೋಂಕಿತರಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಆದರೆ ಇನ್ನೂ ಕೂಡ ಆಸ್ಪತ್ರೆ ಮೇಲೆ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.
ಕೊರೋನಾ ಅಂಕಿ ಅಂಶ
ಒಟ್ಟು ಪ್ರಕರಣಗಳು- 31
ಡಿಸ್ಚಾರ್ಜ್ ಆದವರು- 13
ಸಾವು- 3
ಹೊರಗಿನ ಜಿಲ್ಲೆಯ ರೋಗಿಗಳು- 6
ಸಕ್ರಿಯ ಪ್ರಕರಣಗಳು- 15